ಬೆಂಗಳೂರು: ಶನಿವಾರ ರಾತ್ರಿ ನಡೆದ ಮಹತ್ವದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 5 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿತು. ಹೀನಾಯ ಸೋಲು ಕಂಡ ರಿಷಭ್ ಪಂತ್ ಪಡೆ ಟೂರ್ನಿಯಿಂದಲೇ ಹೊರಬಿದ್ದಿತು. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ ಡೆಲ್ಲಿಗೆ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿತ್ತು.
ಕಳಪೆ ಫೀಲ್ಡಿಂಗ್ ಮತ್ತು ಕೆಲವು ಕ್ಯಾಚ್ ಕೈಬಿಟ್ಟಿದ್ದರಿಂದ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಡೆಲ್ಲಿ ಸೋಲು ಕಾಣಬೇಕಾಯಿತು. ಮುಂಬೈ ಗೆಲುವಿನ ಲಾಭವಾಗಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ. ಈ ಪಂದ್ಯದಲ್ಲಿ ಮುಂಬೈ ಗೆಲ್ಲಬೇಕೆಂದು ಆರ್ಸಿಬಿ ಪ್ಲೇಯರ್ಸ್ ಅಲ್ಲದೆ ಕೋಟ್ಯಂತರ ಅಭಿಮಾನಿಗಳು ಸಹ ಪ್ರಾರ್ಥಿಸಿದ್ದರು. ಅದರಂತೆ ಆರ್ಸಿಬಿಯ ಹಳೆಯ ಪ್ಲೇಯರ್ ಟಿಮ್ ಡೇವಿಡ್ ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರಲ್ಲದೆ, ಡೆಲ್ಲಿಗೆ ವಿಲನ್ ಆದರು.
ಇದನ್ನೂ ಓದಿ: IPL 2022: ಮುಂಬೈ ಗೆದ್ದ ತಕ್ಷಣ ಆರ್ಸಿಬಿ ಆಟಗಾರರು ಮಾಡಿದ್ದೇನು..?
ಐಪಿಎಲ್ ಪ್ಲೇ ಆಫ್ ಲೆಕ್ಕಾಚಾರ
ಇನ್ನು ಐಪಿಎಲ್ ಪ್ಲೇ ಆಫ್ ಲೆಕ್ಕಾಚಾರ ನೋಡುವುದಾದರೆ ಆರ್ಸಿಬಿ 4ನೇ ತಂಡವಾಗಿ ಎಂಟ್ರಿ ಕೊಟ್ಟಿದೆ. ಅಡಿದ 14 ಪಂದ್ಯಗಳ ಪೈಕಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ 10 ಗೆಲುವುಗಳೊಂದಿಗೆ 20 ಪಾಯಿಂಟ್ಸ್ ಕಲೆಹಾಕಿ ಅಗ್ರಸ್ಥಾನದಲ್ಲಿದೆ. ಅದರಂತೆ 14 ಪಂದ್ಯಗಳಲ್ಲಿ 9 ಗೆಲುವು ಸಾಧಿಸಿರುವ ಸಂಜು ಸ್ಯಾಮನ್ಸ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ 18 ಪಾಯಿಂಟ್ಸ್ ಕಲೆಹಾಕಿ 2ನೇ ಸ್ಥಾನದಲ್ಲಿದೆ. ಕನ್ನಡಿಗ ಕೆ.ಎಲ್.ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ಆಡಿದ 14 ಪಂದ್ಯಗಳ ಪೈಕಿ 9 ಗೆಲುವು ಸಾಧಿಸಿ 18 ಪಾಯಿಂಟ್ಸ್ ಕಲೆಹಾಕಿದ್ದು, ನೆಟ್ ರನ್‍ರೇಟ್ ಆಧಾರದಲ್ಲಿ 3ನೇ ಸ್ಥಾನದಲ್ಲಿದೆ. ಇನ್ನು ಆಡಿದ 14 ಪಂದ್ಯಗಳಲ್ಲಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಫಾಫ್ ಡುಪ್ಲೇಸಿಸ್ ನೇತೃತ್ವದ ಆರ್ಸಿಬಿ 16 ಅಂಕಗಳನ್ನು ಕಲೆಹಾಕುವ ಮೂಲಕ 4ನೇ ಸ್ಥಾನದಲ್ಲಿದೆ.
ಒಂದು ವೇಳೆ ಶನಿವಾರದ ಪಂದ್ಯದಲ್ಲಿ ದೆಹಲಿ ಗೆಲುವು ಸಾಧಿಸಿದ್ದರೆ ರನ್‍ರೇಟ್ ಆಧಾರದಲ್ಲಿ ಆರ್ಸಿಬಿಯನ್ನು ಹಿಂದಿಕ್ಕಿ 4ನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸುತ್ತಿತ್ತು. ಆದರೆ ವಿಜಯಲಕ್ಷ್ಮಿ ರಿಷಭ್ ಪಂತ್ ಪಡೆಗೆ ಒಲಿಯಲಿಲ್ಲ. ಮುಂಬೈ ವಿರುದ್ಧ ಹೀನಾಯ ಸೋಲು ಕಾಣುವ ಮೂಲಕ ದೆಹಲಿ ತಂಡದ ನಿರಾಸೆ ಅನುಭವಿಸಿತು. ಇದರ ಲಾಭವನ್ನು ಆರ್ಸಿಬಿ ತಂಡವು ಪಡೆದುಕೊಂಡಿತು.
ಇದನ್ನೂ ಓದಿ: ಎಷ್ಟು ಬಾರಿ ಪ್ಲೇ ಆಫ್ ಪ್ರವೇಶಿಸಿದೆ ಗೊತ್ತಾ RCB: ʼಈ ಸಲ ಕಪ್ ನಮ್ದೇʼ ಆಗುತ್ತಾ?
ಯಾರ ಯಾರ ನಡುವೆ ಸೆಣಸಾಟ!
ಸದ್ಯದ ಪಾಯಿಂಟ್ಸ್ ಪಟ್ಟಿಯಂತೆ ಅಗ್ರ ತಂಡಗಳಾಗಿರುವ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಮೇ 24ರ ಮಂಗಳವಾರ ಕ್ವಾಲಿಫೈಯರ್-1ರ ಪಂದ್ಯ ನಡೆಯಲಿದೆ. ಇದರಲ್ಲಿ ಗೆಲುವು ಸಾಧಿಸಿದವರು ನೇರವಾಗಿ ಫೈನಲ್‍ಗೆ ಲಗ್ಗೆ ಇಡಲಿದ್ದಾರೆ. ಮೇ 25ರ ಬುಧವಾರ ಲಕ್ನೋ ಮತ್ತು ಆರ್ಸಿಬಿ ನಡುವೆ ಎಲಿಮಿನೇಟರ್ ಹಣಾಹಣಿ ನಡೆಯಲಿದೆ. ಈ ಪಂದ್ಯದಲ್ಲಿ ಸೋತವರು ಟೂರ್ನಿಯಿಂದ ಹೊರಬೀಳಲಿದ್ದಾರೆ.
ಅದರಂತೆ ಗೆದ್ದ ತಂಡವು ಕ್ವಾಲಿಫೈಯರ್-1ರಲ್ಲಿ ಸೋತ ತಂಡದ ಜೊತೆಗೆ ಗೆಲುವಿಗಾಗಿ ಸೆಣಸಾಡಲಿದೆ. ಇದರಲ್ಲಿ ಗೆದ್ದ ತಂಡವು ಫೈನಲ್‍ಗೆ ಎಂಟ್ರಿ ಕೊಡಲಿದೆ. ಮೇ 29ರ ಭಾನುವಾರ ಫೈನಲ್ ಪಂದ್ಯವು ನಡೆಯಲಿದೆ. ಹೀಗಾಗಿ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಯಾರು ಎತ್ತಿ ಹಿಡಿಯುತ್ತಾರೆ ಅನ್ನೋ ಕುತೂಹಲ ಮೂಡಿದೆ. ಪ್ರತಿಬಾರಿಯೂ ‘ಈ ಸಲ ಕಪ್ ನಮ್ದೆ’ ಎನ್ನುವ ಅಭಿಮಾನಿಗಳ ಆಸೆಯನ್ನು ಲಕ್ಕಿ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿರುವ ಆರ್ಸಿಬಿ ತಂಡ ನೆರವೇರಿಸುತ್ತಾ ಕಾದು ನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.