ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಡಬಲ್ ಮರ್ಡರ್

ಘಟನೆಯಲ್ಲಿ ಇದೇ ಗ್ರಾಮದ ರಣಧೀರ ಉರ್ಫ್ ಮಹೇಶ ರಾಮಚಂದ್ರ ಮುರಾರಿ(28) ಹಾಗೂ ಪ್ರಕಾಶ ನಿಂಗಪ್ಪ ಹುಂಕರಿಪಾಟೀಲ(24) ಹತ್ಯೆ ಮಾಡಲಾಗಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಯುವಕರನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಕೊಲೆಯಾದ ಇಬ್ಬರು ಗ್ರಾಮದಲ್ಲಿ ಯಾವುದೇ ಕೆಲಸ ಮಾಡದೇ ಗುಂಪು ಕಟ್ಟಿಕೊಂಡು ಓಡಾಡುತ್ತಿದ್ದರು ಎಂತಲೂ ಹೇಳಲಾಗುತ್ತಿದೆ. 

Written by - Yashaswini V | Last Updated : Oct 7, 2022, 06:51 AM IST
  • ಇಬ್ಬರನ್ನ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆದ ಗ್ಯಾಂಗ್
  • ನೂರು ಮೀಟರ್ ಅಂತರದಲ್ಲಿಯೇ ಇಬ್ಬರ ಭೀಕರ ಹತ್ಯೆ
  • ಭೀಕರ ಕೊಲೆ ಕಂಡು ಗ್ರಾಮ ತೊರೆದ ಊರಿನ ಕೆಲ ಜನ
ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಡಬಲ್ ಮರ್ಡರ್ title=
Double Murder

ಸುಳೇಭಾವಿ ಗ್ರಾಮದಲ್ಲಿ ಡಬಲ್ ಮರ್ಡರ್: ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಚಪ್ಪಲಿಗಳು, ಯಾರು ದಿಕ್ಕಿಲ್ಲದೇ ರಸ್ತೆ ಮೇಲೆ ಬಿದ್ದ ಬೈಕ್, ಕಾರದ ಪುಡಿ ಜತೆಗೆ ರಕ್ತದ ಕೊಡಿ ಹರಿದಿರುವುದು, ದೇವಸ್ಥಾನ ಕಟ್ಟೆ ಮೇಲೆಯೂ ಚಿಮ್ಮಿರುವ ರಕ್ತ, ಡಬಲ್ ಮರ್ಡರ್ ಗೆ ಬೆಚ್ಚಿ ಬಿದ್ದು ಮನೆ ಬಾಗಿಲು ಹಾಕಿಕೊಂಡು ಸಂಬಂಧಿಕರ ಮನೆಗೆ ಶಿಪ್ಟ್ ಆಗಿರೋ ಸ್ಥಳೀಯರು, ಬೀಕೋ ಅಂತಿರುವ ಗ್ರಾಮದ ಪ್ರಮುಖ ಬೀದಿಗಳು ಅಷ್ಟಕ್ಕೂ ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ. 

ಹೌದು, ಸುಳೇಭಾವಿ ಗ್ರಾಮದಲ್ಲಿ ಅದ್ಧೂರಿಯಾಗಿ ಒಂಬತ್ತು ದಿನ ನವರಾತ್ರಿ ಆಚರಣೆಯನ್ನ ಮಾಡಿದ್ದ ಜನರು ಗುರುವಾರದಂದು(ಅಕ್ಟೋಬರ್ 06) ಅರಾಮಾಗಿ ಬೇಗ ಮಲಗಬೇಕು ಅಂದುಕೊಂಡು ಸಂಜೆಯಾಗ್ತಿದ್ದಂತೆ ಜಿಟಿ ಜಿಟಿ ಮಳೆ ಬೇರೆ ಬಂದು ಬೇಗನೇ ಮನೆ ಸೇರಿಕೊಂಡಿದ್ದರು. ಕೆಲ ಪಡ್ಡೆ ಹುಡುಗರು ಮಾತ್ರ ಲಕ್ಷ್ಮೀ ಗಲ್ಲಿಯ ಶಿವಾಜಿ ಪ್ರತಿಮೆಯ ಬಳಿ ನಿಂತು ಹರಟೆ ಹೊಡೆಯುತ್ತಿದ್ದರು. ರಾತ್ರಿ ಎಂಟು ಮೂವತ್ತರ ಸುಮಾರಿಗೆ ಕೈಯಲ್ಲಿ ಮಾರಕಾಸ್ತ್ರಗಳು ಹಾಗೂ ಕಾರದ ಪುಡಿ ಹಿಡಿದುಕೊಂಡು ಬಂದ ಹತ್ತಕ್ಕೂ ಅಧಿಕ ಯುವಕರ ಗ್ಯಾಂಗ್ ಅಲ್ಲೇ ನಿಂತಿದ್ದ ಮಹೇಶ್ ಮುರಾರಿ(28) ಮತ್ತು ಪ್ರಕಾಶ್ ಹುಂಕರಿಪಾಟೀಲ್(24) ಮೇಲೆ ಕಾರದ ಪುಡಿ ಎರಚಿ ಅಟ್ಯಾಕ್ ಮಾಡಿದ್ದಾರೆ. 

ಯುವಕರ ಗ್ಯಾಂಗ್ ರೌದ್ರಾವತಾರ ಕಂಡ ಕೆಲ ಯುವಕರು ಅಲ್ಲಿಂದ ಕಾಲ್ಕಿತ್ರೇ ಈ ಇಬ್ಬರನ್ನ ಮಾತ್ರ ಎಲ್ಲಿಯೂ ಹೋಗದಂತೆ ಹಿಡಿದಿದ್ದಾರೆ. ಏಕಾಏಕಿ ಲಾಂಗು ಮಚ್ಚುಗಳಿಂದ ಹಲ್ಲೆ ಮಾಡಲು ಆರಂಭಿಸಿದ್ದಾರೆ. ಈ ವೇಳೆ ಓರ್ವನನ್ನ ಶಿವಾಜಿ ವೃತ್ತದಲ್ಲೇ ಹತ್ಯೆ ಮಾಡಿದ್ರೆ ಇನ್ನೋರ್ವ ಅಲ್ಲಿಂದ ಎಸ್ಕೇಪ್ ಆಗಿ ಅಲ್ಲೇ ಇದ್ದ ಗಣಪತಿ ದೇವಸ್ಥಾನಕ್ಕೆ ಹೋಗಿ ಜೀವ ಉಳಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ, ಆತ ಎಲ್ಲಿ ಹೋದರೂ ಬಿಡಬಾರದು ಅಂತಾ ಪಾಪಿಗಳು ಪ್ಲ್ಯಾನ್ ಮಾಡಿಕೊಂಡೇ ಬಂದೇ ಅಟ್ಯಾಕ್ ಮಾಡಿದ್ದರಿಂದ ದೇವಸ್ಥಾನದ ಕಟ್ಟೆಯ ಮೇಲೆಯೇ ಆತನನ್ನ ಹಿಡಿದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ- ಬೆಳಗಾವಿ: ಹಿಂಡಲಗಾ ಜೈಲಿನಲ್ಲಿ ವಿಚಾರಣಾಧೀನ ಕೈದಿ ನೇಣಿಗೆ ಶರಣು

ಡಬಲ್ ಮರ್ಡರ್ ಭೀಕರ ಘಟನೆಯನ್ನ ಕಂಡ ಲಕ್ಷ್ಮೀ ಗಲ್ಲಿ ಹಾಗೂ ಅಕ್ಕಪಕ್ಕದ ಗಲ್ಲಿಯ ಜನರು ಬೆಚ್ಚಿ ಬಿದ್ದಿದ್ದು, ಮಾರಿಹಾಳ ಪೊಲೀಸರಿಗೆ ಕೂಡಲೇ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಗ್ರಾಮಕ್ಕೆ ಬರುವ ಪೂರ್ವದಲ್ಲೇ ಘಟನೆ ನಡೆದ ಸುತ್ತಮುತ್ತಲಿನ ಪ್ರದೇಶದ ಮನೆಯವರು ಮನೆಗಳ ಬಾಗಿಲು ಹಾಕಿಕೊಂಡು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಮಾರಿಹಾಳ ಪೊಲೀಸರು ಪರಿಶೀಲನೆ ನಡೆಸಿ ಕೂಡಲೇ ಮೇಲಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಖುದ್ದು ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿಯನ್ನ ಪಡೆದುಕೊಂಡಿದ್ದಾರೆ. ಸದ್ಯ ಗ್ರಾಮದಲ್ಲಿ ಬಿಗುವಿಣ ವಾತಾವರಣ ನಿರ್ಮಾಣವಾಗಿದ್ದು ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೂಡ ಮಾಡಿದ್ದಾರೆ. 

ಘಟನೆಯಲ್ಲಿ ಇದೇ ಗ್ರಾಮದ ರಣಧೀರ ಉರ್ಫ್ ಮಹೇಶ ರಾಮಚಂದ್ರ ಮುರಾರಿ(28) ಹಾಗೂ ಪ್ರಕಾಶ ನಿಂಗಪ್ಪ ಹುಂಕರಿ ಪಾಟೀಲ(24) ಹತ್ಯೆ ಮಾಡಲಾಗಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಯುವಕರನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಕೊಲೆಯಾದ ಇಬ್ಬರು ಗ್ರಾಮದಲ್ಲಿ ಯಾವುದೇ ಕೆಲಸ ಮಾಡದೇ ಗುಂಪು ಕಟ್ಟಿಕೊಂಡು ಓಡಾಡುತ್ತಿದ್ದರು ಎಂತಲೂ ಹೇಳಲಾಗುತ್ತಿದೆ. 

ಇದನ್ನೂ ಓದಿ- Bangalore : ಗಂಡನ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ.!

ಕೊಲೆಯಾದ ರಣಧೀರ ಉರ್ಫ್ ಮಹೇಶ ಮುರಾರಿ ಈ ಹಿಂದೆ 2019ರಲ್ಲಿ ನಡೆದ ನಾಗೇಶ್ ಮ್ಯಾಕಲ್ಯಾಗೋಳ ಕೊಲೆ ಪ್ರಕರಣದಲ್ಲಿ ಸೆರೆಯಾಗಿದ್ದನು. ಎರಡು ವರ್ಷಗಳ ಕಾಲ ಜೈಲುವಾಸ ಅನುಭವಿಸಿ ಇತ್ತೀಚೆಗೆ ಜಾಮೀನಿನ ಮೇಲೆ ಹೊರ ಬಂದಿದ್ದನು. ಈತನ ವಿರುದ್ಧ ಅನೇಕ ಠಾಣೆಗಳಲ್ಲಿ ಹಲ್ಲೆ, ದೊಂಬಿ ಪ್ರಕರಣಗಳು ದಾಖಲಾಗಿವೆ. ಜಾಮೀನಿನ ಮೇಲೆ ಹೊರ ಬಂದ ಬಳಿಕ ಕೆಲವು ಗಲಾಟೆಯಲ್ಲಿ ಭಾಗಿಯಾಗಿದ್ದನು. ಜತೆಗೆ ಈತನೊಂದಿಗೆ ಇದ್ದ ಸಹಚರರ ಜೊತೆಗೂ ಜಗಳವಾಡಿಕೊಂಡಿದ್ದನು. ಸಹಚರರೇ ಕೊಲೆಗೈದಿರುವ ಸಾಧ್ಯೆತೆಯೂ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಶಾಂತವಾಗಿದ್ದ ಗ್ರಾಮದಲ್ಲಿ ಜೋಡಿ ಕೊಲೆ ಬೆಚ್ಚಿ ಬೀಳುವಂತೆ ಮಾಡಿದೆ. ಗ್ರಾಮದಲ್ಲಿ ಬಿಗುವಿಣ ವಾತಾವರಣ ಇದ್ದು ಕೆಎಸ್‌ಆರ್‌ಪಿ ಒಂದು ತುಕಡಿ ನಿಯೋಜಿಸಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಸದ್ಯ ಪೊಲೀಸರು ಎರಡು ಟೀಮ್ ಮಾಡಿ ಆರೋಪಿಗಳಿಗೆ ಬಲೆ ಬೀಸಿದ್ದು ಗ್ರಾಮದ ಕೆಲ ಯುವಕರೇ ಈ ಕೃತ್ಯ ಎಸಗಿರಬಹುದು ಅನ್ನೋ ಆಯಾಮದಲ್ಲಿ ತನಿಖೆ ಆರಂಭಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News