ನವದೆಹಲಿ: ಶನಿವಾರ ಬೆಳಿಗ್ಗೆ ಬಿಹಾರದಲ್ಲಿ ಪ್ರವಾಹದಿಂದಾಗಿ ಸಾವಿನ ಸಂಖ್ಯೆ 92 ಕ್ಕೆ ತಲುಪಿದೆ. ಇದುವರೆಗೆ 12 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 26 ಲಕ್ಷ ಜನರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.ಪ್ರವಾಹ ಪೀಡಿತರಿಗೆ ಪರಿಹಾರ ಕಾರ್ಯಾಚರಣೆಯನ್ನು ರಾಜ್ಯ ಸರ್ಕಾರ, ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತೀವ್ರಗೊಳಿಸಿದೆ.
ಸೀತಾಮರ್ಹಿಯಲ್ಲಿ ಒಂದರಲ್ಲೇ ಪ್ರವಾಹ ಮತ್ತು ಮಳೆ ಸಂಬಂಧಿತ ಘಟನೆಗಳಿಂದ 27 ಜನರು ಸಾವನ್ನಪ್ಪಿದ್ದಾರೆ. ಮಧುಬಾನಿಯಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ, ನಂತರ ಅರೇರಿಯಾದಲ್ಲಿ 12, ಶಿಯೋಹಾರ್‌ನಲ್ಲಿ 10, ದರ್ಬಂಗಾ ಮತ್ತು ಪೂರ್ಣೀಯಾದಲ್ಲಿ ತಲಾ ಒಂಬತ್ತು, ಕಿಶನ್‌ಗಂಜ್‌ನಲ್ಲಿ ಐದು, ಸುಪಾಲ್‌ನಲ್ಲಿ ಮೂರು, ಪೂರ್ಣಿ ಚಂಪಾರನ್ ಮತ್ತು ಸಹರ್ಸಾದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ.ನವಾಡಾ ಜಿಲ್ಲೆಯಲ್ಲಿ, ಶಾಲೆಯಲ್ಲಿ ಮಿಂಚಿನ ಹೊಡೆತದಿಂದ ಎಂಟು ಮಕ್ಕಳು ಸಾವನ್ನಪ್ಪಿದರು ಮತ್ತು 13 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಇರುವ ಸಂದರ್ಭದಲ್ಲಿ ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಸೂಪರ್ 30 ಸಿನಿಮಾವನ್ನು ವಿಕ್ಷಿಸುತ್ತಿರುವ ಬಗ್ಗೆ ವರದಿಗಳು ಬಂದ ಹಿನ್ನಲೆಯಲ್ಲಿ ಪ್ರತಿಪಕ್ಷಗಳು ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದವು. ಇದಕ್ಕೆ ಪ್ರತಿಕ್ರಿಯಿಸಿರುವ ಸುಶೀಲ್ ಕುಮಾರ್ ಮೋದಿ ' ಸೂಪರ್ 30 'ಚಿತ್ರ ನೋಡಿದ್ದಕ್ಕಾಗಿ ನನ್ನನ್ನು ನಿಂದಿಸಲಾಗಿದೆ. ಇಂದು ಇಂಗ್ಲಿಷ್ ಚಾನೆಲ್ 'ರಾಜ್ಯ ಪ್ರವಾಹಕ್ಕೆ ಸಿಲುಕಿದಾಗ, ಡಿವೈ ಸಿಎಂ ಚಲನಚಿತ್ರವನ್ನು ನೋಡುತ್ತಿದ್ದಾರೆ' ಎಂದು ತೋರಿಸುತ್ತಿದ್ದಾರೆ. ಏಕಕಾಲದಲ್ಲಿ ಹಲವಾರು ಕಾರ್ಯಗಳನ್ನು ಮಾಡಬಹುದು, ನಾವು ಪ್ರವಾಹ ಪೀಡಿತ ಜನರಿಗೆ ಸಹಾಯ ಮಾಡುತ್ತಿದ್ದೇವೆ ಮತ್ತು ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ. ಎಂದು ಹೇಳಿದರು.