ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಇದೇ ಜೂನ್ 21ರಂದು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಯೋಗದ ವಿವಿಧ ಆಸನಗಳ ಬಗ್ಗೆ ಅನಿಮೇಟೆಡ್ ವೀಡಿಯೋ ಮೂಲಕ ತಿಳಿಸಿಕೊಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು ಶಲಭಾಸನದ ವೀಡಿಯೋ ಟ್ವೀಟ್ ಮಾಡಿದ್ದಾರೆ.
ಈ ವೀಡಿಯೋದಲ್ಲಿ ಶಲಭಾಸನ ಮಾಡುವುದು ಹೇಗೆ ಎಂದು ಹಂತ ಹಂತವಾಗಿ ವಿವರಿಸಲಾಗಿದೆ. "ಮೊದಲು ಹೊಟ್ಟೆಯ ಮೇಲೆ ನೇರವಾಗಿ ಮಲಗಿ, ಎರಡು ಕೈಗಳನ್ನು ತೊಡೆಯ ಕೆಳಗಡೆ ತೆಗೆದುಕೊಳ್ಳಬೇಕು. ಗದ್ದವನ್ನು ನೆಲಕ್ಕೆ ತಾಗಿಸಿ ಎರಡು ಕಾಲುಗಳನ್ನು ತೊಡೆಯ ಭಾಗದಿಂದ ಮೇಲಕ್ಕೆ ಎತ್ತಬೇಕು. ಸೊಂಟದ ಮೇಲ್ಭಾಗವಾದಂತ ಹೊಟ್ಟೆ, ಎದೆ, ಗದ್ದ, ನೆಲಕ್ಕೆ ತಾಗಿರಬೇಕು. ಮೇಲಕ್ಕೆ ಎತ್ತಿದ್ದ ಕಾಲುಗಳನ್ನು 10 ರಿಂದ 12 ಸೆಕೆಂಡುಗಳ ಕಾಲ ಹಾಗೇ ಹಿಡಿದಿಟ್ಟು, ಬಳಿಕ ನಿಧಾನವಾಗಿ ಕೆಳಕ್ಕೆ ಬಿಟ್ಟು, ಉಸಿರನ್ನು ನಿಧಾನವಾಗಿ ಬಿಡಬೇಕು" ಎಂದು ತಿಳಿಸಲಾಗಿದೆ.
Stronger wrists, back muscles and prevention of spondylitis...just some of the reasons why practising Shalabhasana is beneficial. #YogaDay2019 pic.twitter.com/etloBuR7KB
— Narendra Modi (@narendramodi) June 17, 2019
ಉಪಯೋಗ
ಶಲಭಾಸನ ಮಾಡುವುದರಿಂದ ಬೆನ್ನು ಮೂಳೆ ಹುರುಪುಗೊಳ್ಳುವುದಲ್ಲದೆ, ಸೊಂಟದ ನೋವು ನಿವಾರಣೆ ಆಗುತ್ತದೆ. ಎದೆಯ ಭಾಗ ಹಿಗ್ಗಲ್ಪಟ್ಟು ಉಸಿರಾಟ ಕ್ರಿಯೆ ಸುಲಭವಾಗುತ್ತದೆ. ಜೀರ್ಣ ಶಕ್ತಿ ಹೆಚ್ಚುತ್ತದೆ. ಈ ಆಸನ ಮಾಡುವುದರಿಂದ ತೊಡೆಯ ಮತ್ತು ಹಿಂಭಾಗಕ್ಕೆ ಉತ್ತಮ ಆಕಾರ ಬರುವುದಲ್ಲದೆ, ನಿಯಮಿತವಾಗಿ ಅಭ್ಯಾಸ ಮಾಡಿದಲ್ಲಿ ದೇಹದ ಕೊಬ್ಬು ಕರಗಿ, ತುಕ ಕಡಿಮೆ ಮಾಡಿಕೊಳ್ಳಲು ಸಹಾಯಕ.
ಯಾರು ಮಾಡಬಾರದು?
ಗರ್ಭವತಿ ಮಹಿಳೆಯರು, ಪೆಪ್ಟಿಕ್ ಅಲ್ಸರ್, ಹರ್ನಿಯಾ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗಿಗಳು ಈ ಆಸನವನ್ನು ಮಾಡಬಾರದು ಎಂದು ವೀಡಿಯೋದಲ್ಲಿ ವಿವರಿಸಲಾಗಿದೆ.