ವಾಷಿಂಗ್ಟನ್: ಆರೋಗ್ಯವೇ ಭಾಗ್ಯ ಎನ್ನುತ್ತಾರೆ. ನಗು ನಮ್ಮನ್ನು ಹೆಚ್ಚು ಆರೋಗ್ಯದಿಂದ ಇರುವಂತೆ ಮಾಡುತ್ತೆ ಅನ್ನೋದು ನಿಮಗೆ ಗೊತ್ತಾ? ಸಹಜವಾಗಿ ನಾವು ಎಷ್ಟು ನಗು ನಗುತ್ತಾ ಇರುತ್ತೇವೋ ಅಷ್ಟೇ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ. 50 ವರ್ಷಗಳಿಂದ ಸಂಗ್ರಹಿಸಲ್ಪಟ್ಟ ಮಾಹಿತಿಯ ಆಧಾರದ ಮೇಲೆ ಇದನ್ನು ಕಂಡು ಹಿಡಿಯಲಾಗಿದೆ.
ನಾವು ಎಷ್ಟು ನಗು ನಗುತ್ತಾ ಇರುತ್ತೇವೋ ಅಷ್ಟು ನಮ್ಮ ಮನಸ್ಸು ಕೂಡ ಸಂತೋಷದಿಂದ, ಉಲ್ಲಾಸಮಯವಾಗಿ ಇರುತ್ತದೆ. ನಾವು ಕೋಪಗೊಂಡಷ್ಟು ಮನಸ್ಸಿನ ನೆಮ್ಮದಿ ಕೂಡ ಕಡಿಮೆಯಾಗುತ್ತದೆ ಎಂದು ಯು.ಎಸ್.ನ ಟೆನ್ನೆಸ್ಸೀ ವಿಶ್ವವಿದ್ಯಾನಿಲಯದ ಪಿಎಚ್ಡಿ ವಿದ್ಯಾರ್ಥಿ ನಿಕೋಲಸ್ ಕೊಲ್ಸ್ ಸಂಶೋಧನೆಯಿಂದ ಕಂಡು ಹಿಡಿದಿದ್ದಾರೆ.
ಮನೋವೈಜ್ಞಾನಿಗಳು ಸುಮಾರು 100 ವರ್ಷಗಳಿಂದ ಈ ಕಲ್ಪನೆಯನ್ನು ಒಪ್ಪಿಕೊಂಡಿಲ್ಲ. 2016 ರಲ್ಲಿ ಈ ಭಿನ್ನಾಭಿಪ್ರಾಯಗಳು ಹೆಚ್ಚಾಗಿದ್ದು, 17 ಮಂದಿ ಸಂಶೋಧಕರ ತಂಡ ನಡೆಸಿದ ಸಂಶೋಧನೆಯಲ್ಲಿ ನಗುತ್ತಿರುವ ವ್ಯಕ್ತಿಗಳು ಮಾತ್ರ ಸಂತೋಷದಿಂದಿರಬಹುದು ಎಂಬುದನ್ನು ಸಾಬೀತು ಪಡಿಸುವಲ್ಲಿ ವಿಫಲರಾಗಿದ್ದಾರೆ. ಆದರೆ ನಾವು ಯಾವುದೇ ಒಂದು ಅಧ್ಯಯನದ ಫಲಿತಾಂಶಗಳ ಮೇಲೆ ಕೇಂದ್ರೀಕರಿಸಲು ಸಾಧ್ಯವಿಲ್ಲ ಎಂದು ಕೋಲಸ್ ಕೊಲ್ಸ್ ಹೇಳಿದ್ದಾರೆ.
ಮನೋವಿಜ್ಞಾನಿಗಳು ಈ ಪರಿಕಲ್ಪನೆಯನ್ನು 1970 ರ ದಶಕದ ಪ್ರಾರಂಭದಿಂದಲೂ ಪರಿಶೀಲಿಸುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ನಾವು ಎಲ್ಲಾ ಫಲಿತಾಂಶಗಳನ್ನು ನೋಡಬೇಕೆಂದು ಬಯಸಿದ್ದೇವೆ. ಮೆಟಾ ಅನಾಲಿಸಿಸ್ ತಂತ್ರಜ್ಞಾನವನ್ನು ಬಳಸಿಕೊಂಡು, 138 ಸಂಶೋಧಕರು ವಿಶ್ವದಾದ್ಯಂತ 11,000 ಮಂದಿಯ ಬಗ್ಗೆ ಅಧ್ಯಯನ ನಡೆಸಿ ಈ ಮಾಹಿತಿಯನ್ನು ಕಲೆಹಾಕಲಾಗಿದೆ. 'ಸೈಕಲಾಜಿಕಲ್ ಬುಲೆಟಿನ್' ನಲ್ಲಿ ಪ್ರಕಟವಾದ ಫಲಿತಾಂಶಗಳ ಪ್ರಕಾರ, ಮುಖದ ಮೇಲಿನ ಭಾವ ನಮ್ಮ ಭಾವನೆಗಳ ಮೇಲೆ ಪರಿಣಾಮ ಬೀರುತ್ತವೆ. ಮುಖದ ಭಾವ ನಮ್ಮ ಮನಸ್ಸಿನ ಕನ್ನಡಿ ಇದ್ದಂತೆ ಎಂದು ಹೇಳಲಾಗಿದೆ.