ಬೆಂಗಳೂರು: ದೇಶಾದ್ಯಂತ ಕರೋನಾವೈರಸ್ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹಾಗಾಗಿ ಕರೋನಾವೈರಸ್ ನಿಂದ ಮುಕ್ತಿ ದೊರೆಯುತ್ತಿದೆ ಎಂದು ಜನರು ನಿಟ್ಟುಸಿರು ಬಿಡುವಷ್ಟರಲ್ಲೇ ಚೀನಾದ ಕೆಲವು ಪ್ರದೇಶಗಳಲ್ಲಿ ಕರೋನಾ ಹೊಸ ತಳಿಯ ಹಾವಳಿಯ ವರದಿಗಳು ಆತಂಕ ಸೃಷ್ಟಿಸಿವೆ. ಅಂದರೆ ಕರೋನಾವೈರಸ್ ಪ್ರಕರಣಗಳು ಕಡಿಮೆಯಾಗುತ್ತಿದೆ ಎಂದು ಯಾರೂ ಸಹ ಮೈಮರೆಯುವಂತಿಲ್ಲ. ಈಗ ಮೊದಲಿಗಿಂತಲೂ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗಿರುವುದು ಅತ್ಯಗತ್ಯವಾಗಿದೆ.
ಆರಂಭದ ಎರಡು ಕೋವಿಡ್ ಅಲೆಗಳಲ್ಲಿ ಹೆಚ್ಚು ಜನರು ಸಾವನ್ನಪ್ಪಿದ್ದರು. ಆದರೆ ಕರೋನಾ ಮೂರನೇ ಅಲೆಯಲ್ಲಿ ಕರೋನಾದಿಂದಾಗಿ ಹೆಚ್ಚು ಸಾವು-ನೋವು ಆಗದಂತೆ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಸರ್ಕಾರ ಯಶಸ್ವಿಯಾಯಿತು. ಅದಾಗ್ಯೂ, ಕರೋನಾವೈರಸ್ ಹೊಸ ರೂಪಾಂತರವೂ ದೇಶದಲ್ಲಿ ಕೋವಿಡ್ ನಾಲ್ಕನೇ ಅಲೆಗೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದ್ದು ಕೊರೋನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಇದು ಕೇವಲ ಸರ್ಕಾರದ ಕೆಲಸವಲ್ಲ, ಸಾರ್ವಜನಿಕರ ಕರ್ತವ್ಯವೂ ಹೌದು ಎಂಬುದರಲ್ಲಿ ಎರಡು ಮಾತಿಲ್ಲ.
ಹೌದು, ಕರೋನಾ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ನಮ್ಮ-ನಿಮ್ಮೆಲ್ಲರ ಕರ್ತವ್ಯ. ಇದಕ್ಕೆ ನಿದರ್ಶನ ಎಂಬಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಸಮೀಪದ ಕ್ಲಾರ್ಕ್ ಎಕ್ಸೋಟಿಕಾ ರೆಸಾರ್ಟ್ ನಲ್ಲಿ ಫ್ಯಾಮಿಲಿಯೊಂದು ಕೊರೊನಾ ವಿಶೇಷ ಜಾಗೃತಿಯೊಂದಿಗೆ ಮದುವೆ ಕಾರ್ಯಕ್ರಮ ಮಾಡಿದೆ. ಅಶೋಕ್ ಗಜಾನನ ಎಂಬುವ ವ್ಯಕ್ತಿ ತಮ್ಮ ಮಗಳ ಮದುವೆಯನ್ನು ಕೋವಿಡ್ ಜಾಗೃತಿ ಕಾರ್ಯಕ್ರಮವಾಗಿ ಪರಿವರ್ತಿಸಿದ್ದಾರೆ. ಮದುವೆಯ ನೆಪದಲ್ಲಿ ವಧು-ವರರ ಕುಟುಂಬದವರು, ಸಂಬಂಧಿಕರು ಹಾಗೂ ಸ್ನೇಹಿತರಿಗೆ ಕರೋನಾವೈರಸ್ ಸೋಂಕು ಹರಡುವುದನ್ನು ತಡೆಯುವ ಮಾರ್ಗಗಳ ಬಗ್ಗೆ ತಿಳಿ ಹೇಳುವ ಪ್ರಯತ್ನ ಮಾಡಿದರು.
ಇದನ್ನೂ ಓದಿ- Coronavirus: ಚೀನಾದಲ್ಲಿ ಮತ್ತೆ ಕರೋನಾ ಸ್ಫೋಟ!
ಈ ಜಾಗೃತಿ ಅಭಿಯಾನದ ಸಂದರ್ಭದಲ್ಲಿ ವಧು-ವರರ ಕುಟುಂಬದವರು ಆಮಂತ್ರಣ ಪತ್ರವನ್ನು ಬಳಸಿದ್ದು ವಿಶೇಷವಾಗಿತ್ತು. ಇದಲ್ಲದೆ, ಮದುವೆ ಸಮಾರಂಭ ನಡೆಯುವ ಹಾಲ್‌ನಲ್ಲೂ ಸೋಂಕಿನ ತಡೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದ್ದು ವಿಶೇಷವಾಗಿತ್ತು. ಇದರ ಜೊತೆಗೆ ಕರೋನಾ ಮೂರನೇ ಅಲೆ ಏನೋ ಹೋಯ್ತು.. ಮತ್ತೇ ನಾಲ್ಕನೇ ಅಲೆ ಆರಂಭವಾಗಲಿದೆ.. ಚೀನಾದಲ್ಲಿ ಈಗಾಗ್ಲೇ ಕರೋನಾ ಹೊಸ ಅಲೆಯ ಅಬ್ಬರ ಆರಂಭವಾಗಿದ್ದು, ನಮ್ಮ ಭಾರತಕ್ಕೂ ಕಾಲಿಡುವ ಮುನ್ನ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದವರು ಮನವಿ ಮಾಡಿದ್ದಾರೆ.
ಆಮಂತ್ರಣ ಪತ್ರದಲ್ಲಿ ವಧು-ವರರ ಕುಟುಂಬದವರು, ಮದುವೆಯ ದಿನವೂ ಲಾಕ್ ಡೌನ್ ಆಗಬಹುದು, ಮಾಸ್ಕ್ ದರಿಸಿ, ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಸೇರಿದಂತೆ ಸಾಮಾಜಿಕ ಅಂತರ ಪಾಲಿಸುತ್ತ ಸಾಂಪ್ರದಾಯಿಕ ವಿವಾಹ ಆಚರಿಸೋಣ ಎಂದು ಕೋವಿಡ್ ಜಾಗೃತಿ ಸಂದೇಶಗಳನ್ನು ಮುದ್ರಿಸಿದ್ದರು. ಇದಲ್ಲದೆ, ಮದುವೆಯ ದಿನವೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಆರೋಗ್ಯವಂತ ಸಮಾಜಕ್ಕಾಗಿ ನಾವೆಲ್ಲಾ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸೋಣ ಎಂಬ ಘೋಷ ವಾಕ್ಯಗಳ ಬಿತ್ತಿ ಪತ್ರಗಳು ಹಾಗೂ ಬ್ಯಾನರ್ ಹಿಡಿದು ಮದುವೆಗಾಗಿ ಬಂದ ಬಂಧು-ಬಾಂಧವರನ್ನು ಸ್ವಾಗತಿಸಿದರು.
ಇದನ್ನೂ ಓದಿ- Corona Vaccination For Children: 12-14 ವರ್ಷದ ಮಕ್ಕಳ ಲಸಿಕೆಗಾಗಿ ಈ ರೀತಿ ನೋಂದಾಯಿಸಿ
ಸಮಾಜದಲ್ಲಿ ಎಲ್ಲರೂ ಪ್ರತಿಯೊಬ್ಬರ ಆರೋಗ್ಯಕ್ಕೆ ಮನ್ನಣೆ ನೀಡಬೇಕು. ಇದನ್ನು ಮನಗಂಡು ಮದುವೆಯಲ್ಲಿ ಈ ರೀತಿಯ ಜಾಗೃತಿ ಮೂಡಿಸುವ ವ್ಯವಸ್ಥೆ ಮಾಡಲಾಗಿದೆ.. ಹಾಗೇ ಎಲ್ಲರೂ ಕೋವಿಡ್ ನಾಲ್ಕನೇ ಅಲೆ ಬರುವುದಕ್ಕು ಮುನ್ನ ಕೋವಿಡ್ ನಿಯಮಗಳನ್ನು ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ವಧುವಿನ ತಂದೆ ಮನವಿ ಮಾಡಿದರು.
ಒಟ್ಟಾರೆ ಇಂದು ಕೋವಿಡ್ ನಮ್ಮನ್ನು ಬಿಟ್ಟು ಹೊರಟೇ ಹೋಯಿತು ಎಂದು ಮೈ ಮರೆತಿರುವವರ ನಡುವೆ ಕೋವಿಡ್ ನಿಯಂತ್ರಿಸಲು ಮದುವೆಯ ಸಮಾರಂಭದಲ್ಲೂ ಈ ರೀತಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದು ನಿಜಕ್ಕು ಉತ್ತಮ ಬೆಳವಣಿಗೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.