ಬೆಂಗಳೂರು: ರಾಜ್ಯದಲ್ಲಿ ಪತ್ತೆಯಾಗಿರುವ ಬೃಹತ್ ಡ್ರಗ್ಸ್ ಮಾಫಿಯಾ (Drugs Mafia)ಗೆ ಸಂಬಂಧಿಸಿದಂತೆ ಚಿತ್ರನಟಿ ರಾಗಿಣಿ ದ್ವಿವೇದಿ (Ragini Dwivedi) ಬಳಿಕ ಈಗ ಇನ್ನೊಬ್ಬ ನಟಿ ಸಂಜನಾ ಗಲ್ರಾನಿ (Sanjana Galrani) ಅವರ ಮನೆ ಮೇಲು ಕೂಡ ಸಿಟಿ ಕ್ರೈಂ ಬ್ರಾಂಚ್ (CCB) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಂದು ಬೆಳ್ಳಂಬೆಳಿಗ್ಗೆ ಬೆಂಗಳೂರಿನ ಇಂದಿರಾನಗರದ 100 ಫೀಟ್ ರಸ್ತೆಯಲ್ಲಿರುವ ಸಂಜನಾ ಗಲ್ರಾನಿ ಮನೆ ಮೇಲೆ ದಾಳಿಮಾಡಿ ಪರಿಶೀಲನೆ ನಡೆಸಿದ್ದಾರೆ. ರಾಗಿಣಿ ಅವರ ತನಿಖಾಧಿಕಾರಿಗಳಾದ ಇನ್ಸ್ ಪೆಕ್ಟರ್ ಗಳಾದ ಅಂಜುಮಾಲ, ಪೂರ್ಣಿಮಾ ಮತ್ತು ಪುನೀತ್ ಅವರೇ ಸಂಜನಾ ಗಲ್ರಾನಿ ಮನೆಯಲ್ಲೂ ತನಿಖೆ ನಡೆಸುತ್ತಿದ್ದಾರೆ.
ಬೃಹತ್ ಡ್ರಗ್ಸ್ ಮಾಫಿಯಾ (Drugs Mafia)ಗೆ ಸಂಬಂಧಿಸಿದಂತೆ ಬಂಧಿತನಾಗಿರುವ ರಾಹುಲ್ ವಿಚಾರಣೆ ವೇಳೆ ಕೊಟ್ಟ ಮಾಹಿತಿ ಆಧರಿಸಿ ಸಂಜನಾ ಮನೆ ಮೇಲೆ ದಾಳಿ ನಡೆಸಲಾಗಿದೆ. ರಾಗಿಣಿ ಮನೆಯಲ್ಲಿ ಶೋಧಕಾರ್ಯ ನಡೆಸಿದಾಗ ಸಾಕ್ಷಿಗಳ ಸಮಕ್ಷದಲ್ಲಿ ತನಿಖೆ ನಡೆದಿರಲಿಲ್ಲ. ಜೊತೆಗೆ ಪೊಲೀಸರು ಸರ್ಚ್ ವಾರೆಂಟ್ ತೆಗೆದುಕೊಂಡು ಹೋಗಿರಲಿಲ್ಲ. ಇದರಿಂದ ತನಿಖಾಧಿಕಾರಿಗಳು ಟೀಕೆಯನ್ನು ಎದುರಿಸಬೇಕಾಯಿತು. ಈ ಹಿನ್ನಲೆಯಲ್ಲಿ ನಿನ್ನೆ ಸಂಜೆಯೇ ನ್ಯಾಯಾಲಯದಿಂದ ಸಂಜನಾ ಗಲ್ರಾನಿ ಮನೆಗೆ ದಾಳಿ ಮಾಡಲು ಸರ್ಚ್ ವಾರೆಂಟ್ ಪಡೆದಿದ್ದಾರೆ. ಮತ್ತೀಗ ಇಬ್ಬರು ಸರ್ಕಾರಿ ಸಾಕ್ಷಿಗಳ ಸಮಕ್ಷಮ ದಲ್ಲಿ ಶೋಧಕಾರ್ಯ ನಡೆದಿದೆ.
ಸದ್ಯ ಸಂಜನಾ ಮನೆಯಲ್ಲಿ ಅವರು, ಅವರ ತಾಯಿ ಮತ್ತು ತಂದೆ ಇದ್ದಾರೆ. ಅಧಿಕಾರಿಗಳು ಬೆಳ್ಳಂ ಬೆಳಿಗ್ಗೆ ದಿಢೀರ್ ಭೇಟಿಕೊಟ್ಟಾಗ ಸಂಜನಾ ತಾಯಿ ರೇಷ್ಮಾ ಬಂದು ಬಾಗಿಲು ತೆಗೆದಿದ್ದಾರೆ. ಬಳಿಕ ಸಂಜನಾಗೆ ರೇಡ್ ಬಗ್ಗೆ ವಿಷಯ ತಿಳಿಸಿದ್ದಾರೆ. ಇನ್ಸ್ ಪೆಕ್ಟರ್ ಪುನೀತ್ ಸಂಜನಾಗೆ ಸರ್ಚ್ ವಾರೆಂಟ್ ತೋರಿಸಿದ್ದಾರೆ. ಆಗ ಸಂಜನಾ ಧಾರಾಳವಾಗಿ ಪರಿಶೀಲನೆ ನಡೆಸಿ ಸರ್ ಎಂದಿದ್ದಾರೆಂದು ತಿಳಿದುಬಂದಿದೆ. ಈ ವೇಳೆ ಮನೆಗೆ ಪೊಲೀಸರು ಬಂದು ಪರಿಶೀಲನೆ ನಡೆಸಿರುವ ವಿಷಯವನ್ನು ಸಂಜನಾ ತಂದೆ ವಕೀಲರಿಗೆ ತಿಳಿಸಿದ್ದಾರೆ. ಸಂಜನಾ ಮಲಗುವ ಕೋಣೆಯಿಂದ ಹಿಡಿದು ಇಡೀ ಮನೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
ರಾಗಿಣಿಗಿಲ್ಲ ವಿಐಪಿ ಟ್ರೀಟ್ಮೆಂಟ್, ಸಾಮಾನ್ಯ ಆರೋಪಿಯಂತೆ ರಾತ್ರಿ ಕಳೆದ ಮಾದಕ ನಟಿ ರಾಗಿಣಿ
ತನಿಖಾಧಿಕಾರಿಗಳು ರಾಹುಲ್ ಮತ್ತು ಸಂಜನ ನಡುವೆ ನಡೆದಿರುವ ಮೆಸೇಜ್ ಚಾಟಿಂಗ್ಸ್ ಮಾಹಿತಿ ಸಂಗ್ರಹಿಸಿದ್ದಾರೆ. ಹೈ ಎಂಡ್ ಪಾರ್ಟಿಗಳಲ್ಲಿ ನಟಿ ಸಂಜನಾ ಭಾಗಿಯಾಗಿದ್ದ ಮಾಹಿತಿ ಕಲೆ ಹಾಕಿದ್ದಾರೆ. ಮೂರು ದಿನಗಳ ಹಿಂದೆ ರಾಹುಲ್ ಅವರನ್ನು ವಿಚಾರಣೆ ನಡೆಸಲಾಗಿತ್ತು. ರಾಹುಲ್ ಜೊತೆ ಸಂಜನಾ ಆತ್ಮೀಯ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಇವರಿಬ್ಬರು ಹೈ ಎಂಡ್ ಪಾರ್ಟಿ ಗಳಲ್ಲಿ ಭಾಗಿಯಾಗಿದ್ದರು ಹಾಗೂ ಶ್ರೀಲಂಕಾ ಕ್ಯಾಸಿನೋಗೆ ಹೋಗಿದ್ದರು ಎಂದು ಹೇಳಲಾಗುತ್ತಿದೆ. ಇದಲ್ಲದೆ ಸಂಜನಾ ಆಪ್ತೆ ಪೃಥ್ವಿ ಶೆಟ್ಟಿಯಿಂದಲೂ ಮಾಹಿತಿ ಪಡೆದುಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಪೊಲೀಸರು ಫೃಥ್ವಿಶೆಟ್ಟಿಯನ್ನ ಸಹ ವಿಚಾರಣೆ ನಡೆಸಿದ್ದರು.
ಸಂಜನಾ ಗಲ್ರಾನಿಯ ಇನ್ನೊಂದು ಹೆಸರು ಅರ್ಚನಾ ಗಲ್ರಾನಿ ಆಗಿದ್ದು ಅರ್ಚನಾ ಗಲ್ರಾನಿ ಹೆಸರಿನಲ್ಲಿ ಸಂಜನಾ BMW ಕಾರು ಕೊಂಡಿದ್ದಾರೆ. ಬೆಂಗಳೂರಿನ ಕೆ.ಆರ್. ಪುರ ಆರ್ ಟಿ ಓ ನಲ್ಲಿ ರಿಜಿಸ್ಟರ್ ಕಚೇರಿಯಲ್ಲಿ ಕಾರನ್ನು ನೊಂದಾಯಿಸಿದ್ದಾರೆ. ಸದ್ಯ ಪೊಲೀಸರು ಆ ಕಾರಿನ ಬಗ್ಗೆಯೂ ಪರಿಶೀಲಿಸಿದ್ದಾರೆ. ಕಾರಿನಲ್ಲಿ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. ಕಾರಿನಲ್ಲಿ ಒಂದು ಜೊತೆ ಬಟ್ಟೆ ಹಾಗೂ ನೀರಿನ ಬಾಟಲ್ ಮಾತ್ರ ಸಿಕ್ಕಿದೆ.