ಮುಂಬೈ: ಸೋಮವಾರ ಮಧ್ಯರಾತ್ರಿ ಮುಂಬೈನ ಮಲಾಡ್ ಪೂರ್ವ ಪ್ರದೇಶದಲ್ಲಿ ಗೋಡೆ ಕುಸಿದ ಪರಿಣಾಮ 12 ಜನರು ಸಾವನ್ನಪ್ಪಿದ್ದು, ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಘಟನೆಯಲ್ಲಿ ಗಾಯಗೊಂಡ ಹಲವಾರು ಜನರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಈ ದುರ್ಘಟನೆ ಪೊಂಪ್ರಿಪಾಡಾ ಪ್ರದೇಶದ ಶಾಲೆಯೊಂದರ ಬಳಿ ನಡೆದಿದ್ದು, ಭಾರಿ ಮಳೆಯಿಂದಾಗಿ ಗೋಡೆ ಕುಸಿದಿದೆ ಎನ್ನಲಾಗಿದೆ. ಈ ಘಟನೆಯಲ್ಲಿ ಹಲವಾರು ಜನರು ಅವಶೇಷಗಳ ಅಡಿಯಲ್ಲಿ ಸಿಕ್ಕಿಬಿದ್ದಿದ್ದಾರೆಂದು ಹೇಳಲಾಗುತ್ತಿದ್ದು, ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆ (ಎನ್‌ಡಿಆರ್‌ಎಫ್), ಸ್ಥಳೀಯ ಅಗ್ನಿಶಾಮಕ ಇಲಾಖೆ ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಈ ಘಟನೆಯ ಬಗ್ಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ತಮ್ಮ ಸಂತಾಪ ವ್ಯಕ್ತಪಡಿಸಿದರಲ್ಲದೆ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರವನ್ನು ಘೋಷಿಸಿದರು.
Pained to know about the loss of lives in Malad Wall Collapse incidence. My thoughts are with families who lost loved ones & prayers for speedy recovery of injured.
₹5 lakh will be given to the kin of deceased.#MumbaiRains— Devendra Fadnavis (@Dev_Fadnavis) July 2, 2019
ಮಹಾರಾಷ್ಟ್ರದಲ್ಲಿ ಒಂದು ವಾರದೊಳಗೆ ಗೋಡೆಗಳು ಕುಸಿದ ಅನೇಕ ಘಟನೆಗಳು ನಡೆದಿವೆ. ಸೋಮವಾರ ರಾತ್ರಿ ಪುಣೆಯ ಅಂಬೆಗಾಂವ್‌ನಲ್ಲಿ ಗೋಡೆಯೊಂದು ಕುಸಿದು ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. ಇದಲ್ಲದೆ ವಿವಿಧ ಸ್ಥಳಗಳಲ್ಲಿ ಭಾರಿ ಮಳೆಯಿಂದಾಗಿ ಗೋಡೆ ಕುಸಿದ ಕಾರಣ, ಇದುವರೆಗೆ 21 ಜನರು ಸಾವನ್ನಪ್ಪಿದ್ದರೆ, ಹಲವಾರು ಮಂದಿ ಗಾಯಗೊಂಡಿದ್ದಾರೆ.
ಮುಂಬೈ ಸೇರಿದಂತೆ ಮಹಾರಾಷ್ಟ್ರದ ಹಲವಾರು ಭಾಗಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಇದರಿಂದ ಹಲವು ಪ್ರದೇಶಗಳಲ್ಲಿ ಗೋಡೆ ಕುಸಿತ ಸಂಭವಿಸಿದರೆ, ಮತ್ತೂ ಕೆಲವು ಪ್ರದೇಶಗಳಲ್ಲಿ ಮರಗಳು ಧರೆಗುರುಲಿವೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಜನರನ್ನು ಎಚ್ಚರಿಕೆಯಿಂದ ಇರುವಂತೆ ಕೋರಲಾಗಿದೆ.