ಉಗ್ರ ದಾಳಿಗೆ ಹಾದಿ ಮಾಡಿಕೊಟ್ಟ ಇಸ್ರೇಲ್ ಗುಪ್ತಚರ ವೈಫಲ್ಯ: ಗಾಜಾ ಗಡಿ ಭದ್ರತೆಯನ್ನು ಭೇದಿಸಿದ ಹಮಾಸ್

ಯೋಮ್ ಕಿಪ್ಪುರ್ ಯುದ್ಧವನ್ನು ಅಕ್ಟೋಬರ್ ಯುದ್ಧ ಎಂದೂ ಕರೆಯಲಾಗುತ್ತಿದ್ದು, ಅಕ್ಟೋಬರ್ 6, 1973ರಂದು ಆರಂಭಗೊಂಡಿತು. ಈಜಿಪ್ಟ್ ಮತ್ತು ಸಿರಿಯಾಗಳು ಜೊತೆಯಾಗಿ, ಯಹೂದಿಗಳ ರಜೆಯ ದಿನವಾದ 'ಯೋಮ್ ಕಿಪ್ಪುರ್' ದಿನದಂದು ಅನಿರೀಕ್ಷಿತವಾಗಿ ದಾಳಿ ನಡೆಸಿದವು. ಈ ಯುದ್ಧ, 1967ರಲ್ಲಿ ನಡೆದ ಆರು ದಿನಗಳ ಯುದ್ಧದಲ್ಲಿ ಅರಬ್ ಪ್ರಾಂತ್ಯಗಳು ಇಸ್ರೇಲ್‌ಗೆ ಕಳೆದುಕೊಂಡ ಪ್ರಾಂತ್ಯಗಳನ್ನು ಮರುಗಳಿಸುವ ಉದ್ದೇಶ ಹೊಂದಿತ್ತು. 

Written by - Girish Linganna | Last Updated : Oct 9, 2023, 01:39 PM IST
  • ಇಸ್ರೇಲ್ ಸಂಪೂರ್ಣ ಮಧ್ಯ ಪೂರ್ವದಲ್ಲಿ ಅತ್ಯಂತ ಸಮರ್ಥ ಮತ್ತು ಅತಿಹೆಚ್ಚು ಹಣದ ಹೂಡಿಕೆ ಹೊಂದಿರುವ ಗುಪ್ತಚರ ಸಂಸ್ಥೆಗಳನ್ನು ಹೊಂದಿದೆ.
  • ಪ್ಯಾಲೆಸ್ತೀನ್ ಉಗ್ರ ಗುಂಪುಗಳ ಒಳಗೆ, ಜೊತೆಗೆ ಲೆಬನಾನ್, ಸಿರಿಯಾ ಮತ್ತಿತರ ದೇಶಗಳಲ್ಲೂ ಇಸ್ರೇಲ್ ತನ್ನ ಮಾಹಿತಿದಾರರು ಮತ್ತು ಗುಪ್ತಚರರನ್ನು ಹೊಂದಿದೆ.
  • ಈ ಹಿಂದೆ, ಇಸ್ರೇಲ್ ಉಗ್ರವಾದಿ ನಾಯಕರ ಪ್ರತಿಯೊಂದು ಚಲನವಲನಗಳನ್ನು ನಿಖರವಾಗಿ ತಿಳಿದುಕೊಂಡು, ಅತ್ಯಂತ ಕರಾರುವಾಕ್ಕಾಗಿ ಅವರ ಹತ್ಯೆಯನ್ನು ನಡೆಸುತ್ತಿತ್ತು.
ಉಗ್ರ ದಾಳಿಗೆ ಹಾದಿ ಮಾಡಿಕೊಟ್ಟ ಇಸ್ರೇಲ್ ಗುಪ್ತಚರ ವೈಫಲ್ಯ: ಗಾಜಾ ಗಡಿ ಭದ್ರತೆಯನ್ನು ಭೇದಿಸಿದ ಹಮಾಸ್ title=

ಅಪಾರ ಪ್ರಮಾಣದ ರಕ್ಷಣಾ ಸಂಪನ್ಮೂಲಗಳನ್ನು ಹೊಂದಿರುವ ಇಸ್ರೇಲ್ ಅಧಿಕಾರಿಗಳು ಇಂದು ತಮ್ಮ ಭದ್ರತೆಯನ್ನು ಆಶ್ಚರ್ಯ ಆಘಾತದಿಂದ ಗಮನಿಸುತ್ತಿದ್ದಾರೆ. ಹಮಾಸ್ ಕಡೆಯಿಂದ ಇಂತಹ ಒಂದು ಭಾರೀ ಆಕ್ರಮಣ ಅದು ಹೇಗೆ ನಮ್ಮ ಗುಪ್ತಚರ ಇಲಾಖೆಯ ಗಮನಕ್ಕೆ ಬಂದಿಲ್ಲ ಎನ್ನುವುದನ್ನೇ ಇನ್ನೂ ಇಸ್ರೇಲ್ ಚಿಂತಿಸುತ್ತಿದೆ.

ಇಸ್ರೇಲ್ ಮತ್ತು ಗಾಜಾ ಪಟ್ಟಿಯ ನಡುವೆ ಭಾರೀ ಭದ್ರತೆಯ ಗಡಿ ಇದ್ದರೂ, ಒಂದಷ್ಟು ಶಸ್ತ್ರಸಜ್ಜಿತ ಹಮಾಸ್ ಉಗ್ರರು ಗಡಿಯನ್ನು ಭೇದಿಸಿ ಒಳ ನುಸುಳಿದ್ದರು. ಇದೇ ಸಂದರ್ಭದಲ್ಲಿ, ಗಾಜಾ ಪಟ್ಟಿಯಿಂದ ಇಸ್ರೇಲ್ ಕಡೆಗೆ ಸಾವಿರಾರು ರಾಕೆಟ್‌ಗಳು ಹಾರಿ ಬಂದಿದ್ದವು.

ಶಿನ್ ಬೆಟ್ (ಇಸ್ರೇಲಿನ ಆಂತರಿಕ ಗುಪ್ತಚರ ಸಂಸ್ಥೆ) ಮತ್ತು ಮೊಸಾದ್ (ಇಸ್ರೇಲಿನ ಅಂತಾರಾಷ್ಟ್ರೀಯ ಗುಪ್ತಚರ ಸಂಸ್ಥೆ) ನಡುವಿನ ಉತ್ತಮ ಪರಸ್ಪರ ಸಹಯೋಗ, ಮತ್ತು ಇಸ್ರೇಲ್ ಡಿಫೆನ್ಸ್ ಫೋರ್ಸ್ (ಐಡಿಎಫ್) ಹೊಂದಿರುವ ಭಾರೀ ರಕ್ಷಣಾ ಸಂಪನ್ಮೂಲಗಳು ಇದ್ದಾಗ್ಯೂ ಇಂತಹ ಭಾರೀ ದಾಳಿ ನಡೆದಿರುವುದು ಆಶರ್ಯಕರ ವಿಚಾರವಾಗಿದೆ. ಒಂದು ವೇಳೆ ರಕ್ಷಣಾ ಮತ್ತು ಗುಪ್ತಚರ ಸಂಸ್ಥೆಗಳು ಈ ದಾಳಿಯ ಸಾಧ್ಯತೆಯ ಕುರಿತು ಮಾಹಿತಿ ಹೊಂದಿದ್ದರೂ, ಅದನ್ನು ತಡೆಯುವ ಕುರಿತು ಯಾವುದೇ ಕ್ರಮ ಕೈಗೊಳ್ಳದಿರುವುದು ಪ್ರಶ್ನೆಯಾಗಿದೆ.

ಇಸ್ರೇಲ್ ಸಂಪೂರ್ಣ ಮಧ್ಯ ಪೂರ್ವದಲ್ಲಿ ಅತ್ಯಂತ ಸಮರ್ಥ ಮತ್ತು ಅತಿಹೆಚ್ಚು ಹಣದ ಹೂಡಿಕೆ ಹೊಂದಿರುವ ಗುಪ್ತಚರ ಸಂಸ್ಥೆಗಳನ್ನು ಹೊಂದಿದೆ.

ಇದನ್ನೂ ಓದಿ- ಜೆರುಸಲೇಮ್ ಮೇಲೆ ಹಮಾಸ್ ಉಗ್ರದಾಳಿ: ಇಸ್ರೇಲ್ - ಪ್ಯಾಲೆಸ್ತೀನ್ ಕದನದ ಮಧ್ಯೆ ಭಾರತದ ಸಂಕೀರ್ಣ ಪಾತ್ರ ಮತ್ತು ಪರಿಣಾಮಗಳು

ಪ್ಯಾಲೆಸ್ತೀನ್ ಉಗ್ರ ಗುಂಪುಗಳ ಒಳಗೆ, ಜೊತೆಗೆ ಲೆಬನಾನ್, ಸಿರಿಯಾ ಮತ್ತಿತರ ದೇಶಗಳಲ್ಲೂ ಇಸ್ರೇಲ್ ತನ್ನ ಮಾಹಿತಿದಾರರು ಮತ್ತು ಗುಪ್ತಚರರನ್ನು ಹೊಂದಿದೆ.

ಈ ಹಿಂದೆ, ಇಸ್ರೇಲ್ ಉಗ್ರವಾದಿ ನಾಯಕರ ಪ್ರತಿಯೊಂದು ಚಲನವಲನಗಳನ್ನು ನಿಖರವಾಗಿ ತಿಳಿದುಕೊಂಡು, ಅತ್ಯಂತ ಕರಾರುವಾಕ್ಕಾಗಿ ಅವರ ಹತ್ಯೆಯನ್ನು ನಡೆಸುತ್ತಿತ್ತು.

ಹಲವಾರು ಸಂದರ್ಭಗಳಲ್ಲಿ, ಇಂತಹ ದಾಳಿಗಳಿಗೆ ಮುನ್ನ, ಇಸ್ರೇಲಿ ಗುಪ್ತಚರರು ತಮ್ಮ ಗುರಿಯಾಗಿರುವ ವ್ಯಕ್ತಿಯ ಕಾರಿನಲ್ಲಿ ಜಿಪಿಎಸ್ ಟ್ರ್ಯಾಕರ್ ಅಳವಡಿಸಿರುತ್ತಿದ್ದರು. ಅದರ ಸಹಾಯದಿಂದ, ಅವರ ಚಲನವಲನಗಳನ್ನು ತಿಳಿದುಕೊಂಡು, ಡ್ರೋನ್ ದಾಳಿ ನಡೆಸಲಾಗುತ್ತಿತ್ತು. ಈ ಹಿಂದೆ ಇಸ್ರೇಲ್ ತಮ್ಮ ಗುರಿಯಾಗಿರುವ ಉಗ್ರ ಮುಖಂಡರನ್ನು ಸಂಹರಿಸಲು ಮೊಬೈಲ್ ಫೋನ್‌ಗಳನ್ನು ಸ್ಫೋಟಿಸುತ್ತಿತ್ತು.

ಗಾಜಾ ಮತ್ತು ಇಸ್ರೇಲ್ ಗಡಿಯಾದ್ಯಂತ ಇರುವ ಉದ್ವಿಗ್ನ ಗಡಿ ಬೇಲಿಯಾದ್ಯಂತ ಕಣ್ಗಾವಲು ಕ್ಯಾಮರಾಗಳು, ಚಲನೆಯನ್ನು ಗುರುತಿಸುವ ಸೆನ್ಸರ್‌ಗಳು ಮತ್ತು ಗಸ್ತು ಸೇನಾಪಡೆಗಳನ್ನು ಅಳವಡಿಸಲಾಗಿದೆ.

ಮುಳ್ಳು ತಂತಿಯ ಬೇಲಿಗಳನ್ನು 'ಸ್ಮಾರ್ಟ್ ಬ್ಯಾರಿಯರ್' ಎಂಬ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇದೇ ರೀತಿಯ ದಾಳಿಗಳನ್ನು ತಡೆಯುವ ಉದ್ದೇಶವನ್ನು ಹೊಂದಿದೆ.

'ಸ್ಮಾರ್ಟ್ ಬ್ಯಾರಿಯರ್' ಎನ್ನುವುದು ಒಂದು ತಾಂತ್ರಿಕವಾಗಿ ಆಧುನಿಕವಾದ, ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವದ ರಕ್ಷಣಾ ಬೇಲಿಯಾಗಿದ್ದು, ಸುರಕ್ಷತೆಯನ್ನು ಹೆಚ್ಚಿಸುವ, ಅನಧಿಕೃತ ಪ್ರವೇಶವನ್ನು ತಡೆಯುವ ಗುರಿ ಹೊಂದಿದೆ.

ಇದನ್ನೂ ಓದಿ- ಭಾರತೀಯ ವಾಯುಪಡೆಯ ದಿನಾಚರಣೆ : ಭಾರತಕ್ಕೆ 91 ವರ್ಷಗಳ ಸೇವೆ ಮತ್ತು ಶೌರ್ಯ

ಆದರೂ, ಹಮಾಸ್ ಉಗ್ರರು ಈ ಬೇಲಿಯನ್ನು ಭೇದಿಸಿ, ಈ ಬೇಲಿಗಳನ್ನು ಕೊರೆದು ಇಸ್ರೇಲ್ ಒಳಗೆ ಪ್ರವೇಶಿಸಿದ್ದಾರೆ. ಅದರೊಡನೆ, ಸಮುದ್ರ ಮಾರ್ಗದಿಂದ ಮತ್ತು ಪ್ಯಾರಾ ಗ್ಲೈಡರ್‌ಗಳ ಮೂಲಕ ಇಸ್ರೇಲ್ ಪ್ರವೇಶಿಸಿದ್ದಾರೆ.

ಇಸ್ರೇಲಿನ ಮೂಗಿನ ಕೆಳಗೇ, ಹಮಾಸ್ ಗಡಿಯನ್ನು ಭೇದಿಸಿ, ಸಂಪೂರ್ಣವಾಗಿ ಸಮನ್ವಯ ಹೊಂದಿ ಸಂಕೀರ್ಣವಾದ ದಾಳಿಯನ್ನು ನಡೆಸಿ, ಸಾವಿರಾರು ರಾಕೆಟ್‌ಗಳನ್ನು ಸಂಗ್ರಹಿಸಿ ಅವುಗಳನ್ನು ಇಸ್ರೇಲ್ ಮೇಲೆ ಪ್ರಯೋಗಿಸಿದ್ದು ಹಮಾಸ್ ಎಷ್ಟು ಸಾಮರ್ಥ್ಯ ಗಳಿಸಿದೆ ಎಂಬುದನ್ನು ಸಾಬೀತುಪಡಿಸುತ್ತದೆ.

ಇಸ್ರೇಲ್ ಮಾಧ್ಯಮಗಳು ತಮ್ಮ ರಾಜಕೀಯ ನಾಯಕರು ಮತ್ತು ಮಿಲಿಟರಿ ಮುಖಂಡರನ್ನು ಇಂತಹ ಸನ್ನಿವೇಶ ಹೇಗೆ ನಿರ್ಮಾಣವಾಯಿತು, ಅದರಲ್ಲೂ 1973ರ ಅಕ್ಟೋಬರ್ ತಿಂಗಳಲ್ಲಿ ನಡೆದ ಇಂತಹದ್ದೇ ಅನಿರೀಕ್ಷಿತ ದಾಳಿಯಾದ ಯೋಮ್ ಕಿಪ್ಪುರ್ ಯುದ್ಧದ 50ನೇ ವರ್ಷದ ಅವಧಿಯಲ್ಲಿ ಹೇಗೆ ನಡೆಯಿತು ಎಂದು ಪ್ರಶ್ನಿಸುತ್ತಿವೆ.

ಯೋಮ್ ಕಿಪ್ಪುರ್ ಯುದ್ಧವನ್ನು ಅಕ್ಟೋಬರ್ ಯುದ್ಧ ಎಂದೂ ಕರೆಯಲಾಗುತ್ತಿದ್ದು, ಅಕ್ಟೋಬರ್ 6, 1973ರಂದು ಆರಂಭಗೊಂಡಿತು. ಈಜಿಪ್ಟ್ ಮತ್ತು ಸಿರಿಯಾಗಳು ಜೊತೆಯಾಗಿ, ಯಹೂದಿಗಳ ರಜೆಯ ದಿನವಾದ 'ಯೋಮ್ ಕಿಪ್ಪುರ್' ದಿನದಂದು ಅನಿರೀಕ್ಷಿತವಾಗಿ ದಾಳಿ ನಡೆಸಿದವು. ಈ ಯುದ್ಧ, 1967ರಲ್ಲಿ ನಡೆದ ಆರು ದಿನಗಳ ಯುದ್ಧದಲ್ಲಿ ಅರಬ್ ಪ್ರಾಂತ್ಯಗಳು ಇಸ್ರೇಲ್‌ಗೆ ಕಳೆದುಕೊಂಡ ಪ್ರಾಂತ್ಯಗಳನ್ನು ಮರುಗಳಿಸುವ ಉದ್ದೇಶ ಹೊಂದಿತ್ತು. ಯೋಮ್ ಕಿಪ್ಪುರ್ ಯುದ್ಧ ಮಧ್ಯ ಪೂರ್ವ ಮತ್ತು ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯ ಮೇಲೆ ಭಾರೀ ಪರಿಣಾಮ ಬೀರಿತ್ತು.

ಇದನ್ನೂ ಓದಿ- ಭಾರತದ ವಾಯು ರಕ್ಷಣೆಯ ವಿಸ್ತರಣೆ: ವಿಶೋರದ್ ಕ್ಷಿಪಣಿ ವ್ಯವಸ್ಥೆ

ಈಗಿನ ಸನ್ನಿವೇಶದಲ್ಲಿ, ಇಸ್ರೇಲ್ ಹೆಚ್ಚಿನ ಆದ್ಯತೆಗಳನ್ನು ಎದುರಿಸುತ್ತಿದೆ. ಇಸ್ರೇಲ್ ಸದ್ಯ ತನ್ನ ದಕ್ಷಿಣದ ಗಡಿಯಲ್ಲಿ ಒಳನುಸುಳುವಿಕೆಗಳನ್ನು ತಡೆಯಲು, ಇಸ್ರೇಲ್ ಒಳಗಡೆ ವಿವಿಧ ಸಮುದಾಯಗಳೊಡನೆ ಸಂವಹನ ಸಾಧಿಸಿರುವ ಹಮಾಸ್ ಉಗ್ರಗಾಮಿಗಳನ್ನು ತೆಗೆದುಹಾಕುವ ಕಡೆಗೆ ಗಮನ ಹರಿಸಬೇಕು.

ಅದರೊಡನೆ, ಈಗಾಗಲೇ ಸಾಕಷ್ಟು ಇಸ್ರೇಲ್ ನಾಗರಿಕರನ್ನು ಹಮಾಸ್ ವಶಪಡಿಸಿಕೊಂಡಿದ್ದು, ಅವರನ್ನು ರಕ್ಷಿಸಲು ಶಸ್ತ್ರಸಜ್ಜಿತ ರಕ್ಷಣಾ ಕಾರ್ಯಾಚರಣೆ ಅಥವಾ ಶಾಂತಿ ಮಾತುಕತೆಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ.

ಇಸ್ರೇಲ್ ತನ್ನ ಮೇಲೆ ಹಮಾಸ್ ದಾಳಿ ನಡೆಸುತ್ತಿರುವ ಉಡಾವಣಾ ಸ್ಥಳಗಳನ್ನು ನಾಶಪಡಿಸಲು ಪ್ರಯತ್ನ ನಡೆಸಲಿದೆ. ಆದರೆ, ಇಂತಹ ರಾಕೆಟ್‌ಗಳನ್ನು ಎಲ್ಲಿಂದ ಬೇಕಾದರೂ, ಹೆಚ್ಚಿನ ಮುನ್ನೆಚ್ಚರಿಕೆ ಸಿಗದ ರೀತಿಯಲ್ಲಿ ಉಡಾವಣೆ ನಡೆಸಬಹುದಾಗಿರುವುದರಿಂದ, ಅವುಗಳ ಉಡಾವಣಾ ಸ್ಥಳಗಳನ್ನು ಹುಡುಕುವುದು ಒಂದು ರೀತಿ ಹುಲ್ಲಿನ ಬಣವೆಯಲ್ಲಿ ಸೂಜಿ ಹುಡುಕಿದಂತಾಗಲಿದೆ.

ಇಂತಹ ಸನ್ನಿವೇಶದಲ್ಲಿ, ಒಂದು ಉಡಾವಣಾ ತಾಣವನ್ನು ನಾಶಪಡಿಸಲು ಪ್ರಯತ್ನಿಸಿದರೆ, ಬೇರೊಂದು ಕಡೆಯಿಂದ ರಾಕೆಟ್ ದಾಳಿ ಮುಂದುವರಿಯಲಿದೆ. ಇಂತಹ ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ಹುಡುಕುವುದು ಕಷ್ಟಕರವಾಗಿದೆ.

ಈಗ ಇಸ್ರೇಲ್ ಮುಂದಿರುವ ಭಾರೀ ತಲೆನೋವೆಂದರೆ, ಹಮಾಸ್ ಕರೆಗೆ ಓಗೊಟ್ಟು, ಇತರ ಸಂಘಟನೆಗಳು ಇಸ್ರೇಲ್ ವಿರುದ್ಧ ಕೈಜೋಡಿಸದಂತೆ ತಡೆಯುವುದು ಮತ್ತು ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗದಂತೆ ತಡೆಗಟ್ಟುವುದು. ಅದರೊಡನೆ, ಹೆಜ್ಬೊಲ್ಲಾ ಸಂಘಟನೆಯ ಶಸ್ತ್ರಸಜ್ಜಿತ ಉಗ್ರರು ಇಸ್ರೇಲ್ ಉತ್ತರ ದಿಕ್ಕಿನಲ್ಲಿರುವ ಲೆಬನಾನ್ ಗಡಿಯ ಮೂಲಕ ಒಳ ಪ್ರವೇಶಿಸುವ ಅಪಾಯವೂ ಇಸ್ರೇಲ್ ಮುಂದಿದೆ.

ಲೇಖಕರು: ಗಿರೀಶ್ ಲಿಂಗಣ್ಣ
(ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News