Puneeth Rajkumar: ಕರುನಾಡಿನ ಪೀತಿಯ ‘ಅಪ್ಪು’ಗೆ ಭಾವಪೂರ್ಣ ವಿದಾಯ, ಅಂತಿಮ ಸಂಸ್ಕಾರದಲ್ಲಿ ಗಣ್ಯರ ಕಂಬನಿ

ವರನಟ ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮನವರ ಸಮಾಧಿ ಪಕ್ಕದಲ್ಲಿಯೇ ನಟ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ನೆರವೇರಿದೆ.

Written by - Puttaraj K Alur | Last Updated : Oct 31, 2021, 08:08 AM IST
  • ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಟ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ
  • ಸಕಲ ಸರ್ಕಾರಿ ಗೌರವಗಳೊಂದಿಗೆ ಕರುನಾಡಿನ ಪ್ರೀತಿಯ ‘ಅಪ್ಪು’ವಿನ ಅಂತ್ಯಕ್ರಿಯೆ
  • ಪುನೀತ್ ಅವರ ಪಾರ್ಥಿವ ಶರೀರಕ್ಕೆ ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು
Puneeth Rajkumar: ಕರುನಾಡಿನ ಪೀತಿಯ ‘ಅಪ್ಪು’ಗೆ ಭಾವಪೂರ್ಣ ವಿದಾಯ, ಅಂತಿಮ ಸಂಸ್ಕಾರದಲ್ಲಿ ಗಣ್ಯರ ಕಂಬನಿ title=
ನಟ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ

ಬೆಂಗಳೂರು: ಹೃದಯಾಘಾತದಿಂದ ನಿಧನರಾದ ಪವರ್ ಸ್ಚಾರ್ ಪುನೀತ್ ರಾಜ್ ಕುಮಾರ್(Kannada actor Puneeth Rajkumar) ಅವರ ಅಂತ್ಯಕ್ರಿಯೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಕರುನಾಡಿನ ಪ್ರೀತಿಯ ‘ಅಪ್ಪು’ ಅಂತ್ಯಕ್ರಿಯೆ ನಡೆಯಿತು. ಮೂರು ಸುತ್ತು ಕುಶಾಲು ತೋಪು ಹಾರಿಸಿ ನಟನಿಗೆ ಗೌರವ  ಸಲ್ಲಿಸಲಾಯಿತು. ಪೊಲೀಸ್ ಬ್ಯಾಂಡ್ ನಿಂದಲೂ ಗೌರವ ವಂದನೆ ಸಲ್ಲಿಕೆಯಾಯಿತು. ಬಳಿಕ ಪುನೀತ್ ಅವರ ಪಾರ್ಥಿವ ಶರೀರಕ್ಕೆ ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು. ವಿನಯ್ ರಾಜ್ ಕುಮಾರ್ ಅವರು ವಿಧಿವಿಧಾನ ನೆರವೇರಿಸಿದರು.

 

ನಟ ಪುನೀತ್ ಅವರ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿ ಪತ್ನಿ ಅಶ್ವಿನಿ ಮತ್ತು ಮಕ್ಕಳು, ಶಿವರಾಜ್ ಕುಮಾರ್(Shivaraj Kumar), ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಕುಟುಂಬ ಸದಸ್ಯರು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ತಾಯಿ ಅಶ್ವಿನಿ ಅವರನ್ನು ತಬ್ಬಿಕೊಂಡು ಮಕ್ಕಳಾದ ಧೃತಿ ಮತ್ತು ವಂದನಾ ಅಳುತ್ತಿರುವ ದೃಶ್ಯ ಮನಕಲಕುವಂತಿತ್ತು. ಕುಟುಂಬ ವರ್ಗದವರು ಮತ್ತು ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಕಂಠೀರವ ಸ್ಟುಡಿಯೋ ಆವರಣದಲ್ಲಿನ ವರನಟ ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮನವರ ಸಮಾಧಿ ಪಕ್ಕದಲ್ಲಿಯೇ ನಟ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ನೆರವೇರಿದೆ. ಇದೇ ವೇಳೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಪುನೀತ್ ಕುಟುಂಬಸ್ಥರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿದರು.

 

ಪುನೀತ್ ನಿಧನಕ್ಕೆ ಕಂಬನಿ ಮಿಡಿದ ಕರುನಾಡು

ಕನ್ನಡ ಚಿತ್ರರಂಗದ ಜನಪ್ರಿಯ ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneeth Rajkumar)ಅ.29ರಂದು ಹೃದಯಾಘಾತದಿಂದ ಅಕಾಲಿಕವಾಗಿ ಇಹಲೋಕ ತ್ಯಜಿಸಿದರು. ಪುನೀತ್ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿತ್ತು. ಅಭಿಮಾನಿಗಳ ದರ್ಶನಕ್ಕೆಂದು ಕಂಠೀರವ ಕ್ರೀಡಾಂಗಣದಲ್ಲಿ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಅಭಿಮಾನಿಗಳು ನೆಚ್ಚಿನ ನಟನ ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟಿದ್ದರು. ವಿವಿಧ ಚಿತ್ರರಂಗದ ನಟ-ನಟಿಯರು, ವಿವಿಧ ರಂಗದ ಗಣ್ಯರು ಸೇರಿದಂತೆ ಅಪಾರ ಅಭಿಮಾನಿ ಬಳಗ ಪುನೀತ್​ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದ್ದರು. ಸಿಎಂ ಬಸವರಾಜ್ ಬೊಮ್ಮಾಯಿಯವರು ಪುನೀತ್ ಹಣೆಗೆ ಮುತ್ತಿಟ್ಟು ಅಂತಿಮ ನಮನ ಸಲ್ಲಿಸಿದ್ದರು.

 

ಇಂದು ಬೆಳಗ್ಗೆ ಕಂಠೀರವ ಸ್ಟೇಡಿಯಂ(Kanteerava Stadium)ನಿಂದ ಕಂಠೀರವ ಸ್ಟುಡಿಯೋವರೆಗೆ ಪುನೀತ್ ರಾಜ್ ಕುಮಾರ್ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಅಂತ್ಯಕ್ರಿಯೆ ಸ್ಥಳದಲ್ಲಿ 200ರಿಂದ 250 ಜನರಿಗಷ್ಟೇ ಆಸನ ವ್ಯವಸ್ಥೆ ಮಾಡಲಾಗಿತ್ತು. ಕುಟುಂಬಸ್ಥರು, ಗಣ್ಯರು ಮಾತ್ರ ಪುನೀತ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ನೂರಾರು ಅಭಿಮಾನಿಗಳು ಕಂಠೀರವ ಸ್ಟುಡಿಯೋ ಹತ್ತಿರವಿರುವ ಮರಗಳನ್ನು ಏರಿ ಅಂತ್ಯಕ್ರಿಯೆ ವೀಕ್ಷಿಸಿದರು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ(BS Yediyurappa), ಸಚಿವರಾದ ಆರ್.ಅಶೋಕ್ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ಸಚಿವ ಗೋಪಾಲಯ್ಯ, ಶಾಸಕ ಎಸ್‌.ಆರ್‌.ವಿಶ್ವನಾಥ್‌, ರಾಕ್​ಲೈನ್ ವೆಂಕಟೇಶ್, ನಟ ದುನಿಯಾ ವಿಜಯ್, ರವಿಚಂದ್ರನ್‌, ಯಶ್, ಸುದೀಪ್, ಉಪೇಂದ್ರ, ಗಣೇಶ್, ನಟಿಯರಾದ ಶ್ರುತಿ, ತಾರಾ, ರಚಿತಾ ರಾಮ್, ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕ ತಾರೆಯರು ಪುನೀತ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News