ನವದೆಹಲಿ: ಅಟಲ್ ಪಿಂಚಣಿ ಯೋಜನೆ (ಎಪಿವೈ) ಎಂಬುದು 60 ವರ್ಷದ ನಂತರ ದೇಶದ ಅಸಂಘಟಿತ ವಲಯದ ಕಾರ್ಮಿಕರಿಗೆ ಪ್ರತಿ ತಿಂಗಳು 1,000 ರೂ.ಗಳಿಂದ 5,000 ರೂ.ಗಳವರೆಗೆ ನಿಗದಿತ ಮಾಸಿಕ ಪಿಂಚಣಿ ನೀಡುವ ಒಂದು ಯೋಜನೆಯಾಗಿದೆ. ಈ ಪಿಂಚಣಿ ಯೋಜನೆಯನ್ನು 2015 ರ ಜೂನ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಜಾರಿಗೆ ತರಲಾಗಿದೆ. ಈ ಮೊದಲಿದ್ದ 'ಸ್ವಾವಲಂಬನ್ ಯೋಜನೆ ಎನ್‌ಪಿಎಸ್ ಲೈಟ್' ಬದಲಿಗೆ ಈ ಯೋಜನೆಯನ್ನು ಜಾರಿಗೆ ದ್ತರಲಾಗಿದೆ. ಅಟಲ್ ಪಿಂಚಣಿ ಯೋಜನೆಯನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ನಿರ್ವಹಿಸುತ್ತದೆ. ಇದನ್ನು ದೇಶದ ಎಲ್ಲ ಬ್ಯಾಂಕುಗಳು ಜಾರಿಗೆ ತಂದಿವೆ. ನೀವು ಸಹ ತಿಂಗಳಿಗೆ 210 ರೂ. ಹೂಡಿಕೆ ಮಾಡಿ, ಮಾಸಿಕ 5,000 ರೂ.ಗಳ ಪಿಂಚಣಿ ಪಡೆಯಲು ಬಯಸುತ್ತಿದ್ದರೆ. ಈ ಯೋಜನೆಗೆ ಸಂಬಂಧಿಸಿದ ನಿಯಮಗಳನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ.
ಯೋಜನೆಗೆ ಅರ್ಹತೆ ಏನು ?
18 ರಿಂದ 40 ವರ್ಷದೊಳಗಿನ ಯಾವುದೇ ಭಾರತೀಯ ವ್ಯಕ್ತಿ ಈ ಯೋಜನೆಗೆ ಸೇರಬಹುದು. ನೀವು ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಖಾತೆಯನ್ನು ಹೊಂದಿದ್ದರೆ ನೀವು ಈ ಯೋಜನೆಗೆ ಸೇರಬಹುದು.
ಪೆನ್ಷನ್ ಪಡೆಯಲು ಮಾಡಬೇಕಾದ ಹೂಡಿಕೆ ಎಷ್ಟು?
ಪಿಂಚಣಿ ಪಡೆಯಲು ನೀವು ಪಾವತಿಸಬೇಕಾದ ಮೊತ್ತ ಒಟ್ಟು ಎರಡುವಿಷಯಗಳನ್ನು ಆಧರಿಸಿದೆ. ಮೊದಲನೆಯದಾಗಿ ನೀವು ಯಾವ ವಯಸ್ಸಿನಲ್ಲಿ ಈ ಯೋಜನೆಗೆ ಸೇರುತ್ತಿದ್ದೀರಿ. ಎರಡನೆಯ ಪ್ರಮುಖ ವಿಷಯವೆಂದರೆ 60 ವರ್ಷದ ನಂತರ ನಿಮಗೆ ಎಷ್ಟು ಪಿಂಚಣಿ ಬೇಕು. ಉದಾಹರಣೆಗೆ, ಒಬ್ಬ ವ್ಯಕ್ತಿಯು 18 ವರ್ಷ ವಯಸ್ಸಿನಲ್ಲಿ ಈ ಯೋಜನೆಗೆ ಸೇರಿಕೊಂಡರೆ ಮತ್ತು 60 ವರ್ಷ ವಯಸ್ಸಿನ ನಂತರ ಮಾಸಿಕ 1,000 ರೂ.ಗಳ ಪಿಂಚಣಿ ಬಯಸಿದರೆ, ಅವರು 60 ವರ್ಷ ವಯಸ್ಸಿನವರೆಗೆ ಪ್ರತಿ ತಿಂಗಳು 42 ರೂಪಾಯಿಗಳನ್ನು ಹೂಡಿಕೆ ಮಾಡಬೇಕು. ಇದೇ ವೇಳೆ, ಈ ವ್ಯಕ್ತಿ ಮಾಸಿಕ 5,000 ರೂ.ಗಳ ಪಿಂಚಣಿ ಬಯಸಿದರೆ, ಅವನು 60 ವರ್ಷ ತುಂಬುವವರೆಗೆ ಪ್ರತಿ ತಿಂಗಳು 210 ರೂ. ಈ ಯೋಜನೆಯಡಿ ಹೂಡಿಕೆ ಮಾಡಬೇಕಾಗಲಿದೆ. ಈ ಯೋಜನೆಯಡಿ 1,000 ರೂ, 2,000 ರೂ, 3,000 ರೂ, 4,000 ಮತ್ತು 5,000 ರೂ.ಗಳವರೆಗೆ ಸ್ಥಿರ ಪಿಂಚಣಿ ಪಡೆಯಬಹುದಾಗಿದೆ.
ಈ ಯೋಜನೆಯಡಿ ತೆರಿಗೆ ಉಳಿತಾಯ ಲಾಭ ಸಿಗುತ್ತದೆಯೇ?
ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಎನ್‌ಪಿಎಸ್‌ನಂತೆಯೇ ತೆರಿಗೆ ಉಳಿತಾಯ ಲಾಭ ಪಡೆಯಬಹುದಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿಸಿಡಿ (1 ಬಿ) ಅಡಿಯಲ್ಲಿ, ಈ ಯೋಜನೆಯು ಹೂಡಿಕೆಯ ಮೇಲೆ ತೆರಿಗೆ ಉಳಿತಾಯ ಲಾಭ ಸಿಗುತ್ತದೆ.
ಅವಧಿಗೂ ಮುನ್ನವೇ ಈ ಯೋಜನೆಯಿಂದ ಹೊರಬೀಳಬಹುದೇ?
ಪಿಎಫ್‌ಆರ್‌ಡಿಎ ಈ ಯೋಜನೆಯ ಚಂದಾದಾರರಿಗೆ 60 ವರ್ಷಕ್ಕಿಂತ ಮೊದಲು ಈ ಯೋಜನೆಯಿಂದ ನಿರ್ಗಮಿಸುವ ಆಯ್ಕೆಯನ್ನು ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ನೀಡುತ್ತದೆ. ಉದಾಹರಣೆಗೆ, ಚಂದಾದಾರರು ಅಕಾಲಿಕ ಮರಣ ಹೊಂದಿದರೆ, ಅವರ ಸಂಗಾತಿಗೆ ಮಾಸಿಕ ಪಿಂಚಣಿ ನೀಡಲಾಗುತ್ತದೆ. ಸಂಗಾತಿಯ ಮರಣದ ನಂತರ ಚಂದಾದಾರರ ನಾಮಿನಿಗೆ ಒಂದು ದೊಡ್ಡ ಮೊತ್ತವನ್ನು ನೀಡಲಾಗುತ್ತದೆ. ಇದೆ ವೇಳೆ, ಚಂದಾದಾರರ ಸಾವಿನ ಸಂದರ್ಭದಲ್ಲಿ ಸಂಗಾತಿಯು ಈ ಯೋಜನೆಯಲ್ಲಿ ಹೂಡಿಕೆ ಮಾಡುವುದನ್ನು ಮುಂದುವರೆಸುವ ವಿಕಲ್ಪ ಕೂಡ ಇದರಲ್ಲಿ ಇರಲಿದೆ.