ಡೋಪಮೈನ್ ಜಾಲ: ಸ್ಮಾರ್ಟ್‌ಫೋನ್‌ಗಳಿಗೆ ಬಲಿಯಾಗುತ್ತಿದೆಯೇ ನಿಮ್ಮ ಸಂತೋಷ?

Smartphone: 2016ರಲ್ಲಿ, ಜಗತ್ತಿನಲ್ಲಿ 3.67 ಬಿಲಿಯನ್ ಜನರು ಸ್ಮಾರ್ಟ್ ಫೋನ್ ಬಳಕೆದಾರರಿದ್ದರು. ಈ ಸಂಖ್ಯೆ ವಾರ್ಷಿಕವಾಗಿ 300 ಮಿಲಿಯನ್‌ನಿಂದ 800 ಮಿಲಿಯನ್ ನಡುವೆ ಹೆಚ್ಚಳ ಕಂಡು, 2022ರ ವೇಳೆಗೆ ಅಂದಾಜಿಸಿದ ರೀತಿಯಲ್ಲಿ 6.57 ಬಿಲಿಯನ್ ತಲುಪಿತು. 

Written by - Girish Linganna | Last Updated : Feb 12, 2024, 07:38 AM IST
  • ಫಿಲಿಪೈನ್ಸ್ ಜಗತ್ತಿನಲ್ಲಿ ಅತ್ಯಧಿಕ ಸ್ಮಾರ್ಟ್ ಫೋನ್ ಬಳಕೆಯ ಸರಾಸರಿ ಹೊಂದಿದ್ದು, ಅಲ್ಲಿನ ಜನರು ಪ್ರತಿ ದಿನವೂ 5 ಗಂಟೆ 47 ನಿಮಿಷಗಳ ಕಾಲ ಸ್ಮಾರ್ಟ್ ಫೋನ್ ಬಳಸುತ್ತಾರೆ.
  • ಫಿಲಿಪೈನ್ಸ್‌ಗೆ ವ್ಯತಿರಿಕ್ತವಾಗಿ, ಜಪಾನಿನ ಜನತೆ ಅತ್ಯಂತ ಕಡಿಮೆ ಸ್ಮಾರ್ಟ್ ಫೋನ್ ಬಳಕೆಯ ಸರಾಸರಿ ಹೊಂದಿದ್ದು, ಅವರು ದಿನಕ್ಕೆ 1 ಗಂಟೆ 29 ನಿಮಿಷಗಳ ಕಾಲ ಸ್ಮಾರ್ಟ್ ಫೋನ್ ಬಳಸುತ್ತಾರೆ.
  • ಇದೇ ವೇಳೆಗೆ ಭಾರತೀಯರು ಪ್ರತಿದಿನ ಸರಾಸರಿ 4 ಗಂಟೆ 5 ನಿಮಿಷಗಳ ಕಾಲ ಸ್ಮಾರ್ಟ್ ಫೋನ್ ಬಳಸುತ್ತಾರೆ.
ಡೋಪಮೈನ್ ಜಾಲ: ಸ್ಮಾರ್ಟ್‌ಫೋನ್‌ಗಳಿಗೆ ಬಲಿಯಾಗುತ್ತಿದೆಯೇ ನಿಮ್ಮ ಸಂತೋಷ? title=

Dopamine Network: ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಸಾಮಾನ್ಯವಾಗಿ ಓರ್ವ ವ್ಯಕ್ತಿ ಪ್ರತಿದಿನ ತನ್ನ ಸ್ಮಾರ್ಟ್ ಫೋನ್ ಅನ್ನು 3 ಗಂಟೆ 15 ನಿಮಿಷಗಳ ಅವಧಿಗೆ ಬಳಸುತ್ತಾರೆ. ಇನ್ನು ಅಂದಾಜು 20% ಜನರ ಪ್ರತಿದಿನದ ಸರಾಸರಿ ಸ್ಮಾರ್ಟ್ ಫೋನ್ ಬಳಕೆ 4.5 ಗಂಟೆಯ ಅವಧಿಯದ್ದಾಗಿದೆ.

ಆಸಕ್ತಿಕರ ವಿಚಾರವೆಂದರೆ, ಜನರು ತಮ್ಮ ಸ್ಮಾರ್ಟ್ ಫೋನ್ ಅನ್ನು ವಾರದ ದಿನಗಳಲ್ಲಿ ಹೆಚ್ಚಾಗಿ ಬಳಸಿ, ವಾರಾಂತ್ಯದಲ್ಲಿ ಕಡಿಮೆ ಸಮಯಕ್ಕೆ ಬಳಸುತ್ತಾರೆ. ಸರಾಸರಿ ಲೆಕ್ಕಾಚಾರದ ಪ್ರಕಾರ, ಜನರು ತಮ್ಮ ಸ್ಮಾರ್ಟ್ ಫೋನನ್ನು ದಿನವೊಂದಕ್ಕೆ 58 ಬಾರಿ ನೋಡುತ್ತಾರೆ. ಇವುಗಳಲ್ಲಿ ಬಹುತೇಕ ಅರ್ದ ಪಾಲು, ಅಂದರೆ 30ರಷ್ಟು ಬಾರಿ ಜನರು ತಮ್ಮ ಕೆಲಸದ ವೇಳೆಯಲ್ಲೇ ಫೋನ್ ನೋಡುತ್ತಾರೆ.

ಫಿಲಿಪೈನ್ಸ್ ಜಗತ್ತಿನಲ್ಲಿ ಅತ್ಯಧಿಕ ಸ್ಮಾರ್ಟ್ ಫೋನ್ ಬಳಕೆಯ ಸರಾಸರಿ ಹೊಂದಿದ್ದು, ಅಲ್ಲಿನ ಜನರು ಪ್ರತಿ ದಿನವೂ 5 ಗಂಟೆ 47 ನಿಮಿಷಗಳ ಕಾಲ ಸ್ಮಾರ್ಟ್ ಫೋನ್ ಬಳಸುತ್ತಾರೆ. ಫಿಲಿಪೈನ್ಸ್‌ಗೆ ವ್ಯತಿರಿಕ್ತವಾಗಿ, ಜಪಾನಿನ ಜನತೆ ಅತ್ಯಂತ ಕಡಿಮೆ ಸ್ಮಾರ್ಟ್ ಫೋನ್ ಬಳಕೆಯ ಸರಾಸರಿ ಹೊಂದಿದ್ದು, ಅವರು ದಿನಕ್ಕೆ 1 ಗಂಟೆ 29 ನಿಮಿಷಗಳ ಕಾಲ ಸ್ಮಾರ್ಟ್ ಫೋನ್ ಬಳಸುತ್ತಾರೆ. ಇದೇ ವೇಳೆಗೆ ಭಾರತೀಯರು ಪ್ರತಿದಿನ ಸರಾಸರಿ 4 ಗಂಟೆ 5 ನಿಮಿಷಗಳ ಕಾಲ ಸ್ಮಾರ್ಟ್ ಫೋನ್  ಬಳಸುತ್ತಾರೆ.

ಜಾಗತಿಕ ಮೊಬೈಲ್ ಉದ್ಯಮ ಒಂದು ಟ್ರಿಲಿಯನ್ ಡಾಲರ್‌ಗೂ ಹೆಚ್ಚಿನ ಮೌಲ್ಯ ಹೊಂದಿದ್ದು, ಪ್ರತಿ ವರ್ಷವೂ ಇನ್ನಷ್ಟು ಹೆಚ್ಚಿನ ಬೆಳವಣಿಗೆ ಕಾಣುತ್ತಿದೆ. 2016ರ ಬಳಿಕ, ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದ್ದು, ಕನಿಷ್ಠ ಪಕ್ಷ ಮುಂದಿನ ಐದು ವರ್ಷಗಳ ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಲೇ ಇರುವ ಸಾಧ್ಯತೆಗಳಿವೆ. 2016ರಲ್ಲಿ, ಜಗತ್ತಿನಲ್ಲಿ 3.67 ಬಿಲಿಯನ್ ಜನರು ಸ್ಮಾರ್ಟ್ ಫೋನ್ ಬಳಕೆದಾರರಿದ್ದರು. ಈ ಸಂಖ್ಯೆ ವಾರ್ಷಿಕವಾಗಿ 300 ಮಿಲಿಯನ್‌ನಿಂದ 800 ಮಿಲಿಯನ್ ನಡುವೆ ಹೆಚ್ಚಳ ಕಂಡು, 2022ರ ವೇಳೆಗೆ ಅಂದಾಜಿಸಿದ ರೀತಿಯಲ್ಲಿ 6.57 ಬಿಲಿಯನ್ ತಲುಪಿತು. ಒಂದು ಅಂದಾಜಿನ ಪ್ರಕಾರ, 2027ರ ವೇಳೆಗೆ ಜಗತ್ತಿನಲ್ಲಿ ಬಹುತೇಕ 7.69 ಬಿಲಿಯನ್ ಸ್ಮಾರ್ಟ್ ಫೋನ್ ಬಳಕೆದಾರರು ಇರಲಿದ್ದಾರೆ. ಈ ಸಂಖ್ಯೆ ಪ್ರಸ್ತುತ ಜಾಗತಿಕ ಜನಸಂಖ್ಯೆಗಿಂತ ಕೇವಲ 200 ಮಿಲಿಯನ್ ಕಡಿಮೆಯಾಗಿರುತ್ತದಷ್ಟೇ!

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 600 ಮಿಲಿಯನ್‌ಗೂ ಹೆಚ್ಚು ಬಳಕೆದಾರರಿದ್ದಾರೆ. ಇದರಲ್ಲಿ ವಿವಿಧ ವಯೋಮಾನದ ಜನರಿದ್ದು, 53% ಸ್ಮಾರ್ಟ್ ಫೋನ್ ಬಳಕೆದಾರರು 18ರಿಂದ 24 ವರ್ಷದ ವಯೋಮಾನದವರಿದ್ದಾರೆ.

ಇದನ್ನೂ ಓದಿ- Side Effect Of Mobile Use: ನೀವು ಸದಾ ಸ್ಮಾರ್ಟ್‌ಫೋನ್‌ ಬಳಸ್ತೀರಾ! ನಿಮ್ಮ ಬ್ರೈನ್ ಮೇಲೆ ಅದು ಹೇಗೆ ಎಫೆಕ್ಟ್ ಆಗುತ್ತೆ ಗೊತ್ತಾ!

ನಮ್ಮಲ್ಲಿ ಬಹುತೇಕ ಜನರು ನಾವು ಬೆಳಗ್ಗೆ ಎದ್ದ ತಕ್ಷಣವೇ ಮಾಡುವ ಮೊದಲ ಕೆಲಸ ಮತ್ತು ರಾತ್ರಿ ಮಲಗುವ ಮುನ್ನ ಮಾಡುವ ಕೊನೆಯ ಕೆಲಸವೆಂದರೆ ಫೋನ್ ಪರಿಶೀಲಿಸುವುದು. ಪದೇ ಪದೇ ಫೋನ್ ನೋಡಬೇಕು ಎನಿಸುವುದು ನಮ್ಮ ಮೆದುಳಿನಲ್ಲಿರುವ ರಾಸಾಯನಿಕಗಳಿಂದ ಉಂಟಾಗುವ ನಿರಂತರವಾದ ಬಯಕೆಯಾಗಿದೆ.

ಇಂತಹ ನಡವಳಿಕೆಗೆ ಒಂದು ನಿರ್ದಿಷ್ಟ ರಾಸಾಯನಿಕವಾದ ಡೋಪಮೈನ್ ಬಹುಪಾಲು ಕಾರಣವಾಗಿದೆ ಎನ್ನಲಾಗಿದೆ. ಡೋಪಮೈನ್ ಮೆದುಳಿನ ಪ್ರತಿಫಲ ವ್ಯವಸ್ಥೆಯನ್ನು ನಿಯಂತ್ರಿಸುವ ಕಾರಣದಿಂದ, ಅದನ್ನು 'ಫೀಲ್ ಗುಡ್' (ಒಳ್ಳೆಯ ಭಾವನೆ) ರಾಸಾಯನಿಕ ಎಂದು ಕರೆಯಲಾಗುತ್ತದೆ.

ಆದರೆ, ಈ ಸಂತೋಷದ ಭಾವನೆ ಮಾತ್ರವೇ ನಮ್ಮ ಮೇಲೆ ಪರಿಣಾಮ ಬೀರುವುದಲ್ಲ. ನಮ್ಮ ಮೆದುಳಿನ ಡೋಪಮೈನ್ ಗ್ರಾಹಕಗಳೂ ಸಹ ಸಂತೋಷ ನೀಡಬಲ್ಲ ಏನಾದರೂ ಭಾವನೆಯನ್ನು ಎದುರು ನೋಡುತ್ತಿರುತ್ತವೆ. ಈ ನಿರೀಕ್ಷೆಯೇ ನಾವು ಮತ್ತೆ ಮತ್ತೆ ನಮ್ಮ ಫೋನ್ ಪರೀಕ್ಷಿಸುವಂತೆ ಮಾಡುತ್ತದೆ.

ಇನ್ನು ಮೊಬೈಲ್ ಗೇಮ್‌ಗಳು ಮತ್ತು ಸಾಮಾಜಿಕ ಜಾಲತಾಣಗಳು ಮೊಬೈಲ್ ನೋಡುವ ಬಯಕೆ ಹೆಚ್ಚಾಗುವಂತೆ ಮಾಡುತ್ತವೆ.

ಬೆಂಗಳೂರಿನ ಸ್ಪಂದನಾ ಆಸ್ಪತ್ರೆಯ ಮುಖ್ಯ ಮನೋವೈದ್ಯರಾದ ಡಾ. ಮಹೇಶ್ ಗೌಡ ಅವರ ಪ್ರಕಾರ, ಸ್ಮಾರ್ಟ್ ಫೋನ್‌ಗಳು ಒಂದು ರೀತಿ ಸಿರಿಂಜ್ ರೀತಿಯಲ್ಲಿ ಇದ್ದು, ಕೋಟ್ಯಂತರ ಜನರಿಗೆ 'ಡಿಜಿಟಲ್ ಡೋಪಮೈನ್' ಪೂರೈಕೆ ಆಗುವಂತೆ ಮಾಡುತ್ತವೆ.

ಮಾದಕ ದ್ರವ್ಯಗಳು ಮತ್ತು ಮದ್ಯ ನಮ್ಮ ಮೆದುಳಿನ ಯಾವ ಪ್ರದೇಶಗಳನ್ನು ಹೆಚ್ಚು ಸಕ್ರಿಯಗೊಳಿಸುತ್ತವೋ, ಅದೇ ರೀತಿ ವರ್ತಿಸಿ, ಡೋಪಮೈನ್ ಬಿಡುಗಡೆಗೊಳಿಸುತ್ತವೆ. ನಿರಂತರ ಬಳಕೆಯ ಮೂಲಕ, ನಮ್ಮ ಮೆದುಳು ಡೋಪಮೈನ್ ಚಟುವಟಿಕೆ ಕಡಿಮೆಗೊಳಿಸುವ ಮೂಲಕ ಹೊಂದಿಕೊಳ್ಳುತ್ತದೆ. ಇದು ಡೋಪಮೈನ್ ಗ್ರಾಹಕಗಳ ಕುಗ್ಗುವಿಕೆಯ ಮೂಲಕ ನೆರವೇರುತ್ತದೆ.

ನಿರಂತರವಾಗಿ ಈ ರೀತಿಯ ಸ್ಥಿತಿಯನ್ನು ಅನುಭವಿಸುತ್ತಾ ಹೋದರೆ, ನಮ್ಮ ಮೆದುಳಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಡೋಪಮೈನ್ ಇಲ್ಲದಿರುವ ಸ್ಥಿತಿಗೆ ತಲುಪಬಹುದು. ಇದರ ಪರಿಣಾಮವಾಗಿ ಖಿನ್ನತೆ, ಆತಂಕ, ನಿದ್ರೆಗೆ ತೊಂದರೆ, ಕಿರಿಕಿರಿಯಾಗುವಿಕೆ, ಮತ್ತು ಬಲವಾದ ಬಯಕೆಗಳು ಉಂಟಾಗುತ್ತವೆ. ಇಂತಹ ಪರಿಸ್ಥಿತಿ ಉಂಟಾದಾಗ ನಾವು ಡೋಪಮೈನ್ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಡಿಜಿಟಲ್ ಬಳಕೆಯನ್ನು ಹೆಚ್ಚಿಸಿ, ಮನಸ್ಸಿಗೆ ಸಮಾಧಾನ ತಂದುಕೊಳ್ಳಲು ಪ್ರಯತ್ನಿಸುತ್ತೇವೆ.

ಒಂದು ವೇಳೆ ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆಯಂತಹ ವರ್ತನೆಗಳನ್ನೂ ಮಾದಕ ದ್ರವ್ಯ ವ್ಯಸನದಂತಹ ಗಂಭೀರ ಸಮಸ್ಯೆಯ ರೀತಿ ಪರಿಗಣಿಸಬೇಕೇ ಎಂಬ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಒಂದಷ್ಟು ಜನರು ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಹೆಚ್ಚು ಡೋಪಮೈನ್ ಬಿಡುಗಡೆಯಾಗುತ್ತದಾದರೂ, ಅದು ಕೊಕೇನ್ ಅಥವಾ ಮೆತಾಂಫೆಟಮೈನ್ಸ್ ಥರದ ಮಾದಕ ದ್ರವ್ಯಗಳಿಂದ ಬಿಡುಗಡೆಯಾಗುವ ಪ್ರಮಾಣಕ್ಕಿಂತ ಬಹಳಷ್ಟು ಕಡಿಮೆಯಾಗಿರುವುದರಿಂದ, ಸ್ಮಾರ್ಟ್ ಫೋನ್ ಬಳಕೆ ಮತ್ತು ಮಾದಕ ದ್ರವ್ಯ ಸೇವನೆಯ ನಡುವೆ ಹೋಲಿಕೆ ಸಲ್ಲದು ಎಂದು ಹಲವರು ಅಭಿಪ್ರಾಯ ಪಡುತ್ತಾರೆ.

ಇದನ್ನೂ ಓದಿ- ಅತಿಯಾದ ಸ್ಮಾರ್ಟ್‌ಫೋನ್‌ ಬಳಕೆ ನಿಯಂತ್ರಿಸಲು ಈ ಟಿಪ್ಸ್ ಅನುಸರಿಸಿ

ಕೊಕೇನ್ ಮತ್ತು ಮೆತಾಂಫೆಟಮೈನ್‌ಗಳು ಅತ್ಯಂತ ಶಕ್ತಿಶಾಲಿ, ವ್ಯಸನಕಾರಿ ಪ್ರಚೋದಕ ಮಾದಕ ದ್ರವ್ಯಗಳಾಗಿದ್ದು, ಮೆದುಳಿನಲ್ಲಿ ಡೋಪಮೈನ್ ಮಟ್ಟವನ್ನು ಹೆಚ್ಚಿಸುತ್ತವೆ. ಆ ಮೂಲಕ ತೀವ್ರ ಸುಖದ ಭಾವನೆ ಮತ್ತು ಸಂತೋಷವನ್ನು ಉಂಟುಮಾಡಿ, ವ್ಯಸನದ ಸಾಧ್ಯತೆಗಳನ್ನು ಬಹಳಷ್ಟು ಹೆಚ್ಚಿಸುತ್ತವೆ.

ವ್ಯಸನಕ್ಕೆ ಒಳಗಾಗಿದ್ದರೂ ಇಲ್ಲದಿದ್ದರೂ, ಭಾರತೀಯರಾದ ನಾವು ಪ್ರತಿದಿನವೂ ನಮ್ಮ ಸ್ಮಾರ್ಟ್ ಫೋನ್‌ಗಳನ್ನು ಗಂಟೆಗಳ ಕಾಲ ಬಳಸುತ್ತೇವೆ. ಆದರೆ ನಮ್ಮಲ್ಲಿ ಬಹಳಷ್ಟು ಜನರು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಅಂದುಕೊಳ್ಳುತ್ತೇವೆ. ಆದ್ದರಿಂದ, ನಮ್ಮ ಫೋನ್ ಬಳಕೆಯನ್ನು ಕಡಿಮೆಗೊಳಿಸುವ ಸಲುವಾಗಿ ಮೆದುಳು ಹೇಗೆ ತನ್ನ ಪ್ರತಿಫಲ ವ್ಯವಸ್ಥೆಯನ್ನು ಬಳಸುತ್ತದೆ ಎಂಬ ಕುರಿತು ನಮಗಿರುವ ಮಾಹಿತಿಗಳನ್ನು ಬಳಸಿಕೊಳ್ಳಬಹುದೇ? ಆ ಮೂಲಕ ಮೊಬೈಲ್ ಬಳಕೆಯನ್ನು ಕಡಿಮೆಗೊಳಿಸಲು ಸಾಧ್ಯವಿದೆ.

ನೀವೂ ಸಹ ಡೋಪಮೈನ್ ಫಾಸ್ಟಿಂಗ್ (ಡೋಪಮೈನ್ ಉಪವಾಸ) ಎಂಬ ಪರಿಕಲ್ಪನೆಯನ್ನು ಗಮನಿಸಿರುವ ಸಾಧ್ಯತೆಗಳಿವೆ. ವಿಪರ್ಯಾಸವೆಂದರೆ, ಇದನ್ನೂ ಇನ್ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣದಲ್ಲೇ ಗಮನಿಸಿರುವ ಸಾಧ್ಯತೆಗಳಿವೆ. ಇದೊಂದು ಧ್ಯಾನ ಅಥವಾ ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ (ವರ್ತನೆಯ ಚಿಕಿತ್ಸೆ) ಆಗಿದ್ದು, ಹಠಾತ್ ವರ್ತನೆಗಳನ್ನು ನಿಯಂತ್ರಿಸುವ ಮತ್ತು ಹವ್ಯಾಸಗಳನ್ನು ಬದಲಾಯಿಸುವ ಗುರಿ ಹೊಂದಿದೆ. ಈ ಕಾರ್ಯತಂತ್ರ ಸಾಮಾಜಿಕ ಜಾಲತಾಣದಂತಹ ಅತಿಯಾದ ಪ್ರಚೋದನಕಾರಿ ಚಟುವಟಿಕೆಗಳನ್ನು ಒಂದಷ್ಟು ಕಾಲದ ತನಕ ಉದ್ದೇಶಪೂರ್ವಕವಾಗಿ ದೂರಮಾಡಿ, ಫೋನ್ ಬಳಸಬೇಕೆಂಬ ಬಲವಂತದ ಪ್ರಚೋದನೆಗಳನ್ನು ನಿಯಂತ್ರಿಸುವ ಗುರಿ ಹೊಂದಿದೆ.

ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ ಯೋಚನಾ ವಿನ್ಯಾಸಗಳನ್ನು ಬದಲಾಯಿಸಿ, ಜನರಿಗೆ ಉತ್ತಮ ಆಯ್ಕೆಗಳನ್ನು ಕೈಗೊಂಡು, ತಮ್ಮ ವರ್ತನೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ನೆರವಾಗುತ್ತದೆ.

ತಂತ್ರಜ್ಞಾನದಿಂದ ಒಂದಷ್ಟು ವಿರಾಮ ತೆಗೆದುಕೊಳ್ಳುವುದು ನಮ್ಮ ನೈಜ ಆಸಕ್ತಿಗಳನ್ನು ಅನುಭವಿಸಲು ನೆರವಾಗಿ, ತಂತ್ರಜ್ಞಾನದ ಜೊತೆಗಿನ ಸಂಬಂಧವನ್ನು ಸುಧಾರಿಸುತ್ತದೆ. ಆದರೆ, ಇಂತಹ ಹೇಳಿಕೆಗಳನ್ನು ಬೆಂಬಲಿಸಲು ಅಷ್ಟೊಂದು ಪುರಾವೆಗಳಿಲ್ಲ ಎನ್ನುವುದು ಟೀಕಾಕಾರರ ವಾದವಾಗಿದೆ.

ಆದರೂ, ಸಾಮಾಜಿಕ ಜಾಲತಾಣಗಳನ್ನು ಅಪಾರವಾಗಿ ಅಧ್ಯಯನ ನಡೆಸುವ ತಜ್ಞರ ಪ್ರಕಾರ, ತಕ್ಕಮಟ್ಟಿಗೆ ಡಿಜಿಟಲ್ ವಿರಾಮ ಪಡೆದುಕೊಳ್ಳುವುದು ಖಂಡಿತವಾಗಿಯೂ ಒಂದಷ್ಟು ಪ್ರಯೋಜನ ಒದಗಿಸುತ್ತದೆ.

"ಸಾಮಾಜಿಕ ಜಾಲತಾಣಗಳಿಂದ ವಿರಾಮ ಪಡೆದುಕೊಳ್ಳುವುದು ಉತ್ತಮ ವಿಧಾನ ಎಂದು ನಾನು ಭಾವಿಸುತ್ತೇನೆ. ವಾರಾಂತ್ಯಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸದಿರುವುದು ನಮ್ಮ ಸಾಮಾಜಿಕ ಜಾಲತಾಣ ಬಳಕೆಯ ಅಭ್ಯಾಸಗಳಲ್ಲಿ ಸುಧಾರಣೆ ತಂದು, ವಾರದ ದಿನಗಳಲ್ಲೂ ಅವುಗಳ ಬಳಕೆಯನ್ನು ನಮ್ಮ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ" ಎಂದು ಬೆಂಗಳೂರಿನ ಅಭಯ ಆಸ್ಪತ್ರೆಯ ಪ್ರಸಿದ್ಧ ಮನೋವೈದ್ಯರಾದ ಡಾ. ಎ ಜಗದೀಶ್ ಅವರು ಅಭಿಪ್ರಾಯ ಪಡುತ್ತಾರೆ.

"ನನ್ನ ಅನುಭವ ಮತ್ತು ನನ್ನ ಅಧ್ಯಯನದ ಪ್ರಕಾರ, ಸಾಮಾಜಿಕ ಜಾಲತಾಣಗಳ ಹೊರಗೆ, ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಡನೆ ಸಮಯ ಕಳೆಯುವುದರಿಂದ ಧನಾತ್ಮಕ ಭಾವನೆಗಳನ್ನು ಮೂಡಿಸಲು, ಬಾಂಧವ್ಯವನ್ನು ವೃದ್ಧಿಸಲು, ಮತ್ತು ಜೊತೆಯಿರುವ ಭಾವಗಳನ್ನು ಹೆಚ್ಚಿಸಲು ನೆರವಾಗುತ್ತದೆ. ಆದ್ದರಿಂದ, ಸ್ನೇಹಿತರೊಡನೆ ಸಾಮಾಜಿಕ ಜಾಲತಾಣದಲ್ಲಿ ಚಾಟ್ ಮಾಡುವುದರ ಬದಲು, ಅವರನ್ನು ಭೇಟಿಯಾಗಿ, ಕಾಫಿ ಕುಡಿಯುವುದರಿಂದ ಹೆಚ್ಚಿನ ಸಮಾಧಾನ ಲಭಿಸುತ್ತದೆ" ಎಂದು ಡಾ. ಜಗದೀಶ್ ಭಾವಿಸುತ್ತಾರೆ.

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News