ಹಿರಿಯ ನಟ ಲೋಕನಾಥ್ ಇನ್ನಿಲ್ಲ

ಬೂತಯ್ಯನ ಮನೆ ಉಪ್ಪಿನಕಾಯಿ ಜಾಡಿ ಕಾಲಿ ಮಾಡುವ ಲೋಕನಾಥ್ ಅಭಿನಯ ಅಜರಾಮರ.

Last Updated : Dec 31, 2018, 10:29 AM IST
ಹಿರಿಯ ನಟ ಲೋಕನಾಥ್ ಇನ್ನಿಲ್ಲ title=
Pic Courtesy: Social media

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ರಂಗಭೂಮಿ ಮತ್ತು ಚಲನಚಿತ್ರ ರಂಗದ ಮೇರು ನಟ ಸಿ.ಎಚ್.ಲೋಕನಾಥ್ ಭಾನುವಾರ ರಾತ್ರಿ 12:15ಕ್ಕೆ ಇಹಲೋಕ ತ್ಯಜಿಸಿದ್ದಾರೆ. 

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಯಿಂದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. 

ಆಗಸ್ಟ್ 14, 1927 ರಲ್ಲಿ ಬೆಂಗಳೂರಿನಲ್ಲಿ ಹನುಮಂತಪ್ಪ ಮತ್ತು ಗೌರಮ್ಮ ದಂಪತಿಗಳಿಗೆ ಜನಿಸಿದ ಲೋಕನಾಥ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಅವರು ಕುಟುಂಬದ ವ್ಯಾಪಾರಕ್ಕೆ ಆಸರೆಯಾಗಿರಲು ಓದು ಬಿಟ್ಟರು. ಮನೆಯಲ್ಲಿದ್ದ ವೇಳೆಯಲ್ಲಿ ಸಂಗೀತದ ಮೇಲಿನ ಆಸೆಯಿಂದ ಸಂಗೀತವನ್ನು ಸುಮ್ಮನೆ ಗುನುಗುತ್ತಿದ್ದರು. ತಬಲಾ ಕಲಿಯಬೆಕೆಂಬ ಆಸೆಗೆ ತಬಲಾ ತಂದಿಟ್ಟುಕೊಂಡಾಗ ಮನೆಯ ವಾತಾವರಣ ಅದಕ್ಕೆ ಸರಿಹೋಗುವುದಿಲ್ಲ ಎಂದು ಅದನ್ನು ಕೈ ಬಿಟ್ಟರು.

ಸಂಪ್ರದಾಯಸ್ಥ ಕುಟುಂಬದ ವಿರೋಧದ ನಡುವೆ ರಂಗಭೂಮಿ ಪ್ರವೇಶ ಮಾಡಿದ್ದ ಅವರು, ರವಿಕಲಾವಿದರು ಸಂಸ್ಥೆಯಲ್ಲಿ ‘ರಕ್ತಾಕ್ಷಿ’, ‘ವಿಗಡವಿಕ್ರಮರಾಯ’, ‘ಬಿರುದಂತೆಂಬರ ಗಂಡ’, ‘ಬಹದ್ದೂರ್ ಗಂಡು’, ‘ಬಿಡುಗಡೆ’, ‘ಚಂದ್ರಹಾಸ’, ‘ಮನವೆಂಬ ಮರ್ಕಟ’ ಎಂಬ ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ಖ್ಯಾತಿ ಪಡೆದಿದ್ದರು. 650ಕ್ಕೂ ಹೆಚ್ಚು ಚಲನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಕನ್ನಡ ಚಿತ್ರರಂಗ ಮತ್ತು ರಂಗಭೂಮಿಯ ಒಬ್ಬ ಮೇರುನಟ.ಕಿರುತೆರೆಯಲ್ಲೂ ಸಾಕಷ್ಟು ಕೆಲಸಮಾಡಿದ್ದಾರೆ. ನಾಗರಹಾವು ಚಿತ್ರದಲ್ಲಿ ರಾಮಾಚಾರಿ ಕಾಪಿ ಹೊಡೆದಾಗ ಆತನನ್ನು ಅವಮಾನಿಸಿದ್ದಕ್ಕಾಗಿ, ಆತನಿಂದ ಲೈಟು ಕಂಬಕ್ಕೆ ಕಟ್ಟಲ್ಪಟ್ಟ ಪ್ರಿನ್ಸಿಪಾಲ್ ಶ್ಯಾಮರಾಯರಾಗಿ, ಬೂತಯ್ಯನ ಮಗ ಅಯ್ಯು ಚಿತ್ರದಲ್ಲಿ ಚಪ್ಪಲಿ ಹೊಲೆಯುವ ಮಾಚನಾಗಿ; ಅದರಲ್ಲೂ ಬೂತಯ್ಯನ ಮನೆ ಉಪ್ಪಿನಕಾಯಿ ಜಾಡಿ ಕಾಲಿ ಮಾಡುವ ಅವರ ಅಭಿನಯ ಅಜರಾಮರ. 

ಮಿಂಚಿನ ಓಟ, ಕಾಕನ ಕೋಟೆ, ಕಾಡು ಬೆಳದಿಂಗಳು ಮುಂತಾದ ಕಲಾತ್ಮಕ ಚಿತ್ರಗಳಲ್ಲಿನ ನಿರ್ವಹಣೆಗೆ, ಒಲವಿನ ಆಸರೆ, ಮನೆ ಮನೆ ಕಥೆ, ಹೌಸ್ ಫುಲ್ ಅಂತಹ ಅಸಂಖ್ಯಾತ ಪಾತ್ರಗಳಿಗಾಗಿ ಅವರ ಬಗೆಗಿನ ಪ್ರಶಂಸೆಗಳನ್ನು ಪತ್ರಿಕೆಗಳಿಂದಲೂ ಜನಸಾಮಾನ್ಯರಿಂದಲೂ ಕಾಣುತ್ತಲೇ ಇದ್ದೇವೆ. ಚಿತ್ರರಂಗವಲ್ಲದೆ ರಂಗಭೂಮಿಯ ಬಹಳಷ್ಟು ಉತ್ತಮ ಪ್ರಯೋಗಗಳಿಗೂ, ಕಿರುತೆರೆಯ ಉತ್ತಮ ಪಾತ್ರಗಳಿಗೂ ಲೋಕನಾಥರು ಮೆರುಗು ತಂದಿದ್ದಾರೆ.

Trending News