IPL 2022: ಆರ್‌ಸಿಬಿ ಪ್ಲೇ ಆಫ್‌ಗೆ ಹೋಗಲು ಇದೊಂದೇ ದಾರಿ..!

ಆರ್‌ಸಿಬಿ ತಂಡದಲ್ಲಿ ಸಾಂಘಿಕ ಪ್ರದರ್ಶನದ ಕೊರತೆ ಎದ್ದು ಕಾಣುತ್ತಿದೆ. ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದಾಗ ಬ್ಯಾಟಿಂಗ್‌ ವೈಫಲ್ಯ, ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ರೆ ಬೌಲಿಂಗ್‌ ವೈಫಲ್ಯ ಹೀಗೆ ತಂಡದಲ್ಲಿ ಸ್ಥಿರತೆ ಕಾಣಸಿಗುತ್ತಿಲ್ಲ.

Written by - Zee Kannada News Desk | Last Updated : May 3, 2022, 08:57 PM IST
  • ಸತತ 3 ಸೋಲುಗಳಿಂದ ಕಂಗೆಟ್ಟಿರುವ ಆರ್‌ಸಿಬಿ ಪ್ಲೇ ಆಫ್‌ಗೆ ಎಂಟ್ರಿ ಕೊಡುತ್ತಾ..?
  • ಆರ್‌ಸಿಬಿ ತಂಡದಲ್ಲಿ ಸಾಂಘಿಕ ಪ್ರದರ್ಶನದ ಕೊರತೆ ಎದ್ದು ಕಾಣುತ್ತಿದೆ
  • ಮತ್ತೆ ಗೆಲುವಿನ ಲಯಕ್ಕೆ ಮರಳುತ್ತಾ ಬಲಾಡ್ಯ ಆಟಗಾರರನ್ನು ಹೊಂದಿರುವ ರೆಡ್‌ ಆರ್ಮಿ?
IPL 2022: ಆರ್‌ಸಿಬಿ ಪ್ಲೇ ಆಫ್‌ಗೆ ಹೋಗಲು ಇದೊಂದೇ ದಾರಿ..!  title=
ಆರ್‌ಸಿಬಿ ಪ್ಲೇ ಆಫ್‌ಗೆ ಎಂಟ್ರಿ ಕೊಡುತ್ತಾ..?

ಬೆಂಗಳೂರು: ‘ಈ ಸಲ ಕಪ್‌ ನಮ್ದೇ’ ಅಂತಾ 15 ಸೀಸನ್‌ಗಳಿಂದ ಕಾಯುತ್ತಿರುವ ಆರ್‌ಸಿಬಿ ಅಭಿಮಾನಿಗಳು ಸೋಲು-ಗೆಲುವಿನಲ್ಲಿ ತಂಡಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಕಪ್‌ ಗೆಲ್ಲಿಸಲು ಸಾಧ್ಯವಾಗದ ಕಿಂಗ್‌ ಕೊಹ್ಲಿ ಕೂಡ ಕ್ಯಾಪ್ಟನ್ಸಿ ಕೀರಿಟ ತೆಗೆದು ಫಾಫ್ ಡು ಪ್ಲೆಸಿಗೆ ಹಾಕಿದ್ದಾರೆ.

ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿ ಕಪ್‌ ಗೆಲ್ಲುವ ಭರವಸೆ ಮೂಡಿಸಿದ್ದ ಬೆಂಗಳೂರು ಬಾಯ್ಸ್‌ ಸತತ 3 ಸೋಲಿನಿಂದ ಪ್ಲೇ ಆಫ್‌ ಹಾದಿ ದುರ್ಗಮ ಮಾಡಿಕೊಂಡಿದ್ದಾರೆ. ಆಡಿರುವ 10 ಪಂದ್ಯಗಳ ಪೈಕಿ ಆರ್‌ಸಿಬಿ 5ರಲ್ಲಿ ಗೆಲುವು, 5ರಲ್ಲಿ ಸೋಲು ಕಂಡಿದೆ. ಇನ್ನುಳಿದ 4 ಪಂದ್ಯಗಳಲ್ಲಿ 3 ಪಂದ್ಯಗಳಲ್ಲಿ ಉತ್ತಮ ರನ್‌ ರೇಟ್‌ನಿಂದ ಗೆಲ್ಲಬೇಕು ಅಥವಾ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ರೆ ಮಾತ್ರ ಪ್ಲೇ ಆಫ್‌ಗೆ ಏರಲಿದೆ.

ಬ್ಯಾಟಿಂಗ್‌ ಲಯ ಕಾಯ್ದುಕೊಳ್ಳುತ್ತಾ ರೆಡ್‌ ಆರ್ಮಿ..!

ಇತ್ತ ಆರ್‌ಸಿಬಿ ತಂಡದಲ್ಲಿ ಸಾಂಘಿಕ ಪ್ರದರ್ಶನದ ಕೊರತೆ ಎದ್ದು ಕಾಣುತ್ತಿದೆ. ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದಾಗ ಬ್ಯಾಟಿಂಗ್‌ ವೈಫಲ್ಯ, ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ರೆ ಬೌಲಿಂಗ್‌ ವೈಫಲ್ಯ ಹೀಗೆ ತಂಡದಲ್ಲಿ ಸ್ಥಿರತೆ ಕಾಣಸಿಗುತ್ತಿಲ್ಲ. ಆದರೆ, ಬಲಾಡ್ಯ ಆಟಗಾರರನ್ನು ಹೊಂದಿರುವ ಆರ್‌ಸಿಬಿ ಮತ್ತೆ ಗೆಲುವಿನ ಲಯಕ್ಕೆ ಮರಳಲಿದೆ ಎಂಬುದು ಅಭಿಮಾನಿಗಳ ಆಶಯವಾಗಿದೆ. ಕಳೆದ ಪಂದ್ಯದಲ್ಲಿ ಮತ್ತೆ ಫಾರ್ಮ್‌ಗೆ ಮರಳಿರುವ ಕಿಂಗ್‌ ಕೊಹ್ಲಿ ಮುಂದಿನ ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿ ತಂಡವನ್ನು ಗೆಲ್ಲಿಸುತ್ತಾರೆ ಅನ್ನೋ ನಂಬಿಕೆ ಕೂಡ ಆರ್‌ಸಿಬಿ ಅಭಿಮಾನಿಗಳಲ್ಲಿದೆ.

ಇದನ್ನೂ ಓದಿ: KKR ಟೀಂಗೆ ತಲೆನೋವಾಗಿದ್ದ ಈ ಆಟಗಾರ ಈಗ ತಂಡದಿಂದ ಕಿಕ್ ಔಟ್!

ಈ ಬಾರಿ ತಂಡಕ್ಕೆ ಬ್ಯಾಟಿಂಗ್‌ ಸ್ಟ್ರೆಂತ್‌ ಆಗಿ ಕಾಣಿಸಿಕೊಂಡಿರುವ ದಿನೇಶ್‌ ಕಾರ್ತಿಕ್‌ ಡೆತ್‌ ಒವರ್‌ಗಳಲ್ಲಿ ತಂಡಕ್ಕೆ ಸಹಕಾರಿ ಆಗುತ್ತಿದ್ದಾರೆ. ಇವರ ಜೊತೆಗೆ ಶಹಬಾಜ್‌ ಅಹಮ್ಮದ್‌ ತಮ್ಮ ಆಲ್‌ ರೌಂಡರ್‌ ಆಟದ ಮೂಲಕ ಗಮನ ಸೆಳೆಯುತ್ತಿದ್ದು, ತಂಡಕ್ಕೆ ಬಹುಮುಖ್ಯ ಕೊಡುಗೆ ನೀಡುತ್ತಿದ್ದಾರೆ. ಇವರ ಜೊತೆಗೆ ಗ್ಲೇನ್‌ ಮ್ಯಾಕ್ಸ್‌ವೆಲ್‌ ಆಟ ತಂಡಕ್ಕೆ ತುಂಬಾನೇ ಮುಖ್ಯವಾಗಿದ್ದು, ಬಿಗ್‌ ಸ್ಕೋರ್‌ ನಿರೀಕ್ಷೆಯಲ್ಲಿದೆ. ಮುಂದಿನ ದಿನಗಳಲ್ಲಿ ಆರ್‌ಸಿಬಿ ತಂಡ ಗೆಲುವು ಸಾಧಿಸಬೇಕು ಅಂದ್ರೆ ಈ 4 ಬ್ಯಾಟ್ಸ್‌ಮನ್‌ಗಳ ಪ್ರದರ್ಶನ ತುಂಬಾನೇ ಅಗತ್ಯವಾಗಿದೆ.

ಡು ಪ್ಲೆಸಿ ಪಡೆಗೆ ಬೆಂಕಿ ಬೌಲಿಂಗ್‌ ಅನಿವಾರ್ಯತೆ..!

ಇತ್ತ ಬೌಲಿಂಗ್‌ ವಿಭಾಗದಲ್ಲಿ ವನಿಂದು ಹಸರಂಗ, ಜೋಶ್ ಹಾಜಲ್‌ವುಡ್‌ ಉತ್ತಮ ದಾಳಿ ಮಾಡುತ್ತಿದ್ದಾರೆ. ಆದ್ರೆ ಕಳೆದ ಸಿಸನ್‌ನಲ್ಲಿ ಉತ್ತಮ ದಾಳಿ ನಡೆಸಿದ್ದ ಹರ್ಷಲ್‌ ಪಟೇಲ್‌ ಹಾಗೂ ಮಹಮ್ಮದ್‌ ಸಿರಾಜ್‌ ಈ ಬಾರಿ ಹೇಳಿಕೊಳ್ಳುವಂತ ಪ್ರದರ್ಶನ ನೀಡಿಲ್ಲ. ಮುಂದಿನ ಪಂದ್ಯಗಳಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶನ ಮಾಡಿ ಎರುರಾಳಿಗಳನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದ್ರೆ ಖಂಡಿತ ಆರ್‌ಸಿಬಿ ಬಿಗ್‌ ಮಾರ್ಜಿನ್‌ನಿಂದ ವಿನ್‌ ಆಗಬಹುದು.

ಇನ್ನು ತಂಡದ ಗೆಲುವಿನಲ್ಲಿ ಟಾಸ್‌ ಕೂಡ ಪ್ರಮುಖ ಪಾತ್ರ ವಹಿಸುತ್ತಿದೆ. ಆದ್ರೆ ಕಳೆದ ಪಂದ್ಯದಲ್ಲಿ ಟಾಸ್‌ ಗೆದ್ರು ಬ್ಯಾಟಿಂಗ್‌ ಆಯ್ಕೆ ಮಾಡಿದ್ದ ಆರ್‌ಸಿಬಿ ಸೋಲು ಅನುಭವಿಸಬೇಕಾಯಿತು. ಆದ್ರೆ 95% ಟಾಸ್‌ ಗೆದ್ದ ತಂಡ ಮೊದಲು ಬೌಲಿಂಗ್‌ ಆಯ್ಕೆ ಮಾಡುತ್ತಿದೆ. ಈ ಬಗ್ಗೆ ಕೂಡ ತಂಡ ಸಾಕಷ್ಟು ಚಿಂತನೆ ನಡೆಸಬೇಕಿದೆ. ಜೊತೆಗೆ ತಂಡದಲ್ಲಿ ಫಾರ್ಮ್‌ನಲ್ಲಿ ಇಲ್ಲದಿರುವ ಆಟಗಾರಿಗೆ ಹುಮ್ಮಸ್ಸು ತುಂಬುವ ಕೆಲಸವನ್ನು ತಂಡದ ನಾಯಕ ಮಾಡಬೇಕಾಗಿದೆ.

ಇದನ್ನೂ ಓದಿ: IPL 2022 Flop Players : ಐಪಿಎಲ್ 2022 ರಲ್ಲಿ 'ಸೂಪರ್ ಫ್ಲಾಪ್' ಆದ ಈ 3 ಆಟಗಾರರು!

ಬಿಗ್‌ ಫೈಟ್‌ ನಂತರ ಪ್ಲೇ ಆಫ್‌ಗೆ ಎಂಟ್ರಿ ಕೊಡೋದ್ಯಾರು..?

ಇನ್ನು ಈಗಾಗಲೇ ಗುಜರಾತ್‌ ಟೈಟನ್ಸ್‌, ಲಕ್ನೋ ಸೂಪರ್‌ ಜೇಂಟ್ಸ್‌ ಪ್ಲೇ ಆಫ್‌ ಹಾದಿ ಸುಗಮವಾಗಿದ್ದು, ಉಳಿದ 2 ಸ್ಥಾನಕ್ಕಾಗಿ ರಾಜಸ್ಥಾನ, ಸನ್‌ ರೈಸರ್ಸ್‌ ಹೈದರಾಬಾದ್, ಆರ್‌ಸಿಬಿ, ದೆಹಲಿ, ಕೆಕೆಆರ್‌, ಪಂಜಾಬ್‌ ತಂಡಗಳ ನಡುವೆ ಪ್ರಬಲ ಪೈಪೋಟಿ ನಡೆಯಲಿದೆ. ಈಗಾಗಲೇ ಟೂರ್ನಿಯಿಂದ ಬಹುತೇಕ ಹೊರ ಹೋಗಿರುವ ಮುಂಬೈ ಹಾಗೂ ಸಿಎಸ್‌ಕೆ ತಂಡಗಳ ಗೆಲುವು-ಸೋಲು ಮುಂದೆ ಸಾಕಷ್ಟು ಬದಲಾವಣೆ ತರುವ  ಸಾಧ್ಯತೆಯಿದೆ. ಎಲ್ಲವನ್ನೂ ಮೀರಿ ಮತ್ತೆ ಆರ್‌ಸಿಬಿ ಪ್ಲೇ ಆಫ್‌ ಹಂತಕ್ಕೆ ತಲುಪಿ ನಂತರ ಕಪ್‌ ಗೆಲ್ಲಬೇಕು ಅನ್ನೋದೆ ಆರ್‌ಸಿಬಿ ಅಭಿಮಾನಿಗಳ ಆಶಯವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News