IND VS NZ 3RD T20: 'SUPER' ಓವರ್ ಗುಟ್ಟು ಬಿಚ್ಚಿಟ ರೋಹಿತ್ ಶರ್ಮಾ

IND VS NZ 3RD T20 ಪಂದ್ಯದ ಸೂಪರ್ ಓವರ್ ನಲ್ಲಿ ನ್ಯೂಜಿಲ್ಯಾಂಡ್ ತಂಡ 17 ರನ್ ಗಳಿಸಿತ್ತು. ಇದಕ್ಕೆ ಉತ್ತರ ನೀಡಿರುವ ಭಾರತ ತಂಡ ರೋಹಿತ್ ಶರ್ಮಾ ಅವರು ಸೂಪರ್ ಓವರ್ ನ ಕೊನೆಯ ಎರಡು ಎಸೆತಗಳಲ್ಲಿ ಬಾರಿಸಿದ ಎರಡು ಸಿಕ್ಸರ್ ಗಳ ನೆರವಿನಿಂದ ಒಟ್ಟು 20 ರನ್ ಬಾರಿಸಿ ಇತಿಹಾಸ ಬರೆದಿದೆ.  

Last Updated : Jan 29, 2020, 07:08 PM IST
IND VS NZ 3RD T20: 'SUPER' ಓವರ್ ಗುಟ್ಟು ಬಿಚ್ಚಿಟ ರೋಹಿತ್ ಶರ್ಮಾ title=

ಹ್ಯಾಮಿಲ್ಟನ್: ಭಾರತ ಹಾಗೂ ನ್ಯೂಜಿಲ್ಯಾಂಡ್ ಪಂದ್ಯಗಳ ನಡುವೆ ನಡೆದ ಮೂರನೇ ಟಿ20 ಪಂದ್ಯದ ನಿರ್ಣಯ ಸೂಪರ್ ಓವರ್ ಮೂಲಕ ಅಂತ್ಯಕಂಡಿದೆ. ಪಂದ್ಯದ ಸೂಪರ್ ಓವರ್ ನಲ್ಲಿ ನ್ಯೂಜಿಲ್ಯಾಂಡ್ ತಂಡ 17 ರನ್ ಗಳಿಸಿತ್ತು. ಇದಕ್ಕೆ ಉತ್ತರ ನೀಡಿರುವ ಭಾರತ ತಂಡ ರೋಹಿತ್ ಶರ್ಮಾ ಅವರು ಸೂಪರ್ ಓವರ್ ನ ಕೊನೆಯ ಎರಡು ಎಸೆತಗಳಲ್ಲಿ ಬಾರಿಸಿದ ಎರಡು ಸಿಕ್ಸರ್ ಗಳ ನೆರವಿನಿಂದ ಒಟ್ಟು 20 ರನ್ ಬಾರಿಸಿ ಇತಿಹಾಸ ಬರೆದಿದೆ. ಈ ಸರಣಿಯ ಮೊದಲ ಎರಡು ಪಂದ್ಯಗಳನ್ನು ಭಾರತ ಗೆದ್ದುಕೊಂಡಿದೆ. ಹೀಗಾಗಿ 5 ಪಂದ್ಯಗಳ ಈ ಸರಣಿಯಲ್ಲಿ ಭಾರತ ತಂಡ 3-0 ಅಂತರದಿಂದ ಮುನ್ನಡೆ ಸಾಧಿಸಿದಂತಾಗಿದೆ. ಈ ಗೆಲುವಿನ ಮೂಲಕ ಮೊದಲ ಬಾರಿಗೆ ಭಾರತ ತಂಡ ನ್ಯೂಜಿಲ್ಯಾಂಡ್ ನಲ್ಲಿ ಟಿ20 ಸರಣಿ ತನ್ನದಾಗಿಸಿಕೊಂಡಿದೆ. ಈ ಸರಣಿಯ ನಾಲ್ಕನೇ ಪಂದ್ಯ ಜನವರಿ 31ರಂದು ನಡೆಯಲಿದೆ.

ಪಂದ್ಯದ ಆರಂಭದಲ್ಲಿ ಮೊದಲು ಬ್ಯಾಟ್ ಬೀಸಿರುವ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ ತನ್ನ 5 ವಿಕೆಟ್ ಕಳೆದುಕೊಂಡು ಒಟ್ಟು 179 ರನ್ ಗಳಿಸಿದೆ. ಬಳಿಕ ಭಾರತ ತಂಡ ನೀಡಿರುವ ಈ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಂಡ ಕೂಡ 20 ಓವರ್ ಗಳಲ್ಲಿ 179 ರನ್ ಗಳಿಸಿದ ಕಾರಣ ಮ್ಯಾಚ್ ಟೈ ಆಗಿ, ನಿರ್ಣಯ ಸೂಪರ್ ಓವರ್ ಮೂಲಕ ಅಂತ್ಯವಾಗಿದೆ.

ಪಂದ್ಯದ ಬಳಿಕ ಮಾತನಾಡಿರುವ ಭಾರತ ತಂಡದ ಹಿಟ್ ಮ್ಯಾನ್ ರೋಹಿತ್ ಶರ್ಮಾ, "ನಾನು ಈ ಮೊದಲು ಎದಿಗೂ ಕೂಡ ಸೂಪರ್ ಓವರ್ ನಲ್ಲಿ ಬ್ಯಾಟ್ ಮಾಡಿಲ್ಲ. ಮೊದಲ ಎಸೆತ ನಿಧಾನವಾಗಿ ಆಡಬೇಕೆ ಅಥವಾ ಹಿಟ್ ಮಾಡಬೇಕು ಎಂಬುದು ನನಗೆ ತಿಳಿದಿರಲಿಲ್ಲ. ನಾನು ಸ್ವಲ್ಪ ತಾಳ್ಮೆ ವಹಿಸಿ ಉತ್ತಮ ಪ್ರದರ್ಶನ ನೀಡಲು ಬಯಸಿದ್ದೆ. ಮೊದಲು ಬ್ಯಾಟಿಂಗ್ ನಲ್ಲಿ ನಾನು ಉತ್ತಮ ಪ್ರದರ್ಶನ ನೀಡಲು ಬಯಸಿದ್ದೆ. ಆದರೆ, ನಾನು ಔಟ್ ಆದ ರೀತಿ ನನ್ನಲ್ಲಿ ನಿರಾಶೆ ತಂದಿತ್ತು. ಈ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ನನ್ನ ಪ್ರದರ್ಶನ ಉತ್ತಮವಾಗಿರಲಿಲ್ಲ. ಆದರೆ, ಈ ಪಂದ್ಯದಲ್ಲಿ ನಾನು ಉತ್ತಮ ಪ್ರದರ್ಶನ ನೀಡಲು ಬಯಸಿದ್ದೆ. ಈ ಪಂದ್ಯ ಗೆದ್ದರೆ ಸರಣಿ ನಮ್ಮದಾಗಲಿದೆ ಎಂಬುದು ನನಗೆ ತಿಳಿದಿತ್ತು" ಎಂದಿದ್ದಾರೆ.

ಸೂಪರ್ ಓವರ್ ರೋಚಕತೆ ಹೀಗಿತ್ತು
ಟಾರ್ಗೆಟ್-18 ರನ್ ಗಳು
ಮೊದಲ ಎಸೆತ: ಟಿಮ್ ಸೌಥಿ ಮಾಡಿದ ಈ ಎಸೆತದಲ್ಲಿ ರೋಹಿತ್ ಶರ್ಮಾ ಎರಡು ರನ್ ಗಳಿಸಿದರು. ಆದರೆ, ರನ್ ಔಟ್ ನಿಂದ ಕೂಡ ಪಾರಾದರು.
ಎರಡನೇ ಎಸೆತ: ಟಿಮ್ ಸೌಥಿಯ ಈ ಎಸೆತದಲ್ಲಿ ರೋಹಿತ್ ಒಂದು ರನ್ ಗಳಿಸಿದರು.
ಮೂರನೇ ಎಸೆತ: ಸೌಥಿಯ ಈ ಎಸೆತದಲ್ಲಿ ಭರ್ಜರಿ ಬ್ಯಾಟ್ ಬೀಸಿದ ಕೆ.ಎಲ್. ರಾಹುಲ್ ಲೆಗ್ ಸೈಡ್ ನಲ್ಲಿ ಬೌಂಡರಿ ಬಾರಿಸಿದರು.
ನಾಲ್ಕನೇ ಎಸೆತ: ಈ ಎಸೆತದಲ್ಲಿ ಒಂದು ರನ್ ಗಳಿಸುವ ಮೂಲಕ ಸ್ಟ್ರೈಕ್ ರೋಹಿತ್ ಶರ್ಮಾ ಅವರಿಗೆ ನೀಡಿದರು.
ಐದನೇ ಎಸೆತ: ಈ ಎಸೆತದಲ್ಲಿ ರೋಹಿತ್ ಬಾರಿಸಿದ ಭರ್ಜರಿ ಸಿಕ್ಸರ್ ಗೆ ಮೈದಾನದಲ್ಲಿ ಪ್ರೇಕ್ಷಕರು ನಿಬ್ಬೆರಗಾಗಿದ್ದಾರೆ.
ಆರನೇ ಎಸೆತ: ಈಗ ಟೀಂ ಇಂಡಿಯಾಗೆ ಗೆಲುವಿಗಾಗಿ ನಾಲ್ಕು ರನ್ ಗಳ ಅವಶ್ಯಕತೆ ಇತ್ತು. ಟಿಮ್ ಸೌಥಿ ಎಸೆದ ಓವರ್ ನ ಕೊನೆಯ ಎಸೆತದಲ್ಲಿಯೂ ಕೂಡ ರೋಹಿತ್ ಶರ್ಮಾ ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ನ್ಯೂಜಿಲ್ಯಾಂಡ್ ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ.

Trending News