ನಿಮ್ಮ ಮೊಬೈಲ್ ಫೋನ್‌ಗಳಲ್ಲಿವೆ ಆರು ವಿಧದ ಖನಿಜ ಮತ್ತು ಲೋಹಗಳು!

Written by - Girish Linganna | Edited by - Manjunath N | Last Updated : Mar 25, 2023, 05:18 PM IST
  • ಪೊಟ್ಯಾಸಿಯಮ್‌ ಅನ್ನು ಓರ್ಥೋಕ್ಲಾಸ್ ಎಂಬ ಘಟಕದಿಂದ ಪಡೆಯಲಾಗುತ್ತದೆ
  • ಇದನ್ನು ಮೊಬೈಲ್ ಫೋನ್‌ಗಳ ಟಚ್ ಸ್ಕ್ರೀನ್‌ಗಳ ನಿರ್ಮಾಣದಲ್ಲಿ ಬಳಸಲಾಗುತ್ತದೆ
  • ಪೊಟ್ಯಾಸಿಯಮ್‌ ಅನ್ನು ಪೊಟ್ಯಾಸಿಯಮ್‌ ಸಾಲ್ಟ್, ಸಿಲ್ವೈಟ್‌ಗಳಿಂದ ಪಡೆಯಲಾಗುತ್ತದೆ
ನಿಮ್ಮ ಮೊಬೈಲ್ ಫೋನ್‌ಗಳಲ್ಲಿವೆ ಆರು ವಿಧದ ಖನಿಜ ಮತ್ತು ಲೋಹಗಳು! title=

ನಾವು ನಮ್ಮ ಮೊಬೈಲ್ ದೂರವಾಣಿಗಳನ್ನು ಪ್ರತಿ ದಿನವೂ ಬಳಸುತ್ತೇವೆ. ಆದರೆ ನೀವು ಯಾವತ್ತಾದರೂ ಅವುಗಳಲ್ಲಿ ಇರುವ ವಿವಿಧ ಖನಿಜಗಳು ಮತ್ತು ಲೋಹಗಳ ಕುರಿತು ಆಲೋಚಿಸಿದ್ದೀರಾ?

ಇಂದಿನ ಆಧುನಿಕ ಜಗತ್ತಿನಲ್ಲಿ ಮೊಬೈಲ್ ಫೋನ್‌ಗಳು ಎಲ್ಲಾ ಮೂಲೆಯಲ್ಲೂ ಬಳಕೆಯಲ್ಲಿವೆ. ಆದರೆ ನೀವು ಯಾವತ್ತಾದರೂ ಒಂದು ಮೊಬೈಲ್ ಫೋನ್ ಅನ್ನು ನಿರ್ಮಿಸಲು ಬೇಕಾದ ವಸ್ತುಗಳನ್ನು, ಅದರಲ್ಲೂ ವಿಶೇಷವಾಗಿ ಬೆಲೆಬಾಳುವ ಖನಿಜಗಳನ್ನು ಕುರಿತು ಆಲೋಚಿಸಿದ್ದೀರಾ? ಮೊಬೈಲ್ ಫೋನ್‌ಗಳು ಸಾಮಾನ್ಯವಾಗಿ ಹತ್ತು ಹಲವು ಅಪರೂಪದ ವಸ್ತುಗಳನ್ನು ಬಳಸಲಾಗುತ್ತದೆ. ಅವುಗಳನ್ನು ಜಗತ್ತಿನಾದ್ಯಂತ ವಿವಿಧ ದೇಶಗಳಿಂದ ಪಡೆದುಕೊಳ್ಳಲಾಗುತ್ತದೆ. ಹಾಗಾದರೆ ನಿಮ್ಮ ಮೊಬೈಲ್ ಫೋನ್‌ಗಳ ಒಳಗೆ ನಿಜವಾಗಿಯೂ ಯಾವ ವಸ್ತುಗಳಿವೆ?

ತಾಮ್ರ: ಮಾನವರು ಆರಂಭದಲ್ಲಿ ಪತ್ತೆಹಚ್ಚಿದ ಲೋಹಗಳಲ್ಲಿ ಒಂದು ತಾಮ್ರ. ಇದನ್ನು ಸಹಸ್ರಮಾನಗಳಿಂದ ಮಾನವರು ಬಳಸಿಕೊಳ್ಳುತ್ತಿದ್ದಾರೆ. ಕೆಂಪು ಮಿಶ್ರಿತ ಕಂದು ಬಣ್ಣವನ್ನು ಹೊಂದಿರುವ ತಾಮ್ರ ಇತರ ಲೋಹಗಳಿಂದ ಹೆಚ್ಚು ಮೃದುತ್ವ ಹೊಂದಿದೆ. ಇದು ಅತ್ಯುತ್ತಮ ವಿದ್ಯುತ್ ವಾಹಕವಾಗಿದ್ದು, ಈ ಗುಣದಿಂದ ಮೊಬೈಲ್ ಸರ್ಕ್ಯುಟ್‌ಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತದೆ. ತಾಮ್ರವನ್ನು ಕನೆಕ್ಟರ್‌ಗಳು ಮತ್ತು ತಂತಿಗಳಲ್ಲಿ ಬಳಸುವುದರಿಂದ, ತಾಮ್ರ ಮೊಬೈಲ್ ಫೋನಿನ ಇಲೆಕ್ಟ್ರಾನಿಕ್ಸ್‌ನ ಪ್ರಮುಖ ವಸ್ತುವಾಗಿದೆ. ಹೆಚ್ಚಿನ ಪ್ರಮಾಣದ ತಾಮ್ರ ಭೂಪದರದ ಒಳಗಿರುವ ಕರಗಿದ ಬಂಡೆಗಳ ಒಳಗೆ ಲಭ್ಯವಾಗುತ್ತದೆ. ಜಗತ್ತಿನ 28% ತಾಮ್ರವನ್ನು ಉತ್ಪಾದಿಸುವ ಚಿಲಿ, ಜಗತ್ತಿನಲ್ಲಿ ತಾಮ್ರ ಉತ್ಪಾದನೆಯಲ್ಲಿ ನಂಬರ್ ವನ್ ಆಗಿದೆ.

ಇದನ್ನೂ ಓದಿ :"ಸಮುದಾಯಗಳ ನಡುವೆ ವೈಮನಸ್ಸು ಬೆಳೆಯುವಂತೆ ಮಾಡುವುದು ಬಿಜೆಪಿಯ ದುರುದ್ದೇಶ"

ಲಿಥಿಯಂ: ಲಿಥಿಯಂ ಒಂದು ಮೃದುವಾದ, ಹಗುರವಾದ ಲೋಹವಾಗಿದೆ. ಈ ಲೋಹ ಮೊಬೈಲ್ ಫೋನ್‌ಗಳಿಗೆ ಶಕ್ತಿ ನೀಡುತ್ತದೆ. ಮರಳಿ ಚಾರ್ಜ್ ಮಾಡಬಹುದಾದ ಲಿಥಿಯಂ - ಅಯಾನ್ ಬ್ಯಾಟರಿಗಳಲ್ಲಿ ಲಿಥಿಯಂ ಪ್ರಮುಖ ಅಂಗವಾಗಿದೆ. ಲಿಥಿಯಂ ಬ್ಯಾಟರಿಗಳಿಗೆ ಶಕ್ತಿ, ಸಾಂದ್ರತೆ, ವೇಗವಾಗಿ ಮರುಪೂರಣ ಸಾಮರ್ಥ್ಯ, ಹಾಗೂ ಹೆಚ್ಚಿನ ಜೀವಿತಾವಧಿಯನ್ನು ಒದಗಿಸುತ್ತದೆ. ಧಾತು ರೂಪದಲ್ಲಿ ಲಭ್ಯವಾಗುವುದರ ಜೊತೆಗೆ, ಲಿಥಿಯಂ ಅನ್ನು ಲಿಥಿಯಂ ಹೊಂದಿರುವ ಬಂಡೆಗಳು ಮತ್ತು ಲಿಥಿಯಂ ಕ್ಲೋರೈಡ್ ಉಪ್ಪಿನಿಂದಲೂ ಪಡೆಯಬಹುದು. ತಾಮ್ರದಂತೆಯೇ ಲಿಥಿಯಂ ಉತ್ಪಾದನೆಯಲ್ಲೂ ಚಿಲಿ ಜಗತ್ತಿನಲ್ಲಿ ಅಗ್ರಗಣ್ಯ ರಾಷ್ಟ್ರವಾಗಿದ್ದು, ತನ್ನ ಅಟಕಾಮಾ ಉಪ್ಪಿನ ಮರುಭೂಮಿಯಲ್ಲಿ ಅಪಾರ ಪ್ರಮಾಣದಲ್ಲಿ ಲಿಥಿಯಂ ಹೊಂದಿದೆ. ಅರ್ಜೆಂಟೀನಾ ಜಗತ್ತಿನ ಎರಡನೇ ಅತಿದೊಡ್ಡ ಲಿಥಿಯಂ ಉತ್ಪಾದಕ ರಾಷ್ಟ್ರವಾಗಿದೆ.

ಸಿಲಿಕಾ: ಕ್ವಾರ್ಟ್ಸ್‌ ನಲ್ಲಿ ಲಭ್ಯವಿರುವ ಒಂದು ಧಾತುವಾಗಿರುವ ಸಿಲಿಕಾವನ್ನು ಮೊಬೈಲ್ ಫೋನ್‌ಗಳ ಚಿಪ್‌ಗಳು ಮತ್ತು ಮೈಕ್ರೋ ಪ್ರೊಸೆಸರ್‌ಗಳ ನಿರ್ಮಾಣದಲ್ಲಿ ಬಳಸಲಾಗುತ್ತದೆ. ಅದರೊಡನೆ, ಸಿಲಿಕಾ ಭೂಮಿಯ ಹೊರಪದರದಲ್ಲಿ ಲಭ್ಯವಿರುವ ಅಂಶವಾಗಿದೆ. ಮೊಬೈಲ್ ಫೋನ್‌ಗಳ ಚಿಪ್ ನಿರ್ಮಾಣದಲ್ಲಿ ಬಳಸುವ ಸಿಲಿಕಾದ ನಿರ್ದಿಷ್ಟ ಆವೃತ್ತಿ ಅತ್ಯಂತ ಶುದ್ಧವಾದ ಮತ್ತು ಆಂತರಿಕವಾಗಿ ದುರ್ಬಲವಾದ ಸಿಲಿಕಾನ್ ಡೈಆಕ್ಸೈಡ್ ಕಣಗಳನ್ನು ಹೊಂದಿರುತ್ತದೆ. ಹೆಚ್ಚಿನ ಪ್ರಮಾಣದ ಸಿಲಿಕಾ ಮರಳಿನ ಲಭ್ಯತೆಯನ್ನು ಕ್ವೀನ್ಸ್‌ಲ್ಯಾಂಡ್‌, ಆಸ್ಟ್ರೇಲಿಯಾ, ಹಾಗೂ ಅಮೆರಿಕಾದ ಮಿಡ್ ಅಟ್ಲಾಂಟಿಕ್ ಪ್ರದೇಶಗಳಾದ ನಾರ್ತ್ ಕ್ಯಾರೋಲಿನ, ವರ್ಜೀನಿಯಾದಂತಹ ಪ್ರದೇಶಗಳಲ್ಲಿ ಕಾಣಬಹುದು.

ಜರ್ಮೇನಿಯಮ್: ಜರ್ಮೇನಿಯಂ ಅನ್ನು ಮೊಬೈಲ್ ಫೋನ್‌ಗಳಲ್ಲಿ ಬಳಸುವ ಸೆಮಿಕಂಡಕ್ಟರ್‌ಗಳ ನಿರ್ಮಾಣದಲ್ಲಿ ಬಳಸಲಾಗುತ್ತದೆ. ಈ ದುರ್ಬಲ, ಬೆಳ್ಳಿಯಂತೆ ಬೆಳ್ಳಗಿರುವ ಧಾತುವನ್ನು ವಿವಿಧ ಇಲೆಕ್ಟ್ರಾನಿಕ್ ಉಪಕರಣಗಳಲ್ಲಿ ಬಳಸಲಾಗುತ್ತದೆ. ಅಷ್ಟೊಂದು ಅಪರೂಪವಲ್ಲದ ಈ ಖನಿಜವನ್ನು ಜರ್ಮೇನೈಟ್ ಹಾಗೂ ಅರ್ಜಿರೋಡೈಟ್ ಬಂಡೆಗಳ ರಚನೆಗಳಲ್ಲಿ, ಜ಼ಿಂಕ್ (ಸತು) ನಿಕ್ಷೇಪಗಳಲ್ಲಿ ಕಾಣಬಹುದು. ಅಮೆರಿಕಾದ ಬಳಿ ಜರ್ಮೇನೈಟ್ ಲಭ್ಯತೆ ಇದ್ದರೂ, ಅದು ಯುನ್ನಾನ್ ಪ್ರಾಂತ್ಯದಲ್ಲಿ ಜಗತ್ತಿನ 70%ಕ್ಕೂ ಹೆಚ್ಚು ಜರ್ಮೇನಿಯಂ ಉತ್ಪಾದಿಸುವ ಚೀನಾದ ಮೇಲೇ ಅವಲಂಬಿತವಾಗಿದೆ. ಅದರೊಡನೆ, ಇನ್ನರ್ ಮಂಗೋಲಿಯಾ ಪ್ರದೇಶವೂ ಜರ್ಮೇನಿಯಂ ಖನಿಜದ ಉತ್ಪಾದನೆಗೆ ಹೆಸರಾಗಿದೆ.

ಬಾಕ್ಸೈಟ್: ಬಾಕ್ಸೈಟ್ ಗ್ಯಾಲಿಯಮ್ ಖನಿಜದ ಪ್ರಮುಖ ಮೂಲವಾಗಿದ್ದು, ಇದನ್ನು ಎಲ್ಇಡಿ ಬ್ಯಾಕ್‌ಲೈಟ್ ಉತ್ಪಾದನೆಯಲ್ಲಿ ಬಳಸಲಾಗುತ್ತದೆ. ಆ ಮೂಲಕ ನಮ್ಮ ಫೋನ್‌ಗಳು ಕತ್ತಲೆಯ ಸಮಯದಲ್ಲಿ ಪ್ರಕಾಶಮಾನ ಬೆಳಕನ್ನು ಹೊರಸೂಸುತ್ತವೆ. ಭೂಮಿಯ ಬಹುತೇಕ ಬಾಕ್ಸೈಟ್ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಾದ ಪಶ್ಚಿಮ ಆಫ್ರಿಕಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಹಾಗೂ ಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆಸ್ಟ್ರೇಲಿಯಾ ಈ ಖನಿಜದ ಅತಿದೊಡ್ಡ ಉತ್ಪಾದಕ ಎಂಬ ಹೆಸರು ಸಂಪಾದಿಸಿದೆ.ಭೂಮಿಯ ಮೇಲ್ಮೈಯಿಂದ ಮತ್ತು ಭೂಮಿಯ ಆಳದಿಂದ ಬಾಕ್ಸೈಟನ್ನು ಹೊರತೆಗೆಯುವಾಗ ಉಪ ಉತ್ಪನ್ನವಾಗಿ ಗ್ಯಾಲಿಯಮ್ ಸಹ ದೊರೆಯುತ್ತದೆ.

ಇದನ್ನೂ ಓದಿ : 72 ಲಕ್ಷ ರೂ ಕದ್ದ ಆರೋಪದ ಮೇಲೆ ಸೋನು ನಿಗಮ್ ತಂದೆಯ ಮಾಜಿ ಚಾಲಕನ ವಿರುದ್ಧ ಪ್ರಕರಣ

ಪೊಟ್ಯಾಸಿಯಮ್‌: ಪೊಟ್ಯಾಸಿಯಮ್‌ ಅನ್ನು ಓರ್ಥೋಕ್ಲಾಸ್ ಎಂಬ ಘಟಕದಿಂದ ಪಡೆಯಲಾಗುತ್ತದೆ. ಇದನ್ನು ಮೊಬೈಲ್ ಫೋನ್‌ಗಳ ಟಚ್ ಸ್ಕ್ರೀನ್‌ಗಳ ನಿರ್ಮಾಣದಲ್ಲಿ ಬಳಸಲಾಗುತ್ತದೆ. ಪೊಟ್ಯಾಸಿಯಮ್‌ ಅನ್ನು ಪೊಟ್ಯಾಸಿಯಮ್‌ ಸಾಲ್ಟ್, ಸಿಲ್ವೈಟ್‌ಗಳಿಂದ ಪಡೆಯಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಕೆನಡಾ, ರಷ್ಯಾ, ಬೆಲಾರಸ್‌ಗಳಲ್ಲಿ ಪಡೆಯಲಾಗುತ್ತದೆ. ಮೊಬೈಲ್ ಫೋನ್‌ಗಳ ಟಚ್ ಸ್ಕ್ರೀನ್‌ಗಳ ಗಟ್ಟಿತನವನ್ನು ಹೆಚ್ಚಿಸಲು, ಪ್ರತಿದಿನದ ಬಳಕೆಯಲ್ಲಿ ಅವುಗಳು ಹಾಳಾಗದಂತೆ ತಡೆಯಲು, ಅವುಗಳನ್ನು ಅಂತಿಮವಾಗಿ ಪೊಟ್ಯಾಸಿಯಮ್‌ ಸಾಲ್ಟ್‌ಗಳಿಂದ ಬಲವರ್ಧಿಸಲಾಗುತ್ತದೆ.

ಇದನ್ನೂ ಓದಿ : 72 ಲಕ್ಷ ರೂ ಕದ್ದ ಆರೋಪದ ಮೇಲೆ ಸೋನು ನಿಗಮ್ ತಂದೆಯ ಮಾಜಿ ಚಾಲಕನ ವಿರುದ್ಧ ಪ್ರಕರಣ

ಈ ಅಂಕಣದಲ್ಲಿ ನಾವು ಮೊಬೈಲ್ ಉತ್ಪಾದನೆಯಲ್ಲಿ ಬಳಸುವ ಬೆಲೆಬಾಳುವ ಖನಿಜಗಳು ಮತ್ತು ಲೋಹಗಳನ್ನು ಗಮನಿಸಿದ್ದೇವೆ. ಮೊಬೈಲ್ ಫೋನ್‌ಗಳ ಉತ್ಪಾದನೆ ಪ್ರಪಂಚದ ಯಾವುದೇ ಭಾಗದಲ್ಲಿ ನಡೆದರೂ, ಉತ್ಪಾದಕರು ತಮ್ಮ ಮೊಬೈಲ್ ಫೋನ್‌ಗಳು ಪ್ರಖರವಾದ ಡಿಸ್‌ಪ್ಲೇ, ಉತ್ತಮ ವಿದ್ಯುತ್ ವಾಹಕತೆ, ಚಾರ್ಜ್ ಉಳಿಸಿಕೊಳ್ಳಲು, ಧ್ವನಿ ಮುದ್ರಿಸಲು, ಫೋಟೋ ತೆಗೆಯಲು ಮತ್ತು ನಾವು ಸಾಮಾನ್ಯವಾಗಿ ಬಳಸುವ ಕಾರ್ಯಗಳನ್ನು ನಡೆಸಲು ಬೇಕಾದ ಉತ್ಪನ್ನಗಳನ್ನು ಕನಿಷ್ಠ 12 ದೇಶಗಳಿಂದ ಆಮದು ಮಾಡಿಕೊಳ್ಳುತ್ತಾರೆ.

-ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News