ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 69 ಮಂದಿ ಸಜೀವ ದಹನವಾದ ದಾರುಣ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ಢಾಕಾದ ಚೌಕ್‌ಬಜಾರ್ ಪ್ರದೇಶದ ಮಸೀದಿಯ ಹಿಂಭಾಗವಿರುವ ನಾಲ್ಕು ಅಂತಸ್ತಿನ ಹಾಜಿ ಶಾಹಿದ್ ಮ್ಯಾನ್ಶನ್ ಎಂಬ ಕಟ್ಟಡದಲ್ಲಿ ರಾಸಾಯಕ ಸಂಗ್ರಹಿಸಿಡಲಾಗಿದ್ದು, ನೆಲ ಮಹಡಿಯಲ್ಲಿ ಬುಧವಾರ ರಾತ್ರಿ ಇದ್ದಕ್ಕಿದಂತೆ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಸಮೀಪದ ಜನವಸತಿ ಕಟ್ಟಡಗಳೂ ಬೆಂಕಿಗೆ ಆಹುತಿಯಾಗಿವೆ ಎನ್ನಲಾಗಿದೆ.
ಕಟ್ಟಡದ ಎರಡು, ಮೂರು ಮತ್ತು ನಾಲ್ಕನೇ ಅಂತಸ್ತುಗಳನ್ನು ಗೋದಾಮು ಅಂಟ್ಟು ಪ್ಲಾಸ್ಟಿಕ್ ಫ್ಯಾಕ್ಟರಿಯಾಗಿ ಬಳಸಿಕೊಳ್ಳಲಾಗುತ್ತಿತ್ತು. ಇದರಲ್ಲಿ ಕೆಲವು ವಸತಿ ಫ್ಲಾಟ್ಗಳೂ ಇದ್ದವು ಎನ್ನಲಾಗಿದೆ. ಈ ಬೆಂಕಿ ಅವಘಡದಲ್ಲಿ ಸುಮಾರು 69 ಮಂದಿ ಸಜೀವ ದಹನವಾಗಿದ್ದು, ಮೃತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ಅಲ್ಲದೆ, 10ಕ್ಕೂ ಹೆಚ್ಚು ಮಂದಿ ಕಟ್ಟಡದ ಇತರ ಭಾಗಗಳಲ್ಲಿ ಸಿಲುಕಿದ್ದಾರೆ. ಅವರನ್ನು ರಕ್ಷಿಸಾಲು ಅಗ್ನಿಶಾಮಕ ದಳ ಪ್ರಯತ್ನಿಸುತ್ತಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 50ಕ್ಕೂ ಅಧಿಕ ಜನರು ಈ ಘಟನೆಯಲ್ಲಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಢಾಕಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಸರ್ ಸಾಲಿಮುಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಹಲವರು ಕಟ್ಟಡದಿಂದ ಕೆಳಗೆ ಹಾರಿದ್ದರಿಂದ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಟ್ಟಡದೊಳಗೆ ಸಿಲುಕಿದ್ದವರ ರಕ್ಷಣೆಗೆ ಅಗ್ನಿಶಾಮಕ ವಾಹನಗಳು ದಳ ಶ್ರಮಿಸಿದ್ದು, ಬೆಂಕಿ ಮತ್ತಷ್ಟು ವ್ಯಾಪಿಸುವುದನ್ನು ತಡೆದಿದೆ. ದುರಂತದಲ್ಲಿ ಸಾವನ್ನಪ್ಪಿದವರ ಶವ ಬಹುತೇಕ ಸುಟ್ಟು ಹೋಗಿರುವುದರಿಂದ ಗುರುತು ಪತ್ತೆಯೂ ಸಮಸ್ಯೆಯಾಗಿದೆ.