ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಗಳಿಸಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ. ಈ ಬಾರಿ ಕರ್ನಾಟಕದಲ್ಲಿ ನರೇಂದ್ರ ಮೋದಿ ಅಲೆಯಿದೆ. ಕೇಂದ್ರೀಯ ಸರ್ಕಾರ ಸ್ವತಃ ತನ್ನ ಅಭಿವೃದ್ಧಿ ಕಾರ್ಯವನ್ನು ಸಾರ್ವಜನಿಕವಾಗಿ ಹೇಳುತ್ತಿದೆ. ಆದರೆ ಕಳೆದ 70 ವರ್ಷಗಳ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ಮಾಡಿರದ ಕಾರ್ಯಗಳನ್ನು ಅಧಿಕಾರಕ್ಕೆ ಬಂದ ನಾಲ್ಕೇ ವರ್ಷಗಳಲ್ಲಿ ಬಿಜೆಪಿ ಮಾಡಿದೆ ಎಂದರು.
ಝೀ ನ್ಯೂಸ್ ವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅಮಿತ್ ಷಾ, ದೇಶದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಕಟ್ಟಕಡೆಯಲ್ಲಿರುವ ವ್ಯಕ್ತಿಯನ್ನೂ ಗುರುತಿಸಿ ಕಾಳಜಿ ವಹಿಸಿದೆ. ದೇಶದ ಪ್ರತಿಯೊಂದು ಗ್ರಾಮಕ್ಕೂ ವಿದ್ಯುತ್ ಸಂಪರ್ಕ ಕಲ್ಪಿಸಿದೆ. ಬಡವರಿಗೆ ಆರೋಗ್ಯ ವಿಮಾ ಯೋಜನೆ, ಮಹಿಳಾ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಕೇವಲ ದೇಶವಷ್ಟೇ ಅಲ್ಲ, ಭಾರತವನ್ನು ಇಡೀ ವಿಶ್ವವೇ ಇಂದು ಗುರುತಿಸುವಂತಾಗಿದೆ. ವಿಶ್ವದಲ್ಲೇ ಅತ್ಯಂತ ಬೇಗವಾಗಿ ಆರ್ಥಿಕ ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದರೆ ಅದು ಭಾರತ ಎಂದು ಷಾ ಹೇಳಿದರು.
ಕಾಂಗ್ರೆಸ್ ಪಾಕಿಸ್ತಾನದ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದೆ
ಕರ್ನಾಟಕ ಚುನಾವಣೆಯಲ್ಲಿ ಮೊಹಮ್ಮದ್ ಅಲಿ ಜಿನ್ನಾ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಮಿತ್ ಷಾ, ಬಿಜೆಪಿ ಅಭಿವೃದ್ಧಿ ಬಗ್ಗೆ ಮಾತ್ರ ಚಿಂತನೆ ನಡೆಸುತ್ತಿದೆ. ಅಲ್ಲಿ ಜಿನ್ನಾ ಮತ್ತು ಪಾಕಿಸ್ತಾನದ ಯಾವುದೇ ವಿಚಾರವನ್ನು ಪ್ರಸ್ತಾಪಿಸಿಲ್ಲ. ಅಂತಹ ವಿಚಾರಗಳನ್ನು ಕಾಂಗ್ರೆಸ್ ಅಥವಾ ಮಾಧ್ಯಮಗಳು ಬೆಳೆಸುತ್ತಿವೆ ಎಂದು ಅವರು ಹೇಳಿದರಲ್ಲದೆ, ಬಿಜೆಪಿ ದೇಶದ ಅಭಿವೃದ್ಧಿಗಾಗಿ ನಿರಂತರವಾಗಿ ಹೋರಾಡುತ್ತಿದೆ ಎಂದು ಹೇಳಿದರು.
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಮಾತನಾಡಿದ ಅಮಿತ್ ಷಾ, ಲಿಂಗಾಯಿತ ಸಮುದಾಯದ ಮತ ಪಡೆಯಲು ಕಾಂಗ್ರೆಸ್ ಸಾಕಷ್ಟು ಪ್ರಯತ್ನಿಸಿದೆ. ಆದರೆ ವಾಸ್ತವವಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದಿಂದ ಜನತೆ ಬೇಸತ್ತಿದ್ದಾರೆ. ಇಲ್ಲಿನ ಜನ ಬದಲಾವಣೆ ಬಯಸುತ್ತಿದ್ದಾರೆ ಎಂದರು.
ಜೆಡಿಎಸ್ ಜೊತೆ ಚುನಾವಣಾ ಪೂರ್ವ ಮೈತ್ರಿ ಇಲ್ಲ
ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಅಮಿತ್ ಷಾ, ಕರ್ನಾಟಕದಲ್ಲಿ 50ಕ್ಕಿಂತಲೂ ಹೆಚ್ಚಿನ ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಆದ್ದರಿಂದ ಜೆಡಿಎಸ್ ಜತೆ ಒಕ್ಕೂಟ ಮೈತ್ರಿಯ ಪ್ರಶ್ನೆಯೇ ಇಲ್ಲ. ಅಲ್ಲದೆ, ಬಿಜೆಪಿ ಇತರ ಪಕ್ಷಗಳೊಂದಿಗೆ ಚುನಾವಣಾ ಪೂರ್ವ ಮೈತ್ರಿಯಾಗಲಿ, ಚುನಾವಣೋತ್ತರ ಮೈತ್ರಿಯನ್ನು ಹೊಂದಿಲ್ಲ. ಬಿಜೆಪಿ ತನ್ನದೇ ಶಕ್ತಿ ಹೊಂದಿದ್ದು, ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ ಎಂದರು.
ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅಮಿತ್ ಷಾ, ಈಗಾಗಲೇ ಯಡಿಯೂರಪ್ಪ ವಿರುದ್ಧದ ಭ್ರಷ್ಟಾಚಾರ ಆರೋಪಗಳು ಸುಳ್ಳು ಎಂದು ಸಾಬೀತಾಗಿದ್ದು, ನ್ಯಾಯಾಲಯ ಕ್ಲೀನ್ ಚೀಟ್ ನೀಡಿದೆ. ಹಾಗಾಗಿ ಅವರು ಯಡಿಯೂರಪ್ಪ ವಿರುದ್ಧದ ಆರೋಪಗಳಲ್ಲಿ ಹುರುಳಿಲ್ಲ ಎಂದಿದ್ದಾರೆ.
ಪ್ರಧಾನಿ ಅತ್ಯಂತ ಜನಪ್ರಿಯ ನಾಯಕ
ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, 10 ವರ್ಷಗಳಿಂದ ದೇಶದಲ್ಲಿ ಪ್ರಧಾನಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳದಂತೆ ಮಾಡಲಾಗಿದೆ. ಇದು ದೇಶದ ಪ್ರಧಾನಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಬಾರದು ಎಂಬ ಮನಸ್ಥಿತಿಯನ್ನು ಹುಟ್ಟುಹಾಕಿದೆ. ಆದರೆ ಪ್ರಜಾಪ್ರಭುತ್ವದಲ್ಲಿ, ರಾಜಕೀಯ ಮುಖಂಡರು ಪ್ರತಿ ಮನೆ ಮನೆಗೂ ತಲುಪುವಂತಹ ಅವಕಾಶವನ್ನು ಚುನಾವಣೆಗಳು ಒದಗಿಸುತ್ತವೆ. ಹಾಗಾಗಿ ಪ್ರಧಾನಿ ಮೋದಿ ರಾಜ್ಯದಲ್ಲಿ ಚುನಾವಣಾ ಪ್ರಚಾರವನ್ನು ಮುಂದುವರಿಸಲಿದ್ದಾರೆ. ಅವರು ದೇಶದ ಮತ್ತು ಬಿಜೆಪಿಯ ಉನ್ನತ ಮತ್ತು ಜನಪ್ರಿಯ ನಾಯಕರಾಗಿದ್ದಾರೆ ಎಂದು ಅಮಿತ್ ಷಾ ಹೇಳಿದರು.