ಕೋರಮಂಗಲ ಡಬಲ್ ಮರ್ಡರ್ ಕೇಸ್ : ಸಹೋದರರ ಸಹಿತ ಮೂವರು ಬಂಧನ

ಕೋರಮಂಗಲ ಆರನೇ ಹಂತದಲ್ಲಿ ನಡೆದಿದ್ದ ಡಬಲ್ ಮರ್ಡರ್ ಹಾಗೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕೋರಮಂಗಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸದ್ಯ ಮೂವರನ್ನೂ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

Written by - VISHWANATH HARIHARA | Edited by - Ranjitha R K | Last Updated : Dec 20, 2022, 01:29 PM IST
  • ಡಬಲ್ ಮರ್ಡರ್ ಹಾಗೂ ದರೋಡೆ ಪ್ರಕರಣ - ಮೂವರು ಬಂಧನ
  • ನ್ಯಾಯಾಂಗ ವಶದಲ್ಲಿ ಆರೋಪಿಗಳು
  • ಡಿಸೆಂಬರ್ 16ರ ರಾತ್ರಿ ಕೋರಮಂಗಲ ಆರನೇ ಹಂತದಲ್ಲಿ ನಡೆದಿತ್ತು ಕೊಲೆ
 ಕೋರಮಂಗಲ ಡಬಲ್ ಮರ್ಡರ್ ಕೇಸ್ : ಸಹೋದರರ ಸಹಿತ ಮೂವರು ಬಂಧನ title=

ಬೆಂಗಳೂರು :ಅನ್ನ ಆಶ್ರಯ ನೀಡಿದ್ದವನ ಮನೆಯಲ್ಲಿ ನೆತ್ತರು ಹರಿಸಿ ದರೋಡೆಗೈದಿದ್ದ ಆರೋಪಿ ಮತ್ತು ಆತನ ಸಹಚರರನ್ನ ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಕೋರಮಂಗಲ ಆರನೇ ಹಂತದಲ್ಲಿ ನಡೆದಿದ್ದ ಡಬಲ್ ಮರ್ಡರ್ ಹಾಗೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕೋರಮಂಗಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಜಗದೀಶ್, ಅಭಿಷೇಕ್ ಹಾಗೂ ಕಿರಣ್ ಬಂಧಿತ ಆರೋಪಿಗಳು. 

ಡಿಸೆಂಬರ್ 16ರ ರಾತ್ರಿ ಕೋರಮಂಗಲ ಆರನೇ ಹಂತದಲ್ಲಿರುವ ಕಾಂಟ್ರಾಕ್ಟರ್ ಗೋಪಾಲರೆಡ್ಡಿ ಎಂಬುವವರ ಮನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ದಿಲ್ ಬಹದ್ದೂರ್ ಹಾಗೂ ಮನೆ ಕೆಲಸಗಾರ ಕರಿಯಪ್ಪ ಎಂಬಾತನನ್ನ ಉಸಿರುಗಟ್ಟಿಸಿ ಕೊಲೆಗೈದಿದ್ದ ಆರೋಪಿಗಳು ಐದು ಲಕ್ಷ ನಗದು ಹಾಗೂ ನೂರು ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಇದನ್ನೂ ಓದಿ : ರಮೇಶ್ ಜಾರಕಿಹೊಳಿ ಮತ್ತು ಕೆ.ಎಸ್.ಈಶ್ವರಪ್ಪ ಸಂಪರ್ಕದಲ್ಲಿದ್ದೇನೆ; ಸಿಎಂ ಬೊಮ್ಮಾಯಿ

ಮಾಜಿ ಚಾಲಕನೇ ಮಾಸ್ಟರ್ ಮೈಂಡ್  : 
ಆರೋಪಿ ಜಗದೀಶ್ ಕಳೆದ ಕೆಲ ವರ್ಷಗಳಿಂದ ಗೋಪಾಲರೆಡ್ಡಿ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ಎರಡೂವರೆ ತಿಂಗಳ ಹಿಂದೆ ಗೋಪಾಲರೆಡ್ಡಿಯವರ ಬೆಲೆಬಾಳುವ ಕಾರನ್ನ ಶೋಕಿಗಾಗಿ ಒಬ್ಬನೇ ತೆಗೆದುಕೊಂಡು ಹೋಗಿ ಅಪಘಾತ ಮಾಡಿಕೊಂಡಿದ್ದ. ಸಿಟ್ಟಿಗೆದ್ದ ಗೋಪಾಲರೆಡ್ಡಿ ಜಗದೀಶನ ಮನೆಯವರನ್ನ ಠಾಣೆಗೆ ಕರೆಸಿ ಬುದ್ದಿವಾದ ಹೇಳಿಸಿದ್ದರು. ಬಳಿಕ ಜಗದೀಶನನ್ನ ಕೆಲಸದಿಂದ ಬಿಡಿಸಿ ಬೇರೆ ಚಾಲಕನನ್ನ ನೇಮಿಸಲಾಗಿತ್ತು. ಕೆಲಸ ಕಳೆದುಕೊಂಡ ಜಗದೀಶ ಗೋಪಾಲರೆಡ್ಡಿಯ ಹೊಸ ಚಾಲಕನ ಜೊತೆ ಸಂಪರ್ಕದಲ್ಲಿದ್ದ. ಡಿಸೆಂಬರ್ 15ರಂದು ಜಗದೀಶ ಗೋಪಾಲರೆಡ್ಡಿ ಚಾಲಕನಿಗೆ ಕರೆ ಮಾಡಿದಾಗ ಗೋಪಾಲರೆಡ್ಡಿ ಕುಟುಂಬ ಆಂಧ್ರಪ್ರದೇಶದ ಅನಂತಪುರಕ್ಕೆ ಮದುವೆ ಸಮಾರಂಭಕ್ಕೆ ಹೋಗಿರುವುದು ತಿಳಿದಿತ್ತು. 

ಸೇಡು ತೀರಿಸಿಕೊಳ್ಳಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ಜಗದೀಶ್ ತನ್ನ ಸ್ನೇಹಿತ ಲಗ್ಗೆರೆಯ ಕಿರಣ್ ಹಾಗೂ ಆತನ ಸಹೋದರ ಅಭಿಷೇಕ್ ನ ಜೊತೆ ಸೇರಿ ಗೋಪಾಲರೆಡ್ಡಿಯ ಮನೆಗೆ ಬಂದಿದ್ದ. ಗೋಪಾಲರೆಡ್ಡಿಯ ಮನೆಯ ಬಗ್ಗೆ ಸಂಪೂರ್ಣ ತಿಳಿದಿದ್ದ ಜಗದೀಶ್ ಮೊದಲು ಸ್ಟೂಲ್ ಬಳಸಿ ಮನೆಯ ಹಿಂಭಾಗದ ಕಂಪೌಂಡ್ ಜಿಗಿದು ಒಳಬಂದಿದ್ದ. ಬಳಿಕ ಸಿಸಿ ಕ್ಯಾಮೆರಾಗಳ ವೈರ್ ಕತ್ತರಿಸಿ ಸೆಕ್ಯೂರಿಟಿ ರೂಂನಲ್ಲಿದ್ದ ದಿಲ್ ಬಹದ್ದೂರ್ ನ ಉಸಿರುಗಟ್ಟಿಸಿ ಮೈ ಕೈಗೆ ಟೇಪನ್ನ ಸುತ್ತಿ ಸಂಪಿಗೆ ಎಸೆದಿದ್ದ. ನಂತರ ಕಿರಣ್ ಹಾಗೂ ಅಭಿಷೇಕನನ್ನ ಮನೆಯ ಕಾಂಪೌಂಡಿನೊಳಗೆ ಕರೆಸಿಕೊಂಡಿದ್ದ. ಮೂವರೂ ಸೇರಿ ಇಡೀ ರಾತ್ರಿ ಮನೆಯ ಬಾಗಿಲ ಬಳಿ ಕಾದು ಕುಳಿತಿದ್ದರು. ಡಿಸೆಂಬರ್ 17ರ ಬೆಳಿಗ್ಗೆ ಮನೆಗೆಲಸದ ಕರಿಯಪ್ಪ ಮನೆ ಬಾಗಿಲು ತೆರೆಯುತ್ತಿದ್ದಂತೆ ಆತನನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನ ದೋಚಿ ಬಂದ ಆಟೋದಲ್ಲೇ ಪರಾರಿಯಾಗಿದ್ದರು.

ಇದನ್ನೂ ಓದಿ : ಸಾವರ್ಕರ್ ಪೋಟೋ ವಿಚಾರ ಕೈಬಿಟ್ಟ ಕಾಂಗ್ರೆಸ್ : ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಒತ್ತು..!

ಪ್ರಕರಣ ದಾಖಲಿಸಿಕೊಂಡ ಕೋರಮಂಗಲ ಠಾಣಾ ಪೊಲೀಸರು ಬ್ಯಾಡರಹಳ್ಳಿ, ಕುಣಿಗಲ್ ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಗದೀಶ್ ವಿರುದ್ಧ ಮಾದನಾಯಕನಹಳ್ಳಿ ಠಾಣೆಯಲ್ಲಿಯೂ ಒಂದು ಪ್ರಕರಣವಿದ್ದು, ಸದ್ಯ ಮೂವರನ್ನೂ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News