ಮುಂಬೈ: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಷಾ, ಕಳೆದ ಐದು ವರ್ಷಗಳಲ್ಲಿ ನಾವು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದೇವೆ. ರಾಷ್ಟ್ರೀಯ ಭದ್ರತೆ ಖಚಿತ ಪಡಿಸಿದ್ದೇವೆ. ರೈತರ ಅಭಿವೃದ್ಧಿಗೆ ಹಲವಾರು ಯೋಜನೆ ರೂಪಿಸಿದ್ದೇವೆ. ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಕೇಸರಿ ರಂಗು ಹೆಚ್ಚಾಗಲಿದೆ ಎಂದು ಅಮಿತ್ ಶಾ ಸ್ಪಷ್ಟಪಡಿಸಿದರು.
ಇದೇ ವೇಳೆ ಮಿತ್ರ ಪಕ್ಷ ಶಿವಸೇನೆ ಮುಂದಿನ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಯೊಂದಿಗೆ ಇರಲಿದೆ. ಈ ಸಂಬಂಧ ಅವರೊಂದಿಗೆ ಮಾತುಕತೆ ನಡೆದಿದೆ. ಪ್ರತಿಪಕ್ಷಗಳು ಮಹಾಘಟಬಂಧನ ಹೆಸರಿನಲ್ಲಿ ಮಾಡಿಕೊಳ್ಳುತ್ತಿರುವ ಮೈತ್ರಿಕೂಟದಲ್ಲಿ ಪರಸ್ಪರ ವಿಶ್ವಾಸ, ನಂಬಿಕೆಯೇ ಇಲ್ಲ. ಈ ಮೈತ್ರಿಕೂಟ ಕೇವಲ ಭ್ರಮೆ, ಅದು ಯಾವುದೇ ಕಾರಣಕ್ಕೂ ಅಸ್ತಿತ್ವಕ್ಕೆ ಬರಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳ, ಈಶಾನ್ಯದಲ್ಲಿ ಮತ್ತು ಒಡಿಶಾದಲ್ಲೂ ಈ ಬಾರಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಅಮಿತ್ ಶಾ ಹೇಳಿದರು.
ಮುಂದುವರೆದು ಮಾತನಾಡಿದ ಅವರು, "ರಾಜಸ್ಥಾನ, ಛತ್ತೀಸ್'ಘಡ ಮತ್ತು ಮಧ್ಯಪ್ರದೇಶ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಜನತೆ ಬಿಜೆಪಿ ಪರವಾಗಿ ನಿಲ್ಲದೇ ಇರಬಹುದು. ಆದರೆ ವಿಧಾನಸಭೆ ಚುನಾವಣೆ ಫಲಿತಾಂಶವೇ 2019ರ ಲೋಸಭೆ ಚುನಾವಣೆಯಲ್ಲೂ ಮರುಕಳಿಸಲಿದೆ ಎಂದು ಆಲೋಚಿಸುವುದು ತಪ್ಪು. ಎರಡೂ ಚುನಾವಣೆ ಫಲಿತಾಂಶಗಳೂ ಬೇರೆ ಬೇರೆ ವಿಷಯಗಳ ಮೇಲೆ ನಿರ್ಧರಿತವಾಗಲಿದೆ" ಎಂದು ಅಮಿತ್ ಶಾ ಹೇಳಿದರು.