ನವದೆಹಲಿ: ಆಂಧ್ರಪ್ರದೇಶದ 25 ಸದಸ್ಯರ ಮಂತ್ರಿ ಮಂಡಲದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದ ಒಟ್ಟು ಐವರು ಉಪಮುಖ್ಯಮಂತ್ರಿಗಳನ್ನು ಹೊಂದಲಿದೆ ಎಂದು ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಶುಕ್ರವಾರ ಘೋಷಿಸಿದ್ದಾರೆ. ಈ ಮೂಲಕ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ಸರ್ಕಾರ ಐವರು ಡಿಸಿಎಂಗಳನ್ನು ಹೊಂದಲಿದೆ.
ಅಮರಾವತಿಯ ತಡೆಪಲ್ಲಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ನಡೆಯುತ್ತಿರುವ ವೈಎಸ್ಆರ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಜಗನ್ ರೆಡ್ಡಿ ಈ ಮಹತ್ವದ ನಿರ್ಣಯ ಕೈಗೊಂಡಿದ್ದು, ಶನಿವಾರ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಇದರಲ್ಲಿ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಮತ್ತು ಕಾಪು ಸಮುದಾಯದ ತಲಾ ಓರ್ವ ಉಪ ಮುಖ್ಯಮಂತ್ರಿ ಇರಲಿದ್ದಾರೆ.
ಅಂತೆಯೇ, ರೆಡ್ಡಿ ಸಮುದಾಯವು ಸಂಪುಟದ ಸಿಂಹ ಪಾಲು ಪಡೆಯಬಹುದೆಂಬ ನಿರೀಕ್ಷೆಗಳಿಗೆ ವಿರುದ್ಧವಾಗಿ, ದುರ್ಬಲ ವರ್ಗದ ಶಾಸಕರು ಕ್ಯಾಬಿನೆಟ್ ನಲ್ಲಿ ಸ್ಥಾನ ಪಡೆಯಲಿದ್ದಾರೆ. ಮುಂದಿನ ಸಚಿವ ಸಂಪುಟ ಪುನರ್ರಚನೆಯು ಎರಡು ವರ್ಷಗಳ ಬಳಿಕ, ಸರ್ಕಾರದ ಮಧ್ಯಮ ಅವಧಿಯ ಪರಾಮರ್ಶೆಯ ನಂತರ ಮಾಡಲಾಗುವುದು ಎಂದು ಜಗನ್ ಹೇಳಿದ್ದಾರೆ.