ದೇಶದಲ್ಲಿ 14.33 ಲಕ್ಷ ಹೊಸ ಉದ್ಯೋಗ ಸೃಷ್ಟಿ

ದೇಶದಲ್ಲಿ ಉದ್ಯೋಗದ ಬಗ್ಗೆ ಒಳ್ಳೆಯ ಸುದ್ದಿ ಇದ್ದು, ಕಳೆದ ವರ್ಷ ನವೆಂಬರ್‌ನಲ್ಲಿ 14.33 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ.

Last Updated : Jan 25, 2020, 07:44 AM IST
ದೇಶದಲ್ಲಿ 14.33 ಲಕ್ಷ ಹೊಸ ಉದ್ಯೋಗ ಸೃಷ್ಟಿ title=

ನವದೆಹಲಿ: ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ದೇಶದಲ್ಲಿ ಉದ್ಯೋಗ ಸೃಷ್ಟಿಯ ಬಗ್ಗೆ ಒಳ್ಳೆಯ ಸುದ್ದಿಯೊಂದು ಕೇಳಿಬಂದಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ದೇಶದ ಔಪಚಾರಿಕ ವಲಯದಲ್ಲಿ 14.33 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಇದು 2019 ರ ಅಕ್ಟೋಬರ್ ವೇಳೆಗೆ ಶೇಕಡಾ 17 ಕ್ಕಿಂತ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದ ಅಧಿಕೃತ ಅಂಕಿಅಂಶಗಳ ಪ್ರಕಾರ, ದೇಶದ ಔಪಚಾರಿಕ ವಲಯದಲ್ಲಿ ಉದ್ಯೋಗ ಸೃಷ್ಟಿಯ ಅಂಕಿಅಂಶಗಳು ಕಳೆದ ವರ್ಷ ಅಕ್ಟೋಬರ್‌ಗೆ ಹೋಲಿಸಿದರೆ ನವೆಂಬರ್‌ನಲ್ಲಿ ಹೆಚ್ಚಾಗಿದೆ.

ಕೇಂದ್ರ ಅಂಕಿಅಂಶ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ನೌಕರರ ರಾಜ್ಯ ವಿಮಾ ನಿಗಮದ (ಇಎಸ್‌ಐಸಿ) ಅಂಕಿಅಂಶಗಳ ಪ್ರಕಾರ, ದೇಶದ ಔಪಚಾರಿಕ ವಲಯದಲ್ಲಿ ಕೆಲಸ ಮಾಡುವ ನೌಕರರಲ್ಲಿ 2019 ರ ನವೆಂಬರ್‌ನಲ್ಲಿ 14,33,000 ಹೊಸ ಉದ್ಯೋಗಿಗಳು ಇಎಸ್‌ಐ ಯೋಜನೆಗೆ ಸೇರಿಕೊಂಡರು. ಆದರೆ ಒಂದು ತಿಂಗಳ ಮೊದಲು 2019 ರ ಅಕ್ಟೋಬರ್‌ನಲ್ಲಿ ಒಟ್ಟು 12,60,229 ಉದ್ಯೋಗಿಗಳು ಭಾಗಿಯಾಗಿದ್ದಾರೆ. ಹೀಗಾಗಿ, ಹಿಂದಿನ ತಿಂಗಳಿಗೆ ಹೋಲಿಸಿದರೆ 2019 ರ ನವೆಂಬರ್‌ನಲ್ಲಿ ಇಎಸ್‌ಐ ಯೋಜನೆಗೆ ಸೇರುವ ನೌಕರರ ಸಂಖ್ಯೆ ಶೇಕಡಾ 17.7 ರಷ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಎನ್‌ಎಸ್‌ಒ ವರದಿಯ ಪ್ರಕಾರ, 2018-19ರ ಆರ್ಥಿಕ ವರ್ಷದಲ್ಲಿ ಒಟ್ಟು 1.49 ಕೋಟಿ ಹೊಸ ಚಂದಾದಾರರನ್ನು ಇಎಸ್‌ಐನೊಂದಿಗೆ ಸೇರಿಸಲಾಗಿದ್ದರೆ, ಸೆಪ್ಟೆಂಬರ್ 2017 ರಿಂದ 2019 ರ ನವೆಂಬರ್ ಅವಧಿಯಲ್ಲಿ ಒಟ್ಟು 3.37 ಕೋಟಿ ಚಂದಾದಾರರನ್ನು ಇಎಸ್‌ಐ ಯೋಜನೆಯೊಂದಿಗೆ ಸೇರಿಸಲಾಗಿದೆ. ಅದೇ ಸಮಯದಲ್ಲಿ, ಸೆಪ್ಟೆಂಬರ್ 2017 ರಿಂದ ಮಾರ್ಚ್ 2018 ರವರೆಗೆ ಒಟ್ಟು 83.35 ಹೊಸ ಉದ್ಯೋಗಿಗಳನ್ನು ಇಎಸ್ಐಸಿ ಯೊಂದಿಗೆ ಸೇರಿಸಲಾಗಿದೆ.

ಎನ್‌ಎಸ್‌ಒದ ಈ ವರದಿಯು ನೌಕರರ ಭವಿಷ್ಯ ನಿಧಿ (ಇಪಿಎಫ್) ಯೋಜನೆ, ನೌಕರರ ರಾಜ್ಯ ವಿಮೆ (ಇಎಸ್‌ಐ) ಯೋಜನೆ ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ದತ್ತಾಂಶವನ್ನು ಆಧರಿಸಿದೆ.

ವರದಿಯ ಪ್ರಕಾರ, ಸೆಪ್ಟೆಂಬರ್ 2017 ರಿಂದ 2019 ರ ನವೆಂಬರ್ ವರೆಗೆ 3,03,05,347 ಹೊಸ ಗ್ರಾಹಕರನ್ನು ಇಪಿಎಫ್ ಯೋಜನೆಗೆ ಸೇರಿಸಲಾಗಿದೆ. ಅದೇ ಸಮಯದಲ್ಲಿ, ಸೆಪ್ಟೆಂಬರ್ 2017 ರಿಂದ 2019 ರ ನವೆಂಬರ್ ವರೆಗೆ 16,72,813 ಹೊಸ ಗ್ರಾಹಕರನ್ನು ಎನ್ಪಿಎಸ್ನೊಂದಿಗೆ ಸೇರಿಸಲಾಗಿದೆ.
 

Trending News