ರಾಂಚಿ: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರು ಜಾರ್ಖಂಡ್ನ ಗೊಡ್ಡಾದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರ ಪಾದಗಳನ್ನು ತೊಳೆದು ಆ ನೀರನ್ನು ಸೇವಿಸಿದ ಘಟನೆ ನಡೆದಿದೆ. ನಿಶಿಕಾಂತ್ ದುಬೆ ಫೋಟೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈಗ ಅದು ವೈರಲ್ ಆಗಿದ್ದು, ಸಾಕಷ್ಟು ಟ್ರೋಲ್ ಆಗುತ್ತಿದ್ದು, ಈ ಘಟನೆ ಸಾಕಷ್ಟು ವಿಮರ್ಶಾತ್ಮಕ ಟೀಕೆಗೆ ಗುರಿಯಾಗಿದೆ.
ಭಾನುವಾರ(ಸೆ.16) ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಪಕ್ಷದ ಹಿರಿಯ ಕಾರ್ಯಕರ್ತರಾಗಿರುವ ಪವನ್ ಸಿಂಗ್ ಅವರು ನನ್ನ ಪಾದ ತೊಳೆದು ಆ ನೀರನ್ನು ಸೇವಿಸಿದ್ದಾರೆ; ಇದರಿಂದಾಗಿ ನಾನು ಪಕ್ಷದ ಅತ್ಯಂತ ಸಣ್ಣ ಕಾರ್ಯಕರ್ತನೆಂಬ ಭಾವನೆ ನನ್ನಲ್ಲಿ ಮೂಡಿದೆ. ಈ ರೀತಿಯ ಅವಕಾಶ ನನಗೂ ಮುಂದೆ ಸಿಗಲಿ. ನಾನೂ ಪಾದ ಪೂಜೆ ನಡೆಸಿ ಪೂಜಾ ಜಲ ಸೇವಿಸುವ ಅವಕಾಶ ನನಗೂ ಬರಲಿ ಎಂದು ದುಬೆ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಈ ಬಗ್ಗೆಯೂ ಪ್ರತಿಕ್ರಿಸಿರುವ ದುಬೆ, ಇದರಲ್ಲಿ ತಪ್ಪೇನಿದೆ, ಯಾರಾದರೂ ನಿಮ್ಮ ಪಾದಪೂಜೆ ನಡೆಸಿ ನೀರು ಸೇವಿಸಲು ಬಯಸಿದರೆ ತಪ್ಪೇನೂ ಇಲ್ಲ. ಇದಕ್ಕೆ ರಾಜಕೀಯ ಬಣ್ಣ ಹಚ್ಚುವ ಅಗತ್ಯವಿಲ್ಲ. ಅತಿಥಿಗಳ ಪಾದಪೂಜೆಯನ್ನು ನಡೆಸಿದರೆ ಅದರಲ್ಲಿ ತಪ್ಪೇನಿದೆ? ನೀವು ಬೇಕಿದ್ದರೆ ಮಹಾಭಾರತದಲ್ಲಿನ ಕಥೆಗಳನ್ನು ಓದಿ ಎಂದು ಬಿಜೆಪಿ ಸಂಸದ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ಪಾದಪೂಜೆಯ ಮಹತ್ವದ ಬಗ್ಗೆ ಟೀಕಾಕಾರಲ್ಲಿ ಅಜ್ಞಾನ ಇದೆ ಎಂದು ದುಬೆ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.