ನವದೆಹಲಿ: ಕ್ರಿಕೆಟ್ ಆಡಳಿತದಲ್ಲಿ ಅಪಾರ ಅನುಭವ ಹೊಂದಿರುವ ಸೌರವ್ ಗಂಗೂಲಿ ಅವರನ್ನು ನೂತನ ಬಿಸಿಸಿಐ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದರಿಂದ ಭಾರತದ ಕ್ರಿಕೆಟ್ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಮುಖ್ಯ ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
"ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸೌರವ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಅವರ ನೇಮಕವು ಭಾರತೀಯ ಕ್ರಿಕೆಟ್ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದರ ಸೂಚನೆಯಾಗಿದೆ" ಎಂದು ಶಾಸ್ತ್ರಿ ತಿಳಿಸಿದರು. 'ಅವರು ಯಾವಾಗಲೂ ಸ್ವಾಭಾವಿಕ ನಾಯಕರಾಗಿದ್ದಾರೆ. ಅವರಂತಹ ವ್ಯಕ್ತಿ ಯಾರಾದರೂ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಇದು ಭಾರತೀಯ ಕ್ರಿಕೆಟ್ಗೆ ಸಿಕ್ಕಂತಹ ಗೆಲುವು ಎಂದು ಹೇಳಿದ್ದಾರೆ.
'ಇದು ಮಂಡಳಿಗೆ ಕಷ್ಟಕರ ಸಮಯಗಳು ಮತ್ತು ಬಿಸಿಸಿಐ ಅನ್ನು ವೈಭವದ ಹಾದಿಯಲ್ಲಿ ಮರಳಿ ತರಲು ಸಾಕಷ್ಟು ಕೆಲಸಗಳಿವೆ.ಈ ಸಂದರ್ಭದಲ್ಲಿ ನಾನು ಅವರಿಗೆ ಶುಭ ಹಾರೈಸುತ್ತೇನೆ" ಎಂದು ಅವರು ಹೇಳಿದರು. ಇದೇ ವೇಳೆ ಬಿಸಿಸಿಐ ತನ್ನ ಬಾಕಿ ಹಣವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಯಿಂದ ಪಡೆಯುವ ಗಂಗೂಲಿ ಅವರ ಅಭಿಪ್ರಾಯವನ್ನು ಶಾಸ್ತ್ರಿ ಬೆಂಬಲಿಸಿದರು.
ಮುಂದಿನ ಐದು ವರ್ಷಗಳ ಸಮಯದಲ್ಲಿ ಬಿಸಿಸಿಐ ಐಸಿಸಿಯಿಂದ 372 ಮಿಲಿಯನ್ ಡಾಲರ್ ಪಡೆಯಲಿದೆ ಎಂದು ಬುಧವಾರ ಔಪಚಾರಿಕವಾಗಿ 39ನೇ ಅಧ್ಯಕ್ಷರಾಗಿ ಚುನಾಯಿತರಾದ ಗಂಗೂಲಿ ಹೇಳಿದ್ದಾರೆ.