ಗಣಿತದಲ್ಲಿ 100ಕ್ಕೆ 36 ಅಂಕ! IAS ಆಫೀಸರ್ SSLC ಮಾರ್ಕ್ಸ್ ಕಾರ್ಡ್ ವೈರಲ್!

ಗುಜರಾತ್‌ನ ಭರೂಚ್‌ನ ಕಲೆಕ್ಟರ್ ತುಷಾರ್ ಸುಮೇರಾ ಅವರ 10ನೇ ತರಗತಿಯ ಅಂಕಪಟ್ಟಿಯ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Written by - Puttaraj K Alur | Last Updated : Jun 14, 2022, 04:42 PM IST
  • 100ಕ್ಕೆ ಇಂಗ್ಲಿಷ್‌ನಲ್ಲಿ 35, ಗಣಿತದಲ್ಲಿ 36 ಮತ್ತು ವಿಜ್ಞಾನದಲ್ಲಿ 38 ಅಂಕ
  • IAS ಆಫೀಸರ್‍ SSLC ಮಾರ್ಕ್ಸ್‍ ಕಾರ್ಡ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್
  • ಪ್ರತಿಯೊಬ್ಬರಿಗೂ ಸ್ಫೂರ್ತಿ ಗುಜರಾತ್‌ನ ಭರೂಚ್‌ ಕಲೆಕ್ಟರ್ ತುಷಾರ್ ಸುಮೇರಾರ ಯಶಸ್ಸಿನ ಕಥೆ
ಗಣಿತದಲ್ಲಿ 100ಕ್ಕೆ 36 ಅಂಕ! IAS ಆಫೀಸರ್ SSLC ಮಾರ್ಕ್ಸ್ ಕಾರ್ಡ್ ವೈರಲ್! title=
ತುಷಾರ್ ಸುಮೇರಾರ ಯಶಸ್ಸಿನ ಕಥೆ  

ನವದೆಹಲಿ: ಮನುಷ್ಯನ ಸಂಕಷ್ಟದ ಸಂದರ್ಭದಲ್ಲಿ ಯಶಸ್ಸಿನ ಕಥೆಗಳು ಯಾವಾಗಲೂ ಸ್ಫೂರ್ತಿ ನೀಡುತ್ತವೆ. ಅದರಂತೆ ಗುಜರಾತ್‌ನ ಅಧಿಕಾರಿಯೊಬ್ಬರ ಈ ಸ್ಟೋರಿ ಜೀವನವೇ ಸಾಕಾಗಿದೆ ಅನ್ನೋರಿಗೆ ಬದುಕುವ ಧೈರ್ಯ ತುಂಬುತ್ತದೆ. ಹೌದು, ಗುಜರಾತ್‌ನ ಭರೂಚ್‌ನ ಕಲೆಕ್ಟರ್ ತುಷಾರ್ ಸುಮೇರಾ ಅವರ 10ನೇ ತರಗತಿಯ ಅಂಕಪಟ್ಟಿಯ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟಿಜನ್‌ಗಳ ಹೃದಯ ಗೆದ್ದಿದೆ.

ಐಎಎಸ್ ಅಧಿಕಾರಿ ಅವನೀಶ್ ಶರಣ್ ಹಂಚಿಕೊಂಡಿರುವ ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಪೋಸ್ಟ್ ನಲ್ಲಿ ಸುಮೇರಾ ಅವರ ಫೋಟೋ ಜೊತೆಗೆ ಅವರ SSLC ಮಾರ್ಕ್ಸ್ ಕಾರ್ಡ್ ಹಂಚಿಕೊಳ್ಳಲಾಗಿದೆ. ಸುಮೇರಾ ಅವರು ಗಣಿತದಲ್ಲಿ 100ಕ್ಕೆ 36 ಮತ್ತು ಇಂಗ್ಲಿಷ್‍ನಲ್ಲಿ ಕೇವಲ 35 ಅಂಕಗಳನ್ನು ಪಡೆದುಕೊಂಡಿರುವುದು ಅಂಕಪಟ್ಟಿಯಲ್ಲಿ ಕಾಣಬಹುದು. ಇನ್ನೊಂದು ಚಿತ್ರದಲ್ಲಿ ಸುಮೇರಾ ಅವರು ತಮ್ಮ ಕಚೇರಿಯಲ್ಲಿ ಹೆಮ್ಮೆಯಿಂದ ಕುಳಿತಿರುವುದನ್ನು ಸಹ ಕಾಣಬಹುದು.

ಇದನ್ನೂ ಓದಿ: ಹವಾಮಾನ ಮುನ್ಸೂಚನೆ: ಈ ರಾಜ್ಯಗಳ ಕದತಟ್ಟಲಿದೆ ಮಾನ್ಸೂನ್‌ ಮಾರುತ!

‘ಭರೂಚ್ ಕಲೆಕ್ಟರ್ ತುಷಾರ್ ಸುಮೇರಾ ಅವರು 10ನೇ ತರಗತಿಯಲ್ಲಿ ಉತೀರ್ಣ ಹೊಂದಲು ಅಗತ್ಯವಿರುವ ಅಂಕ(passing marks)ಗಳನ್ನಷ್ಟೇ ಪಡೆದುಕೊಂಡಿದ್ದಾರೆ. ಅವರು 100ಕ್ಕೆ ಇಂಗ್ಲಿಷ್‌ನಲ್ಲಿ 35, ಗಣಿತದಲ್ಲಿ 36 ಮತ್ತು ವಿಜ್ಞಾನದಲ್ಲಿ 38 ಅಂಕಗಳನ್ನು ಪಡೆದುಕೊಂಡಿದ್ದರು. ಇಡೀ ಗ್ರಾಮ ಮಾತ್ರವಲ್ಲದೆ ಅವರ ಶಾಲೆಯಲ್ಲಿಯೂ ಸಹ ಸುಮೇರಾ ಏನನ್ನೂ ಸಾಧಿಸಲು ಸಾಧ್ಯವಿಲ್ಲವೆಂದು ಅಂದುಕೊಂಡಿದ್ದರಂತೆ. ಆದರೆ, ಸುಮೇರಾ ಐಎಎಸ್ ಅಧಕಾರಿಯಾಗಿ ಎಲ್ಲರ ಮಾತನ್ನು ಹುಸಿಯಾಗಿಸಿದರು. ಇದುವೇ ನಿಜವಾದ ಸಾಧನೆ’ ಎಂದು ಅವನೀಶ್ ಶರಣ್ ಕ್ಯಾಪ್ಶನ್ ಬರೆದುಕೊಂಡಿದ್ದಾರೆ.  

ಜಸ್ಟ್ ಪಾಸ್ ಆಗಿದ್ದ ಸುಮೇರಾ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲವೆಂದೇ ಅವರ ಹಳ್ಳಿಯ ಜನರು ನಂಬಿದ್ದರು. ಅವರ ಗುರುಗಳು ಸಹ ಈತ ಜೀವನದಲ್ಲಿ ಏನೂ ಮಾಡಲು ಸಾಧ್ಯವಿಲ್ಲವೆಂದು ಅಂದುಕೊಂಡಿದ್ದರು. ಆದರೆ, ಹಲವು ವರ್ಷಗಳ ಶ್ರಮದ ನಂತರ ಅವರು UPSC ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು.

ಇದನ್ನೂ ಓದಿ: ಮುಂದಿನ ಒಂದೂವರೆ ವರ್ಷದಲ್ಲಿ 10 ಲಕ್ಷ ನೇಮಕಾತಿ ಮಾಡಲು ಪ್ರಧಾನಿ ಸೂಚನೆ

ತುಷಾರ್ ಸುಮೇರಾ ಆರ್ಟ್ಸ್ ಸ್ಟ್ರೀಮ್‌ನಲ್ಲಿ ಪದವಿ ಪಡೆದುಕೊಂಡಿದ್ದಾರೆ. 2012ರಲ್ಲಿ ಅವರು ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಗುಜರಾತ್ ಕೇಡರ್‌ನ 2012ರ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿರುವ ಅವರನ್ನು ಕಳೆದ ವರ್ಷ ಭರೂಚ್ ಕಲೆಕ್ಟರ್ ಆಗಿ ನೇಮಿಸಲಾಗಿದೆ. ಸುಮೇರಾ ಸಾಧನೆಯ ಕಥೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಸ್ಫೂರ್ತಿಯಾಗಿದೆ. ಹೆಚ್ಚು ಅಂಕಗಳನ್ನು ಗಳಿಸಿದರೆ ಮಾತ್ರ ಬುದ್ಧಿವಂತರು, ಕಡಿಮೆ ಅಂಕ ಗಳಿಸಿದವರು ದಡ್ಡರು ಅನ್ನೋ ಮಾತನ್ನು ಅವರು ಸುಳ್ಳಾಗಿಸಿದ್ದಾರೆ.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News