ನವದೆಹಲಿ: ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ. ಸೆಕ್ಷನ್ 497 ಅಸಾಂವಿಧಾನಿಕ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ 150 ವರ್ಷಗಳ ಹಳೆಯ ಕಾನೂನನ್ನು ಅಸಾಂವಿಧಾನಿಕ ಎಂದಿರುವ ಕೋರ್ಟ್ ಗಂಡ ಹೆಂಡತಿಗೆ ಮಾಲೀಕನಲ್ಲ, ಸ್ತ್ರೀ-ಪುರುಷ ಇಬ್ಬರೂ ಸಮಾನರು ಎಂದು ಹೇಳಿದೆ.
ಅನೈತಿಕ ಸಂಬಂಧದ ಕುರಿತು ತೀರ್ಪು ಓದಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಕಾನೂನಿನ ಪ್ರಕಾರ, ಗಂಡನೇ ಎಲ್ಲದಕ್ಕೂ ಮುಖ್ಯಸ್ಥನಲ್ಲ, ಗಂಡ ಹೆಂಡತಿಗೆ ಮಾಲೀಕನಲ್ಲ. ಮಹಿಳೆ, ಪುರುಷ ಇಬ್ಬರೂ ಸಮಾನರು ಎಂದರು. ಮಹಿಳೆಯರನ್ನು ಸಮಾನವಾಗಿ ಗೌರವಿಸಬೇಕು. ಮಹಿಳೆಯರಿಗೆ ಅಗೌರವ ತೋರುವ ಕಾನೂನು ಸಾಂವಿಧಾನಿಕವಲ್ಲ ಎಂದು ಸುಪ್ರೀಂ ಕೋರ್ಟ್ ಸಿಜೆಐ ದೀಪಕ್ ಮಿಶ್ರಾ ಅವರನ್ನೊಳಗೊಂಡ ನಾಲ್ಕು ಮಂದಿ ನ್ಯಾಯಾಧೀಶರ ಪೀಠ ಅಭಿಪ್ರಾಯ ಪಟ್ಟಿದೆ.
ನ್ಯಾಯಪೀಠ ಗುರುವಾರ ನೀಡಿದ ಆದೇಶದಲ್ಲಿ ಅನೈತಿಕ ಸಂಬಂಧ ಕ್ರಿಮಿನಲ್ ಪ್ರಕರಣವಲ್ಲ. ಐಪಿಸಿ ಸೆಕ್ಷನ್ 497 ವ್ಯಭಿಚಾರ ಕಾನೂನು ಖಾಸಗಿ ಹಕ್ಕಿಗೆ ವಿರುದ್ಧವಾಗಿದೆ ಅಲ್ಲದೇ, ಇದು ಮೂಲಭೂತ ಹಕ್ಕುಗಳಲ್ಲಿ ಒಂದಾದ ಸಮಾನತೆಗೂ ಧಕ್ಕೆ ತರಲಿದೆ ಎಂದು ಅಭಿಪ್ರಾಯಪಟ್ಟಿದೆ.
ಐಸಿಸಿ ಸೆಕ್ಷನ್ 497 ಪತ್ನಿ ತನ್ನ ಪ್ರೇಮಿಯೊಂದಿಗೆ ಸಂಬಂಧ ಹೊಂದಿದ್ದರೆ, ಅದನ್ನು ವ್ಯಭಿಚಾರ ಎನ್ನುವ ಅಧಿಕಾರವನ್ನು ಪತಿಗೆ ನೀಡಿತ್ತು. ಆದರೆ, ಪತಿ ಬೇರೆಯವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರೆ, ಅದನ್ನು ವ್ಯಭಿಚಾರ ಎಂದು ಕರೆಯುವ ಅಧಿಕಾರವನ್ನು ಪತ್ನಿಗೆ ನೀಡಿರಲಿಲ್ಲ. ಈ ಕಾಯ್ದೆ ಸರಿಯಾದುದ್ದಲ್ಲ, ಮಹಿಳೆ ಅನೈತಿಕ ಸಂಬಂಧ ಪ್ರಶ್ನಿಸುವ ಪತಿ ಬೇರೆ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರೆ, ಅದನ್ನು ಪ್ರಶ್ನೆಸುವ ಹಕ್ಕು ಈ ಕಾನೂನಿಗಿಲ್ಲ. ಹೀಗಾಗಿ ಇದು ಮಹಿಳೆ ಮತ್ತು ಪುರುಷರ ನಡುವೆ ತಾರತಮ್ಯ ಮಾಡುತ್ತಿದ್ದು, ಇದು ಅಸಂವಿಧಾನಿಕ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಹೇಳಿದರು.