ಬೆಂಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಪ್ರತಿಪಕ್ಷಗಳು, ವಿವಿಧ ಸಂಘಟನೆಗಳು ಇಂದು ಕರೆ ನೀಡಿರುವ ಭಾರತ್ ಬಂದ್ಗೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬೆಂಬಲ ಘೋಷಿಸಿದ್ದು, ರಾಜ್ಯಾದ್ಯಂತ ಸರ್ಕಾರಿ ಬಸ್, ಆಟೋ, ಟ್ಯಾಕ್ಸಿ ಸೇವೆ ವ್ಯತ್ಯಯವಾಗಲಿದೆ. ವೈದ್ಯಕೀಯ ಸೇವೆಗಳು ಎಂದಿನಂತೆ ಮುಂದುವರಿಯಲಿವೆ.
ರಾಜ್ಯದಲ್ಲಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ರಾಜ್ಯ ಸಮಿತಿ ಹಾಗೂ ಕೆಎಸ್ಆರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಷನ್, ಓಲಾ ಮತ್ತು ಊಬರ್ ಚಾಲಕರ ಸಂಘ, ಕೆಲ ಕನ್ನಡ ಪರ ಸಂಘಟನೆಗಳು, ಕನ್ನಡ ಚಳವಳಿ ವಾಟಾಳ್ ಪಕ್ಷ, ಸಿಐಟಿಯು ಸಂಯೋಜಿತ KSRTC ಹಾಗೂ ಬಿಎಂಟಿಸಿ ನೌಕರರ ಸಂಘಟನೆ, ಕರ್ನಾಟಕ ಜ್ಯೂವೆಲ್ಲರಿ ಅಸೋಸಿಯೇಷನ್ ಭಾರತ್ ಬಂದ್ಗೆ ತಮ್ಮ ಬೆಂಬಲ ವ್ಯಕ್ತಪಡಿಸಿವೆ.
ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಭಾರತ್ ಬಂದ್ ಹಿನ್ನೆಲೆಯಲ್ಲಿ ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಅಧಿಕಾರವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯಾ ಜಿಲ್ಲಾಧಿಕಾರಿಗಳಿಗೆ ವರ್ಗಾಯಿಸಿದೆ. ಕೊಡಗಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ತಿಳಿಸಿದ್ದಾರೆ.
ರಾಜಕೀಯ ಪಕ್ಷಗಳು ಹಾಗೂ ಬಹುತೇಕೆ ಸಂಘಟನೆಗಳು ಬಂದ್ಗೆ ಬೆಂಬಲ ನೀಡಿರುವುದರಿಂದ ರಾಜ್ಯದ ಜನತೆಗೆ ಬಂದ್ ಬಿಸಿ ತಟ್ಟುವ ಸಾಧ್ಯತೆ ಇದೇ. ಹೀಗಾಗಿ ರಾಜ್ಯದೆಲ್ಲೆಡೆ ಬಿಗಿ ಬಂದೋಬಸ್ತ್ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಯಾವುದೆಲ್ಲಾ ಲಭ್ಯವಿಲ್ಲ?
ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಗಳು, ಐಟಿ-ಬಿಟಿ ಖಾಸಗಿ ವಾಹನಗಳು, ವಿಮಾನ ನಿಲ್ದಾಣದ ಟ್ಯಾಕ್ಸಿಗಳು, ಓಲಾ ಮತ್ತು ಊಬರ್ ವಾಹನಗಳು ರಸ್ತೆಗಿಳಿಯದಿರಲು ನಿರ್ಧರಿಸಿವೆ.
ಇವೆಲ್ಲಾ ಲಭ್ಯ:
ತರಕಾರಿ, ಔಷಧಿ, ಆಸ್ಪತ್ರೆಗಳು, ತುರ್ತು ಸೇವೆಗಳು, ವಸತಿಗೃಹ, ಹೋಟೆಲ್ಗಳು, ಮೆಟ್ರೋ, ಆಟೋಗಳು, ಲಾರಿ ಸೇರಿದಂತೆ ಎಲ್ಲಾ ಬಗೆಯ ಸರಕು ಸಾಗಣೆ ವಾಹನಗಳು ಲಭ್ಯ.
ಇನ್ನು ಭಾರತ್ ಬಂದ್ಗೆ ಕರೆ ನೀಡಿರುವುದನ್ನು ವಿರೋಧಿಸಿ ಬೆಂಗಳೂರಿನ ಹಲವು ಅಂಗಡಿ ಮಾಲೀಕರು ಒಂದು ಗಂಟೆ ಹೆಚ್ಚುವರಿ ಕೆಲಸ ಮಾಡಲು ನಿರ್ಧರಿಸಿದ್ದು, 'ಸೆಪ್ಟೆಂಬರ್ 10ರಂದು ಸಾಮಾನ್ಯ ದಿನಕ್ಕಿಂತ ಒಂದು ಗಂಟೆ ಹೆಚ್ಚುವರಿ ತೆರೆಯಲಿದ್ದೇವೆ' ಎಂದು ತಮ್ಮ ಅಂಗಡಿಗಳಲ್ಲಿ ಫಲಕ ಹಾಕಿಕೊಂಡಿದ್ದಾರೆ.