ವಿಶಾಖಪಟ್ಟಣ: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡವು ಶಿಖರ್ ಧವನ್ 100 ಶತಕ ಹಾಗೂ ಶ್ರೇಯಸ್ ಅಯ್ಯರ್ ಅವರ ಆಕರ್ಷಕ ಅರ್ಧಶತಕ 65 ದ ಸಹಾಯದೊಂದಿಗೆ 8 ವಿಕೆಟ್ ಗಳ ಭರ್ಜರಿ ಗೆಲುವನ್ನು ಸಾಧಿಸಿದೆ.ಇದರಿಂದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ.
ವೈ.ಎಸ್ ಆರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತ, ಲಂಕಾ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.
ಲಂಕಾ 215 ರನ್ ಗಳಿಗೆ ತನ್ನ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು. 216ರನ್ ಗಳು ಗುರಿ ಬೆನ್ನತ್ತಿದ ಭಾರತ ತಂಡವು, ಶಿಖರ್ ಧವನ್ ಶತಕ ಹಾಗೂ ಅಯ್ಯರ್ ಅರ್ಧಶತಕದ ನೆರವಿನಿಂದ 32.1 ಓವರ್‌ಗಳಲ್ಲೇ ಎರಡು ವಿಕೆಟ್ ನಷ್ಟಕ್ಕೆ ಸುಲಭ ಗೆಲುವು ಸಾಧಿಸಿತು. ಭಾರತ ತಂಡದ ಪರ ರೋಹಿತ್ ಶರ್ಮಾ 7, ಧವನ್ 100 ರನ್, ಶ್ರೇಯಸ್ ಅಯ್ಯರ್ 65, ಕಾರ್ತಿಕ್ ಅಜಯ 26 ರನ್ ಗಳಿಸಿದರು.
ಲಂಕಾಗೆ ಆರಂಭಿಕ ಆಘಾತ ಎದುರಾದರು ನಂತರ ಉಪುಲ್ ತರಂಗ ಹಾಗೂ ಸಮರವಿಕ್ರಮ 121 ರನ್ ಗಳ ಜತೆಯಾಟವು ಬೃಹತ್ ಮೊತ್ತ ಕಲೆಹಾಕುವ ಸೂಚನೆ ನೀಡಿತ್ತು. ಆದರೆ ಚಹಾಲ್ ಮತ್ತು ಕುಲದೀಪ್ ಯಾದವ್ ಮಾರಕ ದಾಳಿಗೆ ಲಂಕಾ ಪಡೆ ತತ್ತರಿಸಿತು. ಲಂಕಾ ಪರ ಗುಣತಿಲಕ 13, ಉಪುಲ್ ತರಂಗ 95, ಸಮರವಿಕ್ರಮ 42, ಮ್ಯಾಥ್ಯೂಸ್ 17, ಡಿಕ್ವೇಲ್ಲಾ 8, ಗುಣರತ್ನೆ 17, ಪೆರೇರಾ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಭಾರತ ತಂಡದ ಪರ ಚಹಾಲ್ ಹಾಗೂ ಕುಲದೀಪ್ ಯಾದವ್ ತಲಾ 3, ಹಾರ್ದಿಕ್ ಪಾಂಡ್ಯ 2, ಬುಮ್ರಾ ಮತ್ತು ಭುವನೇಶ್ವರ್ 1 ವಿಕೆಟ್ ಪಡೆದು ಲಂಕಾ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು