ತೆಗುಸಿಗಲ್ಪಾ: ಹೊಂಡುರಾಸ್‌ನಲ್ಲಿ ಮೀನುಗಾರಿಕಾ ದೋಣಿ ಪಲ್ಟಿಯಾಗಿದ್ದು, ಇದರಲ್ಲಿ ಕನಿಷ್ಠ 26 ಜನರು ಸಾವನ್ನಪ್ಪಿದ್ದಾರೆ. ಗುರುವಾರ ಬಿಬಿಸಿ ನೀಡಿರುವ ವರದಿಯ ಪ್ರಕಾರ, ಪೂರ್ವ ಮೊಸ್ಕಿಟಿಯಾ ಪ್ರದೇಶದ ಕೆರಿಬಿಯನ್ ಕರಾವಳಿಯಲ್ಲಿ ದೋಣಿ ಮುಳುಗಿದ್ದು, ಇದರಲ್ಲಿದ್ದ 47 ಇತರ ಸವಾರರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಈ ಮಾಹಿತಿ ನೀಡಿರುವುದಾಗಿ ತಿಳಿಸಲಾಗಿದೆ.
ಸೀಗಡಿ ಮೀನುಗಾರಿಕೆಯ ಮೇಲಿನ ಋತುಮಾನದ ನಿಷೇಧವನ್ನು ಸರ್ಕಾರ ತೆಗೆದುಹಾಕಿದ ನಂತರ, ದೋಣಿ ಸಮುದ್ರದಲ್ಲಿ ಇಳಿದಿತ್ತು. 70 ಟನ್‌ಗಳಷ್ಟು ದೋಣಿ ಮೀನುಗಾರರಿಂದ ತುಂಬಿತ್ತು. ಪ್ರಸ್ತುತ ಅಪಘಾತದ ಕಾರಣವನ್ನು ಕಂಡುಹಿಡಿಯಲಾಗಿಲ್ಲ ಮತ್ತು ಅದರ ತನಿಖೆ ಪ್ರಾರಂಭವಾಗಿದೆ ಎನ್ನಲಾಗಿದೆ.
ಸ್ಥಳೀಯ ಮಾಧ್ಯಮ ವರದಿಯ ಪ್ರಕಾರ, ದೋಣಿಯ ಕ್ಯಾಪ್ಟನ್ ಎಸ್‌ಒಎಸ್ ಸಂಕೇತಗಳನ್ನು ಕಳುಹಿಸಿದರೂ ಅದು ಸ್ವಲ್ಪ ಸಮಯದ ನಂತರ ಪಲ್ಟಿ ಹೊಡೆದಿದೆ ಎಂದು ತಿಳಿದು ಬಂದಿದೆ. ಮೃತ ದೇಹಗಳನ್ನು ಮತ್ತು ಬದುಕುಳಿದವರನ್ನು ಪುಟೆರೆ ಲೆಂಪಿರಾದಲ್ಲಿರುವ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ಮಿಲಿಟರಿ ಪಡೆಗಳ ವಕ್ತಾರ ಜೋಸ್ ಮೇಜಾ ಮಾಧ್ಯಮ ಸಂಸ್ಥೆಗೆ ತಿಳಿಸಿದ್ದಾರೆ.
ಬುಧವಾರ ಅಪಘಾತಕ್ಕೆ ಸ್ವಲ್ಪ ಮೊದಲು, ಹವಾಮಾನ ವೈಪರಿತ್ಯದಿಂದಾಗಿ ಮೀನುಗಾರರಿಂದ ತುಂಬಿದ ಮತ್ತೊಂದು ದೋಣಿ ಅದೇ ಪ್ರದೇಶದಲ್ಲಿ ಮುಳುಗಿತು. ಆ ಸಂದರ್ಭದಲ್ಲಿ ಸುಮಾರು 40 ಜನರನ್ನು ರಕ್ಷಿಸಲಾಗಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.