ರಾಹುಲ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ದೋಷ, ತನಿಖೆಗೆ ಆಗ್ರಹಿಸಿದ ಕಾಂಗ್ರೆಸ್

ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಶೇಷ ವಿಮಾನದ ಪೈಲೆಟ್‌ಗಳ ವಿರುದ್ಧ ಎಫ್ಐಆರ್ ದಾಖಲು.

Last Updated : Apr 27, 2018, 12:20 PM IST
ರಾಹುಲ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ದೋಷ, ತನಿಖೆಗೆ ಆಗ್ರಹಿಸಿದ ಕಾಂಗ್ರೆಸ್ title=

ಹುಬ್ಬಳ್ಳಿ: ರಾಜ್ಯ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಆಗಮಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ ಅನುಮಾನಾಸ್ಪದ ಲ್ಯಾಂಡಿಂಗ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಗೋಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವಿಮಾನದಲ್ಲಿ ತಾಂತ್ರಿಕ ದೋಷ ಸೃಷ್ಟಿಯಾಗಿದ್ದು, ಅನುಮಾನಸ್ಪದ ಮತ್ತು ಕಳಪೆ ನಿರ್ವಹಣೆ ಕುರಿತು ಸೂಕ್ತ ತನಿಖೆ ನಡೆಸುವಂತೆ ಕಾಂಗ್ರೆಸ್ ಒತ್ತಾಯಿಸಿದ್ದು, ಈ ಬಗ್ಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಾಕೀರ್ ಸನಧಿ ದೂರು ದಾಖಲಿಸಿದ್ದು, ಐಪಿಸಿ ಸೆಕ್ಷನ್ 287, 336 ಮತ್ತು ಏರ್ ಕ್ರಾಫ್ಟ್ ಕಾಯ್ದೆ 1934ರ ಅಡಿ VT-AVH ವಿಶೇಷ ವಿಮಾನದ ಇಬ್ಬರು ಪೈಲೆಟ್‌ಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 

ದೆಹಲಿಯಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ ರಾಹುಲ್ ಗಾಂಧಿ ಅವರ ವಿಮಾನವನ್ನು ನಿಗದಿತಕ್ಕಿಂತ ಹೆಚ್ಚು ಎತ್ತರಕ್ಕೆ ಚಲಾಯಿಸಿದ್ದ ಪೈಲಟ್ ಮೂರು ನಿಮಿಷದ ವರೆಗೆ ರೇಡಾರ್ ಸಂಪರ್ಕ ಕಳೆದುಕೊಳ್ಳುವ ಹಾಗೆ ಮಾಡಿದ್ದರು. ಹೀಗಾಗಿ ಪೈಲಟ್ ಗಳ ವಿರುದ್ಧ ಶಾಕೀರ್ ಸನಧಿ ನೀಡಿರುವ ದೂರು ದಾಖಲಿಸಿಕೊಂಡಿರುವ ಗೋಕುಲ್ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.    

ಘಟನೆ ಕುರಿತು ಟ್ವೀಟ್ ಮಾಡಿರುವ ಕೌಶಲ್ ಕೆ ವಿದ್ಯಾರ್ಥಿ, ನಾನು ಈಗ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ. ನಾನು ಜೀವಂತವಾಗಿರುವುದಕ್ಕೆ ಕೃತಜ್ಞತೆಗಳು. ನನ್ನ ಜೀವನದಲ್ಲಿ ಇಂತಹ ಭಯಾನಕ ಸ್ಥಿತಿ ಎದುರಿಸಿರಲಿಲ್ಲ. ವಿಮಾನ ಬೀಳುತ್ತಿದೆ ಅನ್ನೋ ಹಾಗೆ ಅನ್ನಿಸ್ತಾಯಿತ್ತು. ಆದರೆ ನಮ್ಮ ಅಧ್ಯಕ್ಷರು ಶಾಂತಚಿತ್ತರಾಗಿ ಪೈಲಟ್‍ಗಳ ಜೊತೆ ಮಾತನಾಡಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಮಾಡುವ ಬಗ್ಗೆ ಗಮನಹರಿಸಿದ್ದರು ಎಂದು ಅನುಭವ ಹೇಳಿಕೊಂಡಿದ್ದಾರೆ.

ಇನ್ನು ಈ ಕುರಿತಂತೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಚುನಾವಣೆ ಸಮಯದಲ್ಲಿ ಸಹಾನುಭೂತಿ ಮತಕ್ಕಾಗಿ ರಾಹುಲ್ ಗಾಂಧಿಯ ಗಿಮಿಕ್ ಎಂದು ಹರಿಹೈದಿದ್ದಾರೆ.

Trending News