ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ; ಇಂಟರ್ನೆಟ್ ಸೇವೆ ಸ್ಥಗಿತ, ಜ. 5 ರವರೆಗೆ AMU ಬಂದ್

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಹರಡುತ್ತಿರುವ ವದಂತಿಗಳಿಗೆ ಕಿವಿಗೊಡಬೇಡಿ. ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

Last Updated : Dec 16, 2019, 08:29 AM IST
ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ; ಇಂಟರ್ನೆಟ್ ಸೇವೆ ಸ್ಥಗಿತ, ಜ. 5 ರವರೆಗೆ AMU ಬಂದ್ title=
Representational Image: Photo: ZeeNews

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (AMU) ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತವು ಭಾನುವಾರ ರಾತ್ರಿ 10 ರಿಂದ ಸೋಮವಾರ ರಾತ್ರಿ 10 ರವರೆಗೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ.

ಜಿಲ್ಲಾಧಿಕಾರಿ (ಡಿಎಂ) ಚಂದ್ರ ಭೂಷಣ್ ಸಿಂಗ್ ಅವರು ಭಾನುವಾರ ರಾತ್ರಿ ಈ ಆದೇಶ ಹೊರಡಿಸಿದ್ದು, "ಅಲಿಗಢ ನಗರದಲ್ಲಿ ಭಾನುವಾರ ರಾತ್ರಿ 10 ರಿಂದ ಸೋಮವಾರ ರಾತ್ರಿ 10 ಗಂಟೆವರೆಗೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ" ಎಂದು ಹೇಳಲಾಗಿದೆ. ಕೆಲವು ಸಾಮಾಜಿಕ ವಿರೋಧಿ ಅಂಶಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುವ ಕೆಲ ವಿಷಯಗಳು ಅಂತರ್ಜಾಲ ಸೇವೆಗಳನ್ನು ಬಳಸುವ ಜನರಲ್ಲಿ ಹಿಂಸಾಚಾರವನ್ನು ಪ್ರಚೋದಿಸಬಹುದು ಎಂಬುದನ್ನು ನಿರಾಕರಿಸಲಾಗುವುದಿಲ್ಲ, ಆದ್ದರಿಂದ ಇಂತಹ ಉದ್ವಿಗ್ನತೆಯನ್ನು ತಡೆಯುವ ಸಲುವಾಗಿ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ" ಎಂದು ಅವರು ತಿಳಿಸಿದ್ದಾರೆ.

ಆದಾಗ್ಯೂ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಈ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಲಿಗಢ ಪೊಲೀಸರು ತಿಳಿಸಿದ್ದಾರೆ. "ನಮ್ಮ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಕೆಲವು ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದಾರೆ" ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಎಡಿಜಿ)  ಅಜಯ್ ಆನಂದ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಪೌರತ್ವ ಕಾನೂನಿನ ವಿರುದ್ಧದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಪ್ರಸ್ತುತ ಪರಿಸ್ಥಿತಿಯಿಂದಾಗಿ 2020 ರ ಜನವರಿ 5 ರವರೆಗೆ ವಿಶ್ವವಿದ್ಯಾಲಯವನ್ನು ಮುಚ್ಚಲಾಗುವುದು ಎಂದು AMU ರಿಜಿಸ್ಟ್ರಾರ್ ಅಬ್ದುಲ್ ಹಮೀದ್ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಹಮೀದ್, "ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಇಂದು ಚಳಿಗಾಲದ ರಜಾದಿನಗಳನ್ನು ಘೋಷಿಸಿದ್ದೇವೆ. ಜನವರಿ 5 ರಂದು ವಿಶ್ವವಿದ್ಯಾಲಯವು ಮತ್ತೆ ತೆರೆಯುತ್ತದೆ. ಅದರ ನಂತರ ಪರೀಕ್ಷೆಗಳು ನಡೆಯಲಿವೆ" ಎಂದು ಮಾಹಿತಿ ನೀಡಿದರು.

"ಕೆಲವು ವಿದ್ಯಾರ್ಥಿಗಳು ಮತ್ತು ಸಮಾಜ ವಿರೋಧಿ ಅಂಶಗಳಿಂದ ಕಲ್ಲು ತೂರಾಟ ನಡೆಸಿದ ನಂತರ ಕ್ಯಾಂಪಸ್‌ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ನಾವು ಪೊಲೀಸರಿಗೆ ವಿನಂತಿಸಿದ್ದೇವೆ. ಒಂದು ವಾರದ ನಂತರ ಪ್ರಾರಂಭವಾಗಬೇಕಿದ್ದ ಚಳಿಗಾಲದ ರಜೆಯನ್ನು ಈಗಲೇ ಘೋಷಿಸಲಾಗಿದೆ, " ಎಂದವರು ತಿಳಿಸಿದರು.

ಏತನ್ಮಧ್ಯೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಅವರು ಪೌರತ್ವ ತಿದ್ದುಪಡಿ ಕಾಯ್ದೆ(CAA) ಗೆ ಸಂಬಂಧಿಸಿದಂತೆ ಹರಡುತ್ತಿರುವ ವದಂತಿಗಳಿಗೆ ಕಿವಿಗೊಡಬೇಡಿ. ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಪ್ರತಿ ನಾಗರಿಕರ ಸುರಕ್ಷತೆಗೆ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ, ಎಲ್ಲಾ ನಾಗರಿಕರು ಕಾನೂನುಗಳಿಗೆ ಬದ್ಧರಾಗಿರುವುದು ಮುಖ್ಯ ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. 

ಅಲಿಗಢದ ಎಡಿಜಿ ಕಾನೂನು ಮತ್ತು ಸುವ್ಯವಸ್ಥೆ (ಆಗ್ರಾ ವಲಯ) ಅಜಯ್ ಆನಂದ್, "ನಮ್ಮ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು" ಎಂದು ಹೇಳಿದರು. ಉತ್ತರಪ್ರದೇಶದಲ್ಲಿ ಸಂಪೂರ್ಣ ಶಾಂತಿ ಕಾಪಾಡುವ ಸಲುವಾಗಿ ಎಲ್ಲೆಡೆ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
 

Trending News