ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯ ಧ್ವಂಸ

ದೇವಾಲಯದ ಮಾಲೀಕ ಚಿತ್ತ ರಂಜನ್ ಎಂಬವರು ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡು 20 ವರ್ಷಗಳ ಹಿಂದೆ ಶಿವನ ದೇವಸ್ಥಾನವನ್ನು ಕಟ್ಟಿದರು.

Last Updated : Jan 6, 2019, 06:19 PM IST
ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯ ಧ್ವಂಸ title=
ಸಂಗ್ರಹ ಚಿತ್ರ

ಢಾಕಾ: ಎರಡು ಗುಂಪುಗಳ ನಡುವೆ ಉಂಟಾದ ಗಲಭೆಯಲ್ಲಿ ಹಿಂದೂ ದೇವಾಲಯವೊಂದನ್ನು ಧ್ವಂಸಗೊಳಿಸಿದ ಘಟನೆ ಬಾಂಗ್ಲಾದೇಶದ ಸೆಂಟ್ರಲ್ ತಾಂಗೈಲ್ ಜಿಲ್ಲೆಯಲ್ಲಿ ನಡೆದಿದೆ.

ಘಟನೆಯಲ್ಲಿ ಬಾತ್ರಾ ಗ್ರಾಮದಲ್ಲಿನ ದೇವಾಲಯದ ಮಾಲೀಕರ ಕುಟುಂಬದ ಮೇಲೆಯೂ ಎಂಟರಿಂದ ಒಂಭತ್ತು ಜನರಿದ್ದ ಗುಂಪು ದಾಳಿ ನಡೆಸಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.

ಚಿತ್ತ ರಂಜನ್ ಎಂಬವರು ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡು 20 ವರ್ಷಗಳ ಹಿಂದೆ ಶಿವನ ದೇವಸ್ಥಾನವನ್ನು ಕಟ್ಟಿದರು. ಆದರೆ, ಅದೇ ಗ್ರಾಮದ ಸ್ಥಳೀಯ ನಿವಾಸಿಗಳ ಗುಂಪೊಂದು ಆ ಸ್ಥಳವನ್ನು ಆಕ್ರಮಿಸಿಕೊಳ್ಳಲು ದೇವಸ್ಥಾನವನ್ನು ಧ್ವಂಸಗೊಳಿಸಿದ್ದಲ್ಲದೆ, ರಂಜನ್ ಅವರ ಮನೆ ಮತ್ತು ಕುಟುಂಬದ ಸದಸ್ಯರ ಮೇಲೆ ದಾಳಿ ನಡೆಸಿದ್ದಾರೆ ಎಂದು ವರದಿ ಹೇಳಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ರಂಜನ್, ಕಳೆದ 20 ವರ್ಷಗಳಿಗೂ ಹೆಚ್ಚು ಕಾಲ ಜನರು ದೇವಾಲಯದಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಆದರೆ, ಈ ಭೂಮಿಯನ್ನು ಬಲವಂತವಾಗಿ ಆಕ್ರಮಿಸಿಕೊಳ್ಳಲು ದುಷ್ಕರ್ಮಿಗಳು ಹಲವು ಬಾರಿ ಪ್ರಯತ್ನಿಸಿದ್ದಾರೆ ಹೇಳಿದ್ದಾರೆ.

ಘಟನೆ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಾಗಾರ್ಪುರ್ ಪೊಲೀಸ್ ಠಾಣೆ ಅಧಿಕಾರಿ ಚಾರ್ಜ್ ಆಲಂ ಚಂದ್,, ತನಿಖೆಗೆ ಆದೇಶ ನೀಡಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೂ ಯಾರನ್ನೂ ಬಂಧಿಸಲಾಗಿಲ್ಲ.

Trending News