ನವದೆಹಲಿ: ಸುದೀರ್ಘ 49 ವರ್ಷಗಳ ಬಳಿಕ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ ಹಂತ ತಲುಪಿ ಇತಿಹಾಸ ಸೃಷ್ಟಿಸಿದ್ದ ಭಾರತದ ಪುರುಷರ ಹಾಕಿ ತಂಡಕ್ಕೆ ‘ಚಿನ್ನ’ದ ಅವಕಾಶ ಕೈತಪ್ಪಿದೆ. ಮಂಗಳವಾರ ನಡೆದ ಟೋಕಿಯೊ ಒಲಂಪಿಕ್ಸ್ ಸೆಮಿಫೈನಲ್(Olympics 2020 Hockey Semifinal) ಪಂದ್ಯದಲ್ಲಿ ಭಾರತದ ಹಾಕಿ ತಂಡ ಬೆಲ್ಜಿಯಂ ವಿರುದ್ಧ 5-2 ಅಂತರದಿಂದ ಸೋಲು ಕಂಡು ನಿರಾಸೆ ಮೂಡಿಸಿದೆ.
ಗ್ರೇಟ್ ಬ್ರಿಟನ್ ತಂಡವನ್ನು ಬಗ್ಗುಬಡಿದು ಸೆಮಿಫೈನಲ್ ಗೆ ಪ್ರವೇಶಿಸಿದ್ದ ಭಾರತಕ್ಕೆ ವಿಶ್ವ ಚಾಂಪಿಯನ್ ಬೆಲ್ಜಿಯಂ ಪ್ರಬಲ ಎದುರಾಳಿಯಾಗಿತ್ತು. ಆದರೆ ಎದುರಾಳಿ ತಂಡದ ಉತ್ತಮ ಪ್ರದರ್ಶನದ ಎದುರು ಭಾರತ(Indian Hockey Team) ಸೋಲೊಪ್ಪಿಕೊಂಡು, ಚಿನ್ನದ ಪಕದ ಗೆಲ್ಲುವ ಅವಕಾಶವನ್ನು ಕೈತಪ್ಪಿಸಿಕೊಂಡಿದೆ. ಪಂದ್ಯದ 2ನೇ ನಿಮಿಷದಲ್ಲಿಯೇ ಬೆಲ್ಜಿಯಂ ಗೋಲು ಗಳಿಸುವ ಮೂಲಕ ಮುನ್ನೆಡೆ ಸಾಧಿಸಿತು. ಬಳಿಕ ಭಾರತ ಮೇಲಿಂದ ಮೇಲೆ 2 ಗೋಲುಗಳನ್ನು ಗಳಿಸುವ ಮೂಲಕ ಬಲಿಷ್ಠ ಬೆಲ್ಜಿಯಂಗೆ ಪ್ರತಿರೋಧ ಒಡ್ಡಿತು.
ಇದನ್ನೂ ಓದಿ: Tokyo Olympics 2020: ಭಾರತಕ್ಕೆ ಮತ್ತೊಂದು ಪದಕ, ಕಂಚಿಗೆ ಮುತ್ತಿಕ್ಕಿದ ಪಿ.ವಿ.ಸಿಂಧು
3ನೇ ಕ್ವಾರ್ಟರ್ ವರೆಗೂ ಉಭಯ ತಂಡಗಳು 2-2ರಿಂದ ಸಮಬಲ ಪೈಪೋಟಿ ನಡೆಸಿದ್ದವು. ಪೆನಾಲ್ಟಿ ಕಾರ್ನರ್, ಸ್ಟ್ರೋಕ್ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡ ಬೆಲ್ಜಿಯಂ(Belgium)ಕೊನೆಯ 15 ನಿಮಿಷಗಳ ಆಟದಲ್ಲಿ 3 ಗೋಲುಗಳನ್ನು ಗಳಿಸುವ ಮೂಲಕ ಅಂತಿಮವಾಗಿ ವಿಜಯಲಕ್ಷ್ಮೀಯನ್ನು ತನ್ನದಾಗಿಸಿಕೊಂಡಿತು. ಮನ್ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡ 2 ಗೋಲು ಬಾರಿಸಲಷ್ಟೇ ಶಕ್ತವಾಯಿತು.
ಭಾರತದ ಪರ ಹಮನ್ ಪ್ರೀತ್ ಸಿಂಗ್(Harmanpreet Singh)(7ನೇ ನಿಮಿಷ) ಹಾಗೂ ಮಂದೀಪ್ ಸಿಂಗ್(8ನೇ ನಿಮಿಷ) ಗೋಲು ಗಳಿಸಿದರು. ಬೆಲ್ಜಿಯಂ ಪರ ಅಲೆಕ್ಸಾಂಡರ್ ಹೆಂಡ್ರಿಕ್ಸ್(19ನೇ, 49ನೇ, 53ನೇ ನಿಮಿಷಗಳು) ಹ್ಯಾಟ್ರಿಕ್ ಗೋಲು ಬಾರಿಸಿ ಮಿಂಚಿದರು. ಇದಲ್ಲದೆ ಲಾಯಿಕ್ ಲ್ಯೂಪರ್ಟ್ (2 ನೇ ನಿಮಿಷ) ಮತ್ತು ಜಾನ್-ಜಾನ್ ಡೊಹ್ಮೆನ್ (60 ನೇ ನಿಮಿಷ) ಗೋಲು ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಇದನ್ನೂ ಓದಿ: ಬಾಲಿವುಡ್ ಖ್ಯಾತ ರ್ಯಾಪರ್ ಗೆ ರಿಷಭ್ ಪಂತ್ ಹೋಲಿಸಿದ ಹಿಟ್ ಮ್ಯಾನ್..!
ಅಂತಿಮವಾಗಿ ಭಾರತ 2-5 ಅಂತರದಲ್ಲಿ ಸೋಲು ಅನುಭವಿಸಿತು. ಆ ಮೂಲಕ ಚಿನ್ನ ಗೆಲ್ಲುವ ಅವಕಾಶ ತಪ್ಪಿದ್ದು, ಮುಂದಿನ ಪಂದ್ಯದಲ್ಲಿ ಕಂಚಿಗಾಗಿ ಹೋರಾಡಲಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಬ್ರಿಟನ್ ತಂಡವನ್ನು 3-1 ಗೋಲುಗಳ ಅಂತರದಲ್ಲಿ ಸೋಲಿಸುವ ಮೂಲಕ ಸೆಮಿಫೈನಲ್ ಗೆ (Olympics 2020 Hockey Semifinal) ಲಗ್ಗೆ ಇಟ್ಟಿತ್ತು. ಭಾರತೀಯ ಹಾಕಿ ತಂಡವು 1972ರ ನಂತರ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ಪಂದ್ಯ ಆಡುವ ಅವಕಾಶ ಪಡೆದಿತ್ತು. ಅಂದರೆ ಬರೋಬ್ಬರಿ 49 ವರ್ಷಗಳ ನಂತರ ಭಾರತೀಯ ಹಾಕಿ ತಂಡವು ಒಲಿಂಪಿಕ್ಸ್ ನ ಸೆಮಿಫೈನಲ್ ತಲುಪುವಲ್ಲಿ ಯಶಸ್ವಿಯಾಗಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ