ಶಿವಕುಮಾರ ಸ್ವಾಮೀಜಿ ಅಗಲಿಕೆಗೆ ಕಂಬನಿ ಮಿಡಿದ ಚಿತ್ರರಂಗ; ಎರಡು ದಿನ ಶೋಕಾಚರಣೆ

ಶ್ರೀ ಶಿವಕುಮಾರ ಸ್ವಾಮೀಜಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಇಂದು ಹಾಗೂ ನಾಳೆ ಕನ್ನಡ ಚಿತ್ರರಂಗವನ್ನು ಬಂದ್ ಮಾಡಿದ್ದು, ಎರಡು ದಿನಗಳ ಕಾಲ ಚಿತ್ರ ಪ್ರದರ್ಶನ ರದ್ದುಪಡಿಸಲಾಗಿದೆ.

Last Updated : Jan 21, 2019, 05:03 PM IST
ಶಿವಕುಮಾರ ಸ್ವಾಮೀಜಿ ಅಗಲಿಕೆಗೆ ಕಂಬನಿ ಮಿಡಿದ ಚಿತ್ರರಂಗ; ಎರಡು ದಿನ ಶೋಕಾಚರಣೆ title=

ಬೆಂಗಳೂರು: ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಅಗಲಿಕೆಗೆ ಇಡೀ ಕನ್ನಡ ಚಿತ್ರರಂಗವೇ ಕಂಬನಿ ಮಿಡಿದಿದೆ. ಅಷ್ಟೇ ಅಲ್ಲದೆ, ಸ್ವಾಮೀಜಿಗಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಇಂದು ಹಾಗೂ ನಾಳೆ ಚಿತ್ರರಂಗವನ್ನು ಬಂದ್ ಮಾಡಿದ್ದು, ಎರಡು ದಿನಗಳ ಕಾಲ ಚಿತ್ರ ಪ್ರದರ್ಶನ ರದ್ದುಪಡಿಸಲಾಗಿದೆ.

ಜಾತಿ, ಮತಗಳನ್ನು ಮೀರಿ ಎಲ್ಲರನ್ನೂ ಸಲಹಿದ ಮಹಾನ್ ಚೇತನ: ಸುದೀಪ್
ತ್ರೀವಿಧ ದಾಸೋಹಿ ಡಾ.ಶಿವಕುಮಾರ್ ಸ್ವಾಮೀಜಿಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಟ್ವೀಟ್ ಮಾಡಿ, ಸಂತಾಪ ಸೂಚಿಸಿದ್ದಾರೆ. ಶತಮಾನದ ಯುಗಪುರುಷ ಶ್ರೀ ಶಿವಕುಮಾರ ಸ್ವಾಮಿಗಳು ಇಂದು ಇಹಲೋಕ ತ್ಯಜಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸೋಣ. ಅವರೊಬ್ಬ ಜಾತಿ, ಮತ, ಕಟ್ಟಳೆಗಳನ್ನೂ ಮೀರಿ ಎಲ್ಲರನ್ನೂ ಸಲಹಿದ ಮಹಾಂ ಚೇತನ ಎಂದು ಸುದೀಪ್ ಕಂಬನಿ ಮಿಡಿದಿದ್ದಾರೆ.

ದೇವರಿಗೆ ಎಂದಿಗೂ ಸಾವಿಲ್ಲ- ಪ್ರೇಮ್
ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರ ಅಗಲಿಕೆಗೆ ಕಂಬನಿ ಮಿಡಿದಿರುವ ನಟ, ನಿರ್ದೇಶಕ ಪ್ರೇಮ್, "ಭಕ್ತರ ಮನೆ ಮನದಲ್ಲಿ ನೆಲಸಿರುವ ಪರಮ ಪೂಜ್ಯ ಡಾ.ಶಿವಕುಮಾರ ಮಹಾಸ್ವಾಮಿ ದೇವರಿಗೆ ಎಂದಿಗೂ ಸಾವಿಲ್ಲ… ಭಕ್ತಿ ಪೂರ್ವಕವಾಗಿ ನಮಿಸೋಣ" ಎಂದು ಟ್ವೀಟ್ ಮಾಡಿದ್ದಾರೆ.

ಶ್ರೀಗಳು ಎಲ್ಲರ ಮನೆ ಮನಗಳಲ್ಲಿ ಭದ್ರವಾಗಿ ನೆಲೆಸಿದ್ದಾರೆ: ದರ್ಶನ್
ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾದ ವಿಷಯ ತಿಳಿಯುತ್ತಿದ್ದಂತೆ ನಟ ದರ್ಶನ್ ಸಹ ಸೋಶಿಯಲ್ ಮೀಡಿಯಾದಲ್ಲಿ ಕಂಬನಿ ಮಿಡಿದಿದ್ದಾರೆ. ‘ನಡೆದಾಡುವ ದೇವರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಇಹಲೋಕ ತ್ಯಜಿಸಿರುವುದು ಬಹಳ ನೋವಿನ ಸಂಗತಿ. ಇಷ್ಟು ದಿನ ಭಕ್ತರ ದರ್ಶನಕ್ಕೆ ಅವರಿದ್ದರು, ಈಗ ದೈಹಿಕವಾಗಿ ನಮ್ಮನ್ನು ಅಗಲಿದರೂ ಎಲ್ಲರ ಮನೆ ಮನಗಳಲ್ಲಿ ಅವರು ಭದ್ರವಾಗಿ ನೆಲೆಸಿದ್ದಾರೆ’ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್​ ಮಾಡಿದ್ದಾರೆ.

Trending News