ನವದೆಹಲಿ: ಭಯೋತ್ಪಾದನೆಯನ್ನು ರಕ್ಷಿಸಲು ಪ್ರಯತ್ನಿಸುವ ಪಾಕಿಸ್ತಾನ ಈಗ ಜಾಗತಿಕ ಒತ್ತಡವನ್ನು ಎದುರಿಸುತ್ತಿದೆ. ಪಾಕಿಸ್ತಾನವು ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ 'ಗಂಭೀರ ಪರಿಣಾಮ ಎದುರಿಸಬೇಕಾದೀತು' ಎಂದು ಇರಾನ್ ಎಚ್ಚರಿಸಿದೆ.
ನೆರೆ ದೇಶಗಳಲ್ಲಿ ಪಾಕಿಸ್ತಾನವು ಭಯೋತ್ಪಾದನೆಯನ್ನು ಹರಡಕೂಡದು ಎಂದು ಇರಾನ್ ಕೂರ್ಡ್ ಸೈನ್ಯದ ಕಮಾಂಡರ್ ಹೇಳಿದ್ದಾರೆ. ಪಾಕಿಸ್ತಾನವು ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ 'ಗಂಭೀರ ಪರಿಣಾಮ ಎದುರಿಸಬೇಕಾದೀತು' ಎಂದು ಅವರು ಎಚ್ಚರಿಸಿದ್ದಾರೆ.
ಇರಾನ್ ಸಹ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಒತ್ತಡವನ್ನು ಎದುರಿಸುತ್ತಿದೆ. ಫೆಬ್ರವರಿ 13 ರಂದು, ಆತ್ಮಾಹುತಿ ದಾಳಿ ನಡೆಸಿರುವ ಪಾಕಿಸ್ತಾನ ಇರಾನ್ನ ಪ್ರತಿಷ್ಠಿತ ರೆವಲ್ಯೂಷನರಿ ಗಾರ್ಡ್ಸ್ ಪಡೆಯ 27 ಯೋಧರನ್ನು ಕೊಂದಿರುವುದಾಗಿ ಇರಾನ್ ಆರೋಪಿಸಿದೆ. ಈ ತಪ್ಪಿಗಾಗಿ ಭಾರಿ ಬೆಲೆ ತೆರಬೇಕಾಗುತ್ತದೆ ಇದಕ್ಕೆ ಸಿದ್ಧರಾಗಿ ಎಂದು ಇರಾನ್ನ ರೆವಲ್ಯುಷನರಿ ಗಾರ್ಡ್ಸ್ನ ಮೇಜರ್ ಜನರಲ್ ಮೊಹಮ್ಮದ್ ಅಲಿ ಜಾಫರಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದರು. ಇರಾನ್ ಸೇನಾಪಡೆ ಮೇಲೆ ದಾಳಿ ನಡೆಸುವ ಸುನ್ನಿ ಮುಸ್ಲಿಮರ ಜೈಶ್ ಅಲ್ ಅದಲ್ (ನ್ಯಾಯದ ಸೇನೆ) ಗುಂಪುಗಳಿಗೆ ಬೆಂಬಲ ನೀಡುತ್ತಿರುವ ರಾಷ್ಟ್ರಕ್ಕೆ ತಿರುಗೇಟು ನೀಡುವುದಾಗಿ ಇರಾನ್ ಎಚ್ಚರಿಕೆ ನೀಡಿದೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಪ್ರದೇಶದಲ್ಲಿ ಫೆಬ್ರವರಿ 14ರಂದು ಸಿಆರ್‌ಪಿಎಫ್ ಯೋಧರ ಮೇಲೆ ನಡೆಸಿದ ಉಗ್ರರ ದಾಳಿಯಲ್ಲಿ ಕನಿಷ್ಠ 44 ಮಂದಿ ಹುತಾತ್ಮರಾಗಿದ್ದಾರೆ. ಈ ದಾಳಿಯ ಜವಾಬ್ದಾರಿಯನ್ನು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ತೆಗೆದುಕೊಂಡಿದೆ.
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತೀವ್ರವಾಗಿ ಖಂಡಿಸಿದೆ. ಅಲ್ಲದೆ, ಉಗ್ರರ ವಿರುದ್ಧ ಕಟ್ಟು-ನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ. ಜೊತೆಗೆ ಇಂತಹ ಉಗ್ರ ಸಂಘತನೆಗಳಿಗೆ ಆರ್ಥಿಕ ನೆರವು ನೀಡುವುದನ್ನು ನಿಲ್ಲಿಸಬೇಕು ಎಂದು ಭದ್ರತಾ ಮಂಡಳಿ ಹೇಳಿದೆ.