ಚುನಾವಣೆ ಮುಂದೂಡಿದ ಮಾಹಿತಿಯೇ ಇಲ್ಲ; ಆರ್ ಆರ್ ನಗರ ಮತದಾರರ ಆಕ್ರೋಶ

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಮುಂದೂದಿದ್ದರೂ, ಈ ಬಗ್ಗೆ ಮಾಹಿತಿ ಇಲ್ಲದ ಮತದಾರರು ಮತದಾನ ಮಾಡಲು ಬಂದು ಹಿಂತಿರುಗಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. 

Last Updated : May 12, 2018, 11:12 AM IST
ಚುನಾವಣೆ ಮುಂದೂಡಿದ ಮಾಹಿತಿಯೇ ಇಲ್ಲ; ಆರ್ ಆರ್ ನಗರ ಮತದಾರರ ಆಕ್ರೋಶ  title=

ಬೆಂಗಳೂರು: ಅಕ್ರಮವಾಗಿ ಸಂಗ್ರಹಿಸಿದ್ದ ಮತದಾರರ ಗುರುತಿನ ಚೀಟಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಮುಂದೂದಿದ್ದರೂ, ಈ ಬಗ್ಗೆ ಮಾಹಿತಿ ಇಲ್ಲದ ಮತದಾರರು ಮತದಾನ ಮಾಡಲು ಬಂದು ಹಿಂತಿರುಗಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. 

ರಾಜರಾಜೇಶ್ವರಿ ನಗರ ಕ್ಷೇತ್ರದ ಜಾಲಹಳ್ಳಿಯಾ ಅಪಾರ್ಟ್ಮೆಂಟ್ ಒಂದರಲ್ಲಿ ಸುಮಾರು 9 ಸಾವಿರಕ್ಕೂ ಹೆಚ್ಚು ಮತದಾರರ ಗುರುತಿನ ಚೀಟಿಗಳು ಹಾಗೂ ಟ್ರಂಕ್ ನಲ್ಲಿ 95 ಲಕ್ಷ ರೂ. ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಆ ಕ್ಷೇತ್ರದ ಚುನಾವಣೆಯನ್ನು ಮೇ ತಿಂಗಳ 28ಕ್ಕೆ ಮುಂದೂಡಲಾಗಿದ್ದು, ಮೇ 31ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಅವರು ಶುಕ್ರವಾರ ಪ್ರಕಟಿಸಿದ್ದರು. 

ಆದರೆ, ಈ ಬಗ್ಗೆ ಕ್ಷೇತ್ರದ ಬಹುತೇಕ ಮತದಾರರಿಗೆ ಮಾಹಿತಿ ಇಲ್ಲದ ಕಾರಣ ಮತಗಟ್ಟೆಗಳಿಗೆ ಬಂದು ಪರದಾಡುವಂತಾಯಿತು. ಅಲ್ಲದೆ, ತಾವು ಬಹಳ ದೂರದ ಊರುಗಳಿಂದ ಮತದಾನ ಮಾಡಲೆಂದೇ ಬಂದಿದ್ದು, ಚುನಾವಣೆ ಮುಂದೂಡಿಕೆ ಬಗ್ಗೆ ಚುನಾವಣಾ ಆಯೋಗ ಸೂಕ್ತ ಮಾಹಿತಿ ನೀಡಿಲ್ಲ ಎದ್ನು ಆಕ್ರೋಶ ವ್ಯಕ್ತಪಡಿಸಿದರು. ಇನ್ನು, ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಹಾಗೂ ಆರ್ ಆರ್ ನಗರ ಕ್ಷೇತ್ರದ ಅಭ್ಯರ್ಥಿ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. 

Trending News