ವಾಷಿಂಗ್ಟನ್: ಅಮೆರಿಕದಲ್ಲಿ ಕೊರೊನಾ ವಿಪತ್ತು ಪರಿಹಾರ ಸಾಲ(Covid Loan Fraud)ದಲ್ಲಿ ಸುಮಾರು 1.8 ಮಿಲಿಯನ್ ಅಮೆರಿಕ ಡಾಲರ್(13 ಕೋಟಿ ರೂ.) ವಂಚಿಸಿದ ಪ್ರಕರಣ ಸಂಬಂಧ ಭಾರತೀಯ ಮೂಲದ ಟೆಕ್ ಎಕ್ಸಿಕ್ಯೂಟಿವ್(Indian Origin Tech Executive)ಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ವಾಷಿಂಗ್ಟನ್‌ನ ಕ್ಲೈಡ್ ಹಿಲ್‌ನ 48 ವರ್ಷದ ಮುಕುಂದ್ ಮೋಹನ್(Mukund Mohan) ಮಾರ್ಚ್ 15 ರಂದು ವಂಚನೆ ಮತ್ತು ಹಣ ವರ್ಗಾವಣೆ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ತಿಳಿಸಿದೆ. ಮೈಕ್ರೋಸಾಫ್ಟ್ ಮತ್ತು ಅಮೆಜಾನ್‌ನಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಮೋಹನ್ ಅವರು ತಾವು ನಡೆಸುತ್ತಿದ್ದ ಕಂಪನಿಗಳಿಗೆ ಸರ್ಕಾರದ ಪೇಚೆಕ್ ಪ್ರೊಟೆಕ್ಷನ್ ಪ್ರೋಗ್ರಾಂ ಮೂಲಕ ಮೋಸದಿಂದ ಸಾಲ ಪಡೆದಿದ್ದಾರೆ. ಇದಕ್ಕಾಗಿ ನಕಲಿ ಉದ್ಯೋಗ ದಾಖಲೆಗಳನ್ನು ಸೃಷ್ಟಿಸಿರುವ ಆರೋಪವು ಅವರ ಮೇಲಿತ್ತು.
ಇದನ್ನೂ ಓದಿ: Taliban Warns US: ಅಫ್ಘಾನಿಸ್ತಾನ್ ಜನರನ್ನು ರಕ್ಷಿಸಬೇಡಿ, ದೇಶ ತೊರೆಯಿರಿ, ವಿಶ್ವದ ದೊಡ್ಡಣ್ಣನಿಗೆ ತಾಲಿಬಾನ್ ಅಲ್ಟಿಮೆಟಮ್
ನಕಲಿ ದಾಖಲೆ(False documents)ಗಳನ್ನು ಬಳಸಿ ಮೋಹನ್ 5.5 ಮಿಲಿಯನ್ ಅಮೆರಿಕ ಡಾಲರ್ ಸಾಲಕ್ಕೆ ಅರ್ಜಿ ಸಲ್ಲಿಸಿ, 1.8 ಮಿಲಿಯನ್ ಡಾಲರ್ ಪಡೆದುಕೊಂಡಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿಗಳು 2020ರ ಜುಲೈನಲ್ಲಿ ಅವರನ್ನು ಬಂಧಿಸಿದ್ದರು. ಮೋಹನ್ ಅವರಿಗೆ ಮಂಗಳವಾರ ವಾಷಿಂಗ್ಟನ್‌ನ ಪಶ್ಚಿಮ ಜಿಲ್ಲೆಯಲ್ಲಿ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ.
ನ್ಯಾಯಾಲಯದ ದಾಖಲೆಗಳ ಪ್ರಕಾರ, ಮೋಹನ್ 8 ಮೋಸದ ವಿಪತ್ತು ಸಾಲದ ಅರ್ಜಿಗಳ ಮೂಲಕ 5.5 ಮಿಲಿಯನ್ ಡಾಲರ್ ಗಿಂತಲೂ ಹೆಚ್ಚು ಹಣಕ್ಕೆ ಅರ್ಜಿ ಸಲ್ಲಿಸಿದ್ದರು. ಸಾಲದ ಅರ್ಜಿಗಳಿಗೆ ಬೆಂಬಲವಾಗಿ ಅವರು ನಕಲಿ ಮತ್ತು ತಿರುಚಲಾದ ದಾಖಲೆಗಳನ್ನು ಸಲ್ಲಿಸಿದ್ದರು. ಅದರಲ್ಲಿ ನಕಲಿ ಫೆಡರಲ್ ತೆರಿಗೆ ಫೈಲಿಂಗ್‌ಗಳು ಸಹ ಇದ್ದವು ಎನ್ನಲಾಗಿದೆ. 2019 ರಲ್ಲಿ ಮೋಹನ್ ಸಾಲದಾತರಿಗೆ ತಪ್ಪು ಮಾಹಿತಿ ನೀಡಿದ್ದರು. ಅವರ ಮಹೆಂಜೊ ಇಂಕ್ ಕಂಪನಿಯಲ್ಲಿ ಹಲವಾರು ಉದ್ಯೋಗಿಗಳಿದ್ದು, ವೇತನ ಮತ್ತು ತೆರಿಗೆ(Tax) ರೂಪದಲ್ಲಿ ಲಕ್ಷಾಂತರ ಡಾಲರ್ ಪಾವತಿಸಿರುವುದಾಗಿ ಮಾಹಿತಿ ನೀಡಿದ್ದರು.
ಇದನ್ನೂ ಓದಿ: COVID 22!: ಮೊದಲಿಗಿಂತ ಹೆಚ್ಚು ಮಾರಕವಾಗಲಿದೆ ಕೊರೊನಾ? ವಿಜ್ಞಾನಿಗಳಿಗೆ ಕಾಡುತ್ತಿದೆ Covid-22 ಭಯ
ಆದರೆ ಮಹೆಂಜೊ(Mahenjo) ಕಂಪನಿಯನ್ನು ಮೋಹನ್ 2020ರಲ್ಲಿ ಖರೀದಿಸಿದ್ದಾರೆ. ಆಗ ಕಂಪನಿಯಲ್ಲಿ ಯಾವುದೇ ಉದ್ಯೋಗಿಗಳು ಮತ್ತು ಉದ್ಯಮ ಚಟುವಟಿಕೆಗಳು ನಡೆಯುತ್ತಿರಲಿಲ್ಲ ಎಂದು ತಿಳಿದುಬಂದಿದೆ. ಮೋಹನ್ ಅವರ 8 ಮೋಸದ ಸಾಲದ ಅರ್ಜಿಗಳಲ್ಲಿ 5ಕ್ಕೆ ಅನುಮೋದನೆ ಸಿಕ್ಕಿತ್ತು. ಹೀಗಾಗಿ ಅವರು ಕೋವಿಡ್ -19 ಪರಿಹಾರ ನಿಧಿಯಲ್ಲಿ ಸುಮಾರು 1.8 ಮಿಲಿಯನ್ ಡಾಲರ್ ಹಣವನ್ನು ಮೋಸದಿಂದ ಪಡೆದುಕೊಂಡಿದ್ದರು.
ವಂಚನೆ ಉದ್ದೇಶದಿಂದಲೇ ಮೋಹನ್ ಅವರು ನಕಲಿ ದಾಖಲೆಗಳನ್ನು ಸಲ್ಲಿಸಿ ಹಣ ಪಡೆದುಕೊಂಡಿರುವುದು ಸಾಬೀತಾಗಿದೆ. ಮೋಹನ್ ಅವರಿಗೆ ಜೈಲು ಶಿಕ್ಷೆಯ ಜೊತೆಗೆ 1 ಲಕ್ಷ ಅಮೆರಿಕನ್ ಡಾಲರ್ ದಂಡ ವಿಧಿಸಲಾಗಿದೆ. ಇದಲ್ಲದೆ 1,786,357 ಅಮೆರಿಕನ್ ಡಾಲರ್ ಹಣವನ್ನು ಮರುಪಾವತಿಸುವಂತೆ ಆದೇಶಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.