ಅಂತರಿಕ್ಷದ ಬೇರೆ ಗ್ರಹದ ಜನರು ನಮಗೆ ಸಂದೇಶ ರವಾನಿಸುತ್ತಿದ್ದಾರೆಯೇ?

ಬೇರೆ ಗ್ರಹಗಳಲ್ಲಿ ವಾಸಿಸುವ ಪ್ರಾಣಿಗಳ ಕುರಿತು ಬಾಲಿವುಡ್ ಹಾಗೂ ಹಾಲಿವುಡ್ ನಲ್ಲಿ ಹಲವು ಚಿತ್ರಗಳು ನಿರ್ಮಾಣಗೊಂಡಿದ್ದು, ಇವುಗಳಲ್ಲಿ ಅನೇಕ ಚಿತ್ರಗಳು ಸೂಪರ್ ಹಿಟ್ ಆಗಿವೆ. ಒಂದು ವೇಳೆ ನಿಮಗೂ ಕೂಡ ಎಲಿಯನ್ ಗಳ ಕುರಿತಾದ ಕಥೆಗಳು ರೋಚಕವೆನಿಸುತ್ತಿದ್ದರೆ ಈ ಸುದ್ದಿ ಓದಲು ಮರೆಯದಿರಿ.

Last Updated : Feb 13, 2020, 06:37 PM IST
ಅಂತರಿಕ್ಷದ ಬೇರೆ ಗ್ರಹದ ಜನರು ನಮಗೆ ಸಂದೇಶ ರವಾನಿಸುತ್ತಿದ್ದಾರೆಯೇ? title=

ನವದೆಹಲಿ: ಜೀವನ ಕೇವಲ ನಮ್ಮ ಭೂಮಿಯ ಮೇಲೆಯೇ ಇದೆಯೇ? ಅಥವಾ ಎಲಿಯನ್ ಗಳು ಅಸ್ತಿತ್ವದಲ್ಲಿ ಇವೆಯೇ? ಎಂಬ ಪ್ರಶ್ನೆಗಳು ಹಲವರ ಮನಸ್ಸಿನಲ್ಲಿ ಮೂಡುತ್ತವೆ. ಕಳೆದ ಹಲವು ದಿನಗಳಿಂದ ವಿಜ್ಞಾನಿಗಳಿಗೆ ಅಂತರಿಕ್ಷದಿಂದ ಈ ಕುರಿತಾದ ಸಂದೇಶಗಳು ಲಭಿಸುತ್ತಿದ್ದು, ಭೂಮಿಯನ್ನು ಹೊರತುಪಡಿಸಿ ಇತರೆ ಗ್ರಹಗಳಲ್ಲಿಯೂ ಕೂಡ ಜೀವನ ಅಸ್ತಿತ್ವದಲ್ಲಿದೆ ಎನ್ನಲಾಗುತ್ತಿದೆ.

ಬೇರೆ ಗ್ರಹದ ಜನರಿಂದ ಸಂದೇಶ ಸಿಗುವ ಸಾಧ್ಯತೆ
ಕೆನಡಾದ ಇನ್ಸ್ಟಿಟ್ಯೂಟ್ ವೊಂದರಲ್ಲಿನ ವೈಜ್ಞಾನಿಕರು ಅಂತರಿಕ್ಷದಿಂದ ಬರುವ ಇಂತಹುದೇ ಒಂದು ಸಂದೇಶವನ್ನು ತಡೆಹಿಡಿದಿದ್ದಾರೆ. ಪ್ರತಿ 16 ದಿನಗಳಿಗೊಮ್ಮೆ ಈ ಸಂದೇಶ ರವಾನೆಯಗುತ್ತಿರುವುದು ಇಲ್ಲಿ ವಿಶೇಷ. ರೇಡಿಯೋ ಸಿಗ್ನಲ್ ರೂಪದಲ್ಲಿ ಈ ಸಂದೇಶಗಳು ಬರುತ್ತಿವೆ. ಕೆಲ ನಿರ್ಧಿಷ್ಟ ಸಮಯದಲ್ಲಿ ಈ ಸಂದೇಶ ಬಿತ್ತರಗೊಳ್ಳುತ್ತಿದೆ. ದೂರ ಸಂಪರ್ಕ ವಿಜ್ಞಾನದಲ್ಲಿ ಇವುಗಳಿಗೆ ಫಸ್ಟ್ ರೇಡಿಯೋ ಬ್ರಸ್ಟ್(FRB) ಎಂದು ಕರೆಯಲಾಗುತ್ತದೆ. ಈ ರೇಡಿಯೋ ತರಂಗಗಳ ಹಿಂದಿರುವ ಸಂದೇಶವನ್ನು ಡಿಕೋಡ್ ಮಾಡುವ ಪ್ರಯತ್ನದಲ್ಲಿ ಸದ್ಯ ವಿಜ್ಞಾನಿಗಳು ತೊಡಗಿದ್ದಾರೆ.

ಮೊದಲು ಈ ಸಂಕೇತಗಳು ನಿಯಮಿತವಾಗಿ ಬರುತ್ತಿರಲಿಲ್ಲ. ಆದರೆ, ನಂತರ ಕೆಲ ನಿರ್ಧಿಷ್ಟ ಕಾಲಾಂತರದಲ್ಲಿ ಈ ಸಂದೇಶಗಳು ಬರಲಾರಂಭಿಸಿವೆ ಮತ್ತು ಹೆಚ್ಚು ಸ್ಪಷ್ಟವಾಗಿ ಕೇಳಿಬರುತ್ತಿವೆ. ಇವುಗಳನ್ನು ನಿರ್ಧಿಷ್ಟ ಉದ್ದೇಶದಿಂದ ಕಳುಹಿಸಲಾಗುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಕೆನಡಾ ವಿಜ್ಞಾನಿಗಳು ಈ ಸಂದೇಶಗಳನ್ನು ಹಿಡಿದಿದ್ದಾರೆ
ಅಂತರಿಕ್ಷದಿಂದ ಬರುತ್ತಿರುವ ಈ ತರಂಗ ಸಂದೇಶಗಳನ್ನು ಕೆನಡಾದ CHIMI (CANADIAN HYDROGEN INTENSITY MAPPING EXPERIMENT) ಇನ್ಸ್ಟಿಟ್ಯೂಟ್ ನ ವಿಜ್ಞಾನಿಗಳು ತಡೆಹಿಡಿದಿದ್ದಾರೆ. ಕೆನಡಾದಲ್ಲಿರುವ ಆಸ್ಟ್ರೋಫಿಸಿಕ್ಸ್ ಇನ್ಸ್ಟಿಟ್ಯೂಟ್ ವಿಜ್ಞಾನಿಗಳು ಕಳೆದ ಹಲವು ವರ್ಷಗಳಿಂದ ಈ ಪ್ರಯೋಗದಲ್ಲಿ ನಿರತರಾಗಿದ್ದಾರೆ . ಈ ವೇಳೆ ಸ್ನಾತಕೋತ್ತರ ಅಧ್ಯಯನ ನಡೆಸುತ್ತಿರುವ ಓರ್ವ ವಿದ್ಯಾರ್ಥಿಯ ಗಮನ ಅಂತರಿಕ್ಷದಿಂದ ರವಾನೆಯಾಗುತ್ತಿರುವ ಈ ಸಂದೇಶದ ಮೇಲೆ ಹರಿದಿದೆ. ಈ ರೇಡಿಯೋ ಸಂದೇಶ ಪ್ರತಿ 16 ದಿನಗಳಿಗೊಮ್ಮೆ ರವಾನೆಯಾಗುತ್ತಿದೆ ಎಂಬುದನ್ನು ಮೊಟ್ಟಮೊದಲ ಬಾರಿಗೆ ಈ ವಿದ್ಯಾರ್ಥಿ ಕಂಡುಹಿಡಿದಿದ್ದಾನೆ. ಈ ಸಂದೇಶ ಎಷ್ಟೊಂದು ನಿಯಮಿತವಾಗಿ ರವಾನೆಯಾಗುತ್ತಿವೆ ಎಂದರೆ, ಉಳಿದ ವಿಜ್ಞಾನಿಗಳೂ ಕೂಡ ಇದಕ್ಕೆ ತಮ್ಮ ಒಮ್ಮತದ ಅಭಿಪ್ರಾಯ ನೀಡಿದ್ದು, ಇದು ಕೇವಲ ಕಾಕತಾಳೀಯ ಅಲ್ಲ ಎಂದಿದ್ದಾರೆ.

ಯೂರೋಪಿನ EVN ಟೆಲಿಸ್ಕೊಪ್ ಅಂಕಿ-ಅಂಶಗಳ ಪ್ರಕಾರ ಕೂಡ ಕೆನಡಾ ವಿಜ್ಞಾನಿಗಳ ಈ ಆವಿಷ್ಕಾರಕ್ಕೆ ಪುಷ್ಠಿ ದೊರೆತಿದೆ. ಕಳೆದ ವರ್ಷ ಜೂನ್ 19, 2019 ರಲ್ಲಿ ಇವುಗಳನ್ನು ಕೇಳಿದ ಬಳಿಕ, ಹೈಡ್ರೋಜನ್ ಪರಮಾಣುಗಳ ಮಧ್ಯೆ ನಡೆಯುವ ಕಂಪನಗಳ ಸಹಾಯದಿಂದ ಈ ಸಂಕೇತಗಳನ್ನು ನಮೂದಿಸಿ,  ವಿಜ್ಞಾನಿಗಳು ಅಂಕಿ ಅಂಶಗಳನ್ನು ಸಿದ್ಧಪಡಿಸುತ್ತಿದ್ದಾರೆ. ಈ ವಿಧಾನದಿಂದ ಒಂದು ನಿರ್ಧಿಷ್ಟ ಕಾಲಾಂತರದಲ್ಲಿ ಬರುತ್ತಿರುವ ರೇಡಿಯೋ ತರಂಗಗಳ ಸಂದೇಶದ ಮ್ಯಾಪಿಂಗ್ ನಡೆಸಲಾಗುತ್ತದೆ. ಈ ವಿಶೇಷ ಸಂದೇಶ ವಿಶೇಷ ಪ್ಯಾಟರ್ನ್ ನಲ್ಲಿ ಬರುತ್ತಿದ್ದು, ಅವುಗಳನ್ನು ವಿಜ್ಞಾನಿಗಳು ಡಿಕೋಡ್ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

ತೀವ್ರ ಗತಿ ಹೊಂದಿರುವ ವಸ್ತುವಿನಿಂದ ಈ ಸಂದೇಶ ರವಾನೆಯಾಗುತ್ತಿದೆ
ಈ ಸಂದೇಶಗಳು ಭೂಮಿಯಿಂದ ಸುಮಾರು 500 ಮಿಲಿಯನ್ ಪ್ರಕಾಶ ವರ್ಷ(ಅಂದರೆ ಸುಮಾರು 50 ಕೋಟಿ ಪ್ರಕಾಶವರ್ಷ) ದೂರದಿಂದ ಬರುತ್ತಿವೆ ಎಂಬುದನ್ನು ಕಂಡುಹಿಡಿಯುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಅವರು ಸುಮಾರು 409 ದಿನಗಳ ಕಾಲ ಅಂತರಿಕ್ಷದಿಂದ ಬರುವ ಈ ರೇಡಿಯೋ ತರಂಗಗಳ ಮೇಲೆ ತಮ್ಮ ದೃಷ್ಟಿಯನ್ನು ಕೇಂದ್ರೀಕರಿಸಿದ್ದಾರೆ. ಬಳಿಕ ನಾಲ್ಕು ದಿನಗಳ ಕಾಲ ಈ ಸಂದೇಶಗಳು ಒಂದು ಗಂಟೆಯವರೆಗೆ ಬರಲಾರಂಭಿಸಿವೆ ಎಂಬುದನ್ನು ವಿಜ್ಞಾನಿಗಳು ಈ ವೇಳೆ ಕಂಡು ಹಿಡಿದಿದ್ದಾರೆ. ನಂತರ ಈ ಸಂದೇಶ ಬರುವುದು ನಿಂತುಹೋಗಿದೆ. ನಂತರ ಸುಮಾರು 12 ದಿನಗಳ ಬಳಿಕ ಮತ್ತೆ ಈ ಪ್ರಕ್ರಿಯೆ ಆರಂಭಗೊಂಡು ಸತತ ನಾಲ್ಕು ದಿನಗಳ ಕಾಲ ಮುಂದುವರೆದಿದೆ.

ಈ ತರಂಗಗಳು ವಿವಿಧ ಸ್ಥಾನಗಳಿಂದ ಬರುತ್ತಿರುವುದು ಇಲ್ಲಿ ವಿಶೇಷವಾಗಿದೆ. ಇದರಿಂದ ಈ ತರಂಗಗಳು ಅಂತರಿಕ್ಷದಲ್ಲಿ ಸುತ್ತುವ ಯಾವುದೇ ಒಂದು ಗ್ರಹ ಅಥವಾ ಯಾನದಿಂದ ಬರುತ್ತಿವೆ ಎಂಬುದು ಸ್ಪಷ್ಟವಾಗುತ್ತದೆ. ಏಕೆಂದರೆ, ಫಾಸ್ಟ್ ರೇಡಿಯೋ ಬ್ರಸ್ಟ್ ನಕ್ಷತ್ರಗಳ ಅಥವಾ ಧಾತುಗಳಿಂದ ಕೂಡಿರುವ ಒಂದು ಚಿಕ್ಕ ಗ್ಯಾಲಕ್ಸಿಯಿಂದ ಬಂದಿದೆ. ಆದರೆ, ಎರಡನೇ ಸಂಕೇತ ಆಕಾಶಗಂಗೆಯಂತಿರುವ ಮತ್ತೊಂದು ಸುತ್ತುವ ಗ್ಯಾಲಕ್ಸಿಯಿಂದ ಬಂದಿದೆ.

Trending News