ನವದೆಹಲಿ: ಹಿಂದೆಂದಿಗಿಂತಲೂ ಜಾಗತಿಕ ಹವಾಮಾನ ಬದಲಾವಣೆ ವಾಪಕ ಪರಿಣಾಮ ಬೀರುತ್ತಿದೆ, ಭೂಮಿ ಮೇಲೆ ಅನೇಕ ವನ್ಯ ಜೀವಿಗಳು ಹಾಗೂ ಸಂತತಿಗಳು ಕಾಣೆಯಾಗುತ್ತಿವೆ, ಉತ್ತರ ಧ್ರುವದಲ್ಲಿ ಹಿಮ ಗಡ್ಡೆಗಳು ಕರುಗುತ್ತಿವೆ, ಅಮೆಜಾನ್ ಕಾಡುಗಳು ಕಾಡ್ಗಿಚ್ಚಿನಿಂದ ನಾಶವಾಗುತ್ತಿವೆ, ಅದೇ ರೀತಿಯಾಗಿ ಪ್ರವಾಹ ಹಾಗೂ ಬರ ಎನ್ನುವುದು ಸಾಮಾನ್ಯ ಎನ್ನುವಂತಾಗಿದೆ. ಹೀಗೆ ಜಾಗತಿಕ ಹವಾಮಾನ ಬದಲಾವಣೆಯ ಪರಿಣಾಮ ಮಾತ್ರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೇ ಇದೆ.ಈ ಎಲ್ಲ ಪರಿಣಾಮಗಳು ಮಾನವ ನಿರ್ಮಿತ ಕೃತಕ ಸೃಷ್ಟಿಗಳಾಗಿವೆ.
ಈ ಎಲ್ಲ ಪರಿಣಾಮಗಳನ್ನು ಅರಿತುಕೊಂಡಿರುವ 16 ವರ್ಷದ ಬಾಲಕಿ ಗ್ರೇಟಾ ಥನ್ಬರ್ಗ್ ಈಗ ಜಗತ್ತಿನಾಧ್ಯಂತ ಶಾಲೆಗಳನ್ನು ಬಹಿಷ್ಕರಿಸಿ ಹವಾಮಾನ ಬದಲಾವಣೆ ಕುರಿತ ಚಳುವಳಿಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾಳೆ. ಆಕೆಯ ಕರೆಗೆ ಈಗ ಜಗತ್ತಿನಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಸ್ವೀಡನ್ ಮೂಲದ ಈ ಬಾಲಕಿ ಹವಾಮಾನ ಬದಲಾವಣೆ ಸಂದೇಶವನ್ನು ಈಗ ಬಿದಿಯಿಂದ ಹಿಡಿದು ಜಗತ್ತಿನ ಎಲ್ಲ ಪಾರ್ಲಿಪೆಂಟ್ ಗಳಿಗೂ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಇದುವರೆಗೆ ಗ್ರೇಟಾ ಥನ್ಬರ್ಗ್ ಳಿಂದ ಸ್ಫೂರ್ತಿ ಪಡೆದು ಜಗತ್ತಿನಾದ್ಯಂತ 5,600 ಹೋರಾಟಗಳನ್ನು160ಕ್ಕೂ ಅಧಿಕ ದೇಶಗಳಲ್ಲಿ ಆಯೋಜಿಸಲಾಗಿದೆ. ಹಲವು ದೇಶಗಳಲ್ಲಿ ಈ ಬಾಲಕಿ ಫೋಟೋ ಹಿಡಿದು ಹವಾಮಾನ ಬದಲಾವಣೆ ಚಳುವಳಿಗೆ ಧುಮ್ಮುಕ್ಕುತ್ತಿರುವುದು ನೋಡಿದಾಗ ಆಕೆ ಬೀರಿರುವ ಪರಿಣಾಮವನ್ನು ನೀವೇ ಕಲ್ಪಿಸಿಕೊಳ್ಳಬಹುದು.
ಕಳೆದ ವರ್ಷ ಡಿಸೆಂಬರ್ ನಲ್ಲಿ ನಡೆದ ಸಿಓಪೋ 24 ಕ್ಯಾಟೋವೈಸ್ ನಲ್ಲಿ ಗ್ರೇಟಾ ಥನ್ಬರ್ಗ್ ಭಾಗವಹಿಸಿ ಮಾಡಿದ ಭಾಷಣ ಒಂದು ಕ್ಷಣ ಅಲ್ಲಿ ನೆರೆದಿದ್ದ ಜಾಗತಿಕ ನಾಯಕರಿಗೆ ಅಚ್ಚರಿ ಮೂಡಿಸಿದ್ದನ್ನು ನಾವು ಸ್ಮರಿಸಬಹುದು.
“ನನ್ನ ಹೆಸರು ಗ್ರೇಟಾ ಥನ್ಬರ್ಗ್. ನನಗೀಗ 15 ವರ್ಷ. ನಾನು ಸ್ವೀಡನ್ ಮೂಲದವಳು. ಈ ಸಂದರ್ಭದಲ್ಲಿ ನಾನೀಗ ಹವಾಮಾನ ನ್ಯಾಯದ ಪರವಾಗಿ ಮಾತನಾಡುತ್ತೇನೆ. ಸ್ವೀಡನ್ ಕೇವಲ ಒಂದು ಸಣ್ಣ ದೇಶ ಎಂದು ಅನೇಕ ಜನರು ಹೇಳುತ್ತಾರೆ ಮತ್ತು ನಾವು ಏನು ಮಾಡುತ್ತಿದ್ದೇವೆ ಎಂಬುದು ಮುಖ್ಯವಲ್ಲ. ಆದರೆ ನೀವು ಎಂದಿಗೂ ಪರಿವರ್ತನೆ ತರಲು ಚಿಕ್ಕವರಲ್ಲ ಎನ್ನುವುದನ್ನು ನಾನು ಅರಿತುಕೊಂಡಿದ್ದೇನೆ. ಮತ್ತು ಕೆಲವು ಮಕ್ಕಳು ಶಾಲೆಗೆ ಹೋಗದೆ ಪ್ರಪಂಚದಾದ್ಯಂತ ಹೆಡ್ ಲೈನ್ ಸುದ್ದಿಯಾಗಲು ಸಾಧ್ಯವಾದರೆ, ನಾವು ನಿಜವಾಗಿಯೂ ಇಚ್ಚಿಸಿದ್ದಲ್ಲಿ ನಾವೆಲ್ಲರೂ ಒಟ್ಟಾಗಿ ಏನು ಮಾಡಬಹುದೆಂದು ನೀವೇ ಊಹಿಸಿಕೊಳ್ಳಿ.
ಆದರೆ ಅದನ್ನು ಮಾಡಲು ಎಷ್ಟೇ ಅನಾನುಕೂಲವಾಗಿದ್ದರೂ ನಾವು ಸ್ಪಷ್ಟವಾಗಿ ಮಾತನಾಡಬೇಕು. ನೀವು ಹಸಿರು ಶಾಶ್ವತ ಆರ್ಥಿಕ ಬೆಳವಣಿಗೆಯ ಬಗ್ಗೆ ಮಾತ್ರ ಮಾತನಾಡುತ್ತೀರಿ ಏಕೆಂದರೆ ನೀವು ಜನಪ್ರಿಯವಾಗುವುದಿಲ್ಲ ಎನ್ನುವ ಬಗ್ಗೆ ನಿಮಗೆ ಭಯವಿದೆ.ಇದರಿಂದ ಈ ಅವ್ಯವಸ್ಥೆಗೆ ಸಿಲುಕಿದ ಅದೇ ಕೆಟ್ಟ ವಿಚಾರಳೊಂದಿಗೆ ನೀವು ಮುಂದೆ ಸಾಗುವ ಬಗ್ಗೆ ಮಾತ್ರ ಚಿಂತಿಸುತ್ತಿರಿ, ಇದಕ್ಕೆ ತುರ್ತು ಬ್ರೇಕ್ ಹಾಕುವುದು ಮಾತ್ರ ಸೂಕ್ತ ವಿಷಯ. ನೀವು ಅದನ್ನು ಹೇಳುವಷ್ಟು ಪ್ರಬುದ್ಧರಾಗಿಲ್ಲ. ಆ ಹೊರೆಯನ್ನೂ ಸಹ ನೀವು ಮಕ್ಕಳ ಮೇಲೆ ಬಿಡುತ್ತೀದ್ದಿರಿ. ಆದರೆ ನಾನು ಜನಪ್ರಿಯವಾಗುವ ಬಗ್ಗೆ ಹೆದರಿಲ್ಲ. ನಾನು ಹವಾಮಾನ ನ್ಯಾಯ ಮತ್ತು ಭೂಮಿ ಬಗ್ಗೆ ಕಾಳಜಿ ವಹಿಸುತ್ತೇನೆ.
ಕೇವಲ ಕೆಲವೇ ಜನರಿಗೆ ಅಪಾರ ಪ್ರಮಾಣದ ಹಣ ಸಂಪಾಧಿಸಲು ಅವಕಾಶ ನೀಡುವುದಕ್ಕಾಗಿ ನಮ್ಮ ನಾಗರಿಕತೆಯನ್ನು ತ್ಯಾಗ ಮಾಡಲಾಗುತ್ತಿದೆ. ನನ್ನಂತಹ ದೇಶಗಳಲ್ಲಿ ಶ್ರೀಮಂತರು ಐಷಾರಾಮಿ ಜೀವನ ನಡೆಸಲು ನಮ್ಮ ಜೀವ ಗೋಳವನ್ನು ತ್ಯಾಗ ಮಾಡಲಾಗುತ್ತಿದೆ. ಅನೇಕ ಜನರ ನೋವುಗಳನ್ನು ಕೆಲವೇ ಐಷಾರಾಮಿ ವ್ಯಕ್ತಿಗಳಿಗೆ ಬೆಲೆ ಕಟ್ಟಲಾಗುತ್ತಿದೆ. ನಾನು 2078 ರಲ್ಲಿ 75ನೇ ಹುಟ್ಟುಹಬ್ಬವನ್ನು ಆಚರಿಸುತ್ತೇನೆ, ಒಂದು ವೇಳೆ ಆಗ ನನಗೆ ಮಕ್ಕಳಿದ್ದರೆ, ಆ ದಿನ ಅವರು ನನ್ನ ಜೊತೆ ಕಾಲ ಕಳೆಯುತ್ತಾರೆ. ಆಗ ಅವರು ನಿಮ್ಮ ಬಗ್ಗೆ ಪ್ರಶ್ನಿಸಬಹುದು. ನಿಮಗೆ ಕ್ರಿಯೆಗಿಳಿಯಲು ಸಾಕಷ್ಟು ಕಾಲಾವಕಾಶ ಇದ್ದಾಗಲೂ ಕೂಡ ನೀವೇಕೆ ಇಳಿಯಲಿಲ್ಲ ಅವರು ಎಂದು ಕೇಳಬಹುದು. ನೀವು ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಮಕ್ಕಳನ್ನು ಪ್ರೀತಿಸುತ್ತಿರಿ ಎಂದು ಹೇಳುತ್ತೀರುತ್ತಿರಿ, ಆದರೆ ನೀವು ಅವರ ಭವಿಷ್ಯವನ್ನು ಅವರ ಕಣ್ಣೆದುರುಗಡೆಯೇ ನಾಶಪಡಿಸುತ್ತಿದ್ದಿರಿ.
ರಾಜಕೀಯ ಸಾಧ್ಯತೆಗಳಿಗಿಂತ ಹೆಚ್ಚಾಗಿ ನೀವು ಮಾಡಬೇಕಾಗಿರುವ ಅಗತ್ಯತೆ ಕುರಿತು ಕ್ರಿಯೆಗೆ ಇಳಿಯುವವರೆಗೆ ಯಾವ ಭರವಸೆಯೂ ಇಲ್ಲ. ನಾವು ಬಿಕ್ಕಟ್ಟನ್ನು ಬಿಕ್ಕಟ್ಟು ಎಂದು ಪರಿಗಣಿಸುವವರೆಗೆ ಪರಿಹಾರವೆಂದು ಸಾಧ್ಯವಿಲ್ಲ. ನಾವು ಪಳಯುಳಕೆ ಇಂಧನಗಳನ್ನು ಭೂಮಿಯ ತಳದಲ್ಲಿ ಸಂಗ್ರಹಿಸಿ ಅವುಗಳ ಮೌಲ್ಯದತ್ತ ಗಮನ ಹರಿಸಬೇಕಾಗಿದೆ. ಒಂದು ವೇಳೆ ವ್ಯವಸ್ಥೆ ಪರಿಧಿಯೊಳಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿದ್ದಲ್ಲಿ ಆಗ ನಾವು ಆ ವ್ಯವಸ್ಥೆಯನ್ನೇ ಬದಲಿಸಬೇಕಾಗುತ್ತದೆ. ನಾವು ಇಲ್ಲಿ ನಮ್ಮ ಬಗ್ಗೆ ಕಾಳಜಿ ವಹಿಸಿ ಎಂದು ಜಾಗತಿಕ ನಾಯಕರಿಗೆ ಕೇಳಲು ಬಂದಿಲ್ಲ. ನೀವು ಈ ಹಿಂದೆ ನಮ್ಮನ್ನು ಕಡೆಗಣಿಸಿದ್ದಿರಿ ಮತ್ತು ಮತ್ತೊಮ್ಮೆ ನೀವು ಕಡೆಗಣಿಸಲಿದ್ದಿರಿ. ನಾವು ಈಗಾಗಲೇ ಎಲ್ಲ ಕ್ಷಮಾಪಣೆಗಳನ್ನು ಮೀರಿದ್ದೇವೆ ಮತ್ತು ಸಮಯವೂ ಮೀರಿದೆ. ನಾವು ಇಲ್ಲಿಗೆ ಬಂದಿರುವುದು ಬದಲಾವಣೆ ಬರುತ್ತಿದೆ ಎಂದು ತಿಳಿಸುವುದಕ್ಕಾಗಿ, ನೀವು ಅದನ್ನು ಇಷ್ಟಪಡಿ ಇಲ್ಲವೇ ಬಿಡಿ. ನಿಜವಾದ ಶಕ್ತಿ ಜನರಿಗೆ ಸೇರಿದ್ದು. ಧನ್ಯವಾದಗಳು"