Puneeth Rajkumar: ನಟ ಪುನೀತ್ ರಾಜ್ ಕುಮಾರ್ ಕಣ್ಣು ನಾಲ್ವರಿಗೆ ಅಳವಡಿಕೆ

‘ಅಪ್ಪು’ ಕಣ್ಣನ್ನು ನಾಲ್ವರಿಗೆ ಅಳವಡಿಕೆ ಮಾಡಲಾಗಿದೆ ಎಂದು ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ.ಭುಜಂಗಶೆಟ್ಟಿ ತಿಳಿಸಿದ್ದಾರೆ.

Written by - Puttaraj K Alur | Last Updated : Nov 1, 2021, 02:46 PM IST
  • ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನೇತ್ರದಾನ ಮಾಡಿದ್ದರು
  • ಕರುನಾಡಿನ ಪ್ರೀತಿಯ ‘ಅಪ್ಪು’ವಿನ 2 ಕಣ್ಣುಗಳನ್ನು ನಾಲ್ವರಿಗೆ ಅಳವಡಿಸಲಾಗಿದೆ
  • ಹೊಸ ತಂತ್ರಜ್ಞಾನದ ಮೂಲಕ ನಾಲ್ವರಿಗೆ ದೃಷ್ಟಿ ನೀಡಲಾಗಿದೆ ಎಂದ ಡಾ.ಭುಜಂಗಶೆಟ್ಟಿ
Puneeth Rajkumar: ನಟ ಪುನೀತ್ ರಾಜ್ ಕುಮಾರ್ ಕಣ್ಣು ನಾಲ್ವರಿಗೆ ಅಳವಡಿಕೆ  title=
ನಾಲ್ವರ ಬಾಳಿಗೆ ಬೆಳಕಾದ ‘ಅಪ್ಪು’

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneeth Rajkumar) ಇನ್ನು ನೆನಪು ಮಾತ್ರ. ‘ದೊಡ್ಮನೆ ಹುಡುಗ’ನ ಅಗಲಿಕೆಯಿಂದ ಅವರ ಕೋಟ್ಯಂತರ ಅಭಿಮಾನಿಗಳಿಗೆ ಆಘಾತವಾಗಿದೆ. ಇನ್ನೂ ಕೂಡ ಅನೇಕರಿಗೆ ಪುನೀತ್ ಅವರ ನಿಧನದ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಕರುನಾಡಿನ ಪ್ರೀತಿಯ ‘ಅಪ್ಪು’ ನಿಧನಕ್ಕೆ ಇಡೀ ಕಾರುನಾಡಿನ ಜನರೇ ಕಂಬನಿ ಮಿಡಿದಿದ್ದಾರೆ. ಲಕ್ಷಾಂತರ ಅಭಿಮಾನಿಗಳು ಈಗಲೂ ಕಣ್ಣೀರಿಡುತ್ತಿದ್ದಾರೆ. ಸಾವಿನಲ್ಲೂ ಸಾರ್ಥಕತೆ ಮೆರೆದ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನೇತ್ರದಾನ(Eye donation) ಮಾಡಿದ್ದರು.

‘ಅಪ್ಪು’ ಕಣ್ಣನ್ನು ನಾಲ್ವರಿಗೆ ಅಳವಡಿಕೆ ಮಾಡಲಾಗಿದೆ ಎಂದು ನಾರಾಯಣ ನೇತ್ರಾಲಯ(Narayana Nethralaya)ದ ಮುಖ್ಯಸ್ಥ ಡಾ.ಭುಜಂಗಶೆಟ್ಟಿ ತಿಳಿಸಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ನಟ ಪುನೀತ್‌ ರಾಜ್ ಕುಮಾರ್ ಅವರ 2 ಕಣ್ಣು(Puneeth Rajkumar Eyes)ಗಳಿಂದ ನಾಲ್ವರಿಗೆ ದೃಷ್ಟಿ ಬಂದಿದೆ ಎಂದು ತಿಳಿಸಿದ್ದಾರೆ. ‘1994ರಲ್ಲಿ ವರನಟ ಡಾ.ರಾಜ್​​ಕುಮಾರ್ ಹಾಗೂ ಪಾರ್ವತಮ್ಮನವರು ನಮ್ಮ ಆಸ್ಪತ್ರೆಯಲ್ಲಿ ನೇತ್ರದಾನದ ವಿಂಗ್ ಉದ್ಘಾಟಿಸಿದ್ದರು. ಡಾ.ರಾಜ್‌ಕುಮಾರ್ ಅವರೂ ನೇತ್ರದಾನ ಮಾಡಿದ್ದರು. ಈಗ ಪುನೀತ್ ಕೂಡ ನೇತ್ರದಾನ ಮಾಡಿದ್ದಾರೆ. ಅವರ 2 ಕಣ್ಣುಗಳನ್ನು ಪಡೆದು ಶಸ್ತ್ರಚಿಕಿತ್ಸೆ ಮಾಡಲಾಗಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Puneeth Rajkumar: ಕರುನಾಡಿನ ಪೀತಿಯ ‘ಅಪ್ಪು’ಗೆ ಭಾವಪೂರ್ಣ ವಿದಾಯ, ಅಂತಿಮ ಸಂಸ್ಕಾರದಲ್ಲಿ ಗಣ್ಯರ ಕಂಬನಿ

‘ಸಾಮಾನ್ಯವಾಗಿ 2 ಕಣ್ಣು ಇಬ್ಬರಿಗೆ ಅಳವಡಿಸುವುದು ಸಾಮಾನ್ಯ. ಆದರೆ ಪುನೀತ್‌ರ 2 ಕಣ್ಣುಗಳಿಂದ ನಾಲ್ವರಿಗೆ ದೃಷ್ಟಿ ಬಂದಿದೆ. ಶನಿವಾರ ನಾಲ್ವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಹೊಸ ತಂತ್ರಜ್ಞಾನದ ಮೂಲಕ ನಾಲ್ವರಿಗೆ ದೃಷ್ಟಿ ನೀಡಲಾಗಿದೆ’ ಎಂದು ಬೆಂಗಳೂರಿನಲ್ಲಿ ಡಾ.ಭುಜಂಗಶೆಟ್ಟಿ(Dr.Bhujang Shetty) ಮಾಹಿತಿ ನೀಡಿದ್ದು, ಡಾ.ರಾಜ್ ಕುಟುಂಬಕ್ಕೆ ಧನ್ಯವಾದ ತಿಳಿಸಿದ್ದಾರೆ.

 2 ಕಣ್ಣು ನಾಲ್ವರಿಗೆ ಹಾಕಿದ್ದು ಹೇಗೆ..?

ನಟ ಪುನೀತ್ ರಾಜ್ ಕುಮಾರ್(Puneeth Rajkumar) ಅವರ ಎರಡು ಕಣ್ಣುಗಳಿಂದ ನಾಲ್ವರ ಬಾಳಲ್ಲಿ ಬೆಳಕು ಬಂದಿದೆ. ಅವರ ತಲಾ ಒಂದು ಕಣ್ಣಿನಿಂದ ಇಬ್ಬರಿಗೆ ದೃಷ್ಟಿ ಬಂದಿದೆ. ಕಾರ್ನಿಯಾಗಳನ್ನು ಎರಡು ಭಾಗಮಾಡಲಾಗಿದೆ. ಮುಂಭಾಗದ ಕಣ್ಣು ಹಾಗೂ ಹಿಂಭಾಗದ ಆಳದ ಪದರಗಳನ್ನು ಭಾಗ ಮಾಡಲಾಗಿತ್ತು. ಯಾವ ರೋಗಿಗೆ ಮುಂಭಾಗದ ಕಾರ್ನಿಯಾ ಹಾನಿಯಾಗಿತ್ತೋ ಅವರಿಗೆ ಮುಂಭಾಗದ ಕಾರ್ನಿಯಾ ನೀಡಲಾಗಿದೆ. ಹಿಂಭಾಗದ ಆಳದ ಪದರವನ್ನು ಬೇರೆ ರೋಗಿಗೆ ನೀಡಲಾಗಿದೆ. ಹೀಗೆ ಒಟ್ಟು 4 ಜನರಿಗೆ ಒಂದೇ ದಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಒಟ್ಟು ಐವರು ವೈದ್ಯರಿಂದ ಶಸ್ತ್ರಚಿಕಿತ್ಸೆ ನಡೆದಿದೆ. ಪುನೀತ್ ಅವರ ಕಣ್ಣುಗಳನ್ನು ಪಡೆದುಕೊಂಡ ಎಲ್ಲರೂ ಕರ್ನಾಟಕದವರೇ ಆಗಿದ್ದಾರೆ. ಈ ಪೈಕಿ ಓರ್ವ ಯುವತಿ ಹಾಗೂ ಮೂವರು ಪುರುಷರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಡಾ.ಭುಜಂಗಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ನಮ್ಮೆಲ್ಲರನ್ನೂ ತಮ್ಮ ಪ್ರೀತಿಯಿಂದ ಗೆದ್ದಿದ್ದಾರೆ-ಅಮೀರ್ ಖಾನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News