BCCI vs PCB: ‘ನೀವು ಬರದಿದ್ದರೆ ನಾವೂ ಬರುವುದಿಲ್ಲ’; ಬಿಸಿಸಿಐ ವಿರುದ್ಧ ರಮೀಜ್ ರಾಜಾ ಗುಡುಗು!

2023ರ ಏಷ್ಯಾಕಪ್‌ ಟೂರ್ನಿಗೆ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ, ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವಿಲ್ಲದೆ ಆಡಬೇಕಾಗುತ್ತದೆ ಎಂದು ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಖಡಕ್ ವಾರ್ನಿಂಗ್ ನೀಡಿದ್ದಾರೆ.  

Written by - Puttaraj K Alur | Last Updated : Nov 26, 2022, 02:28 PM IST
  • ಏಷ್ಯಾಕಪ್ ಆಡಲು ಟೀಂ ಇಂಡಿಯಾ ಬರದಿದ್ದರೆ, ವಿಶ್ವಕಪ್ ಆಡಲು ನಾವು ಬರುವುದಿಲ್ಲ
  • ಬಿಸಿಸಿಐಗೆ ಖಡಕ್ ಎಚ್ಚರಿಕೆ ನೀಡಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ರಮೀಜ್ ರಾಜಾ
  • ಪಾಕಿಸ್ತಾನವಿಲ್ಲದ ಏಕದಿನ ವಿಶ್ವಕಪ್ ಟೂರ್ನಿಯನ್ನು ಯಾರೂ ನೋಡುತ್ತಾರೆ? ಎಂದ ಪಿಸಿಬಿ ಅಧ್ಯಕ್ಷ
BCCI vs PCB: ‘ನೀವು ಬರದಿದ್ದರೆ ನಾವೂ ಬರುವುದಿಲ್ಲ’; ಬಿಸಿಸಿಐ ವಿರುದ್ಧ ರಮೀಜ್ ರಾಜಾ ಗುಡುಗು! title=
ಬಿಸಿಸಿಐಗೆ ರಮೀಜ್ ರಾಜಾ ಖಡಕ್ ಎಚ್ಚರಿಕೆ!

ನವದೆಹಲಿ: ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್‌ನಲ್ಲಿ ಭಾರತ ತಂಡ ಭಾಗವಹಿಸದಿದ್ದರೆ, ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ತಮ್ಮ ತಂಡವೂ ಆಡುವುದಿಲ್ಲವೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ರಮೀಜ್ ರಾಜಾ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಅನುಮತಿ ಸಿಗುವವರೆಗೂ ನಾವು ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದಿಲ್ಲ. ಹೀಗಾಗಿ ಟೀಂ ಇಂಡಿಯಾ ಮುಂದಿನ ವರ್ಷ ಅಂದರೆ 2023ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್‍ನಲ್ಲಿ ಭಾಗವಹಿಸುವುದಿಲ್ಲ. ತಟಸ್ಥ ಸ್ಥಳದಲ್ಲಿ ನಡೆಸಿದರೆ ಭಾರತ ತಂಡವು ಆಡಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ಹಿಂದೆ ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ರಮೀಜ್ ರಾಜಾ, ‘ನೀವು ಏಷ್ಯಾಕಪ್‍ ಆಡಲು ಪಾಕಿಸ್ತಾನಕ್ಕೆ ಬರದಿದ್ದರೆ, ನಾವು ಸಹ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‍ ಟೂರ್ನಿ ಆಡಲು ಬರುವುದಿಲ್ಲ’ವೆಂದು ಹೇಳಿದ್ದಾರೆ.

ವಿಶೇಷವೆಂದರೆ 2023ರ ಏಷ್ಯಾಕಪ್ ಮುಂದಿನ ವರ್ಷ ಏಕದಿನ ವಿಶ್ವಕಪ್‌ಗೂ ಮುನ್ನವೇ ನಡೆಯಲಿದೆ. ‘ಕಳೆದ 2 ವರ್ಷಗಳಿಂದ ಪಾಕಿಸ್ತಾನವು ಗುಣಮಟ್ಟದ ಕ್ರಿಕೆಟ್ ಆಡುತ್ತಿದೆ. ಪಾಕ್ ತಂಡವು 2021ರ ಟಿ-20 ವಿಶ್ವಕಪ್ ಮತ್ತು ಏಷ್ಯಾಕಪ್‍ನಲ್ಲಿ ಭಾರತವನ್ನು 2 ಬಾರಿ ಸೋಲಿಸಿದೆ. ಏಷ್ಯಾಕಪ್‌ಗಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸದಿರಲು ನಿರ್ಧರಿಸಿದರೆ, ಈ ವಿಷಯದಲ್ಲಿ ಪಿಸಿಬಿಯ ನಿಲುವು ದೃಢವಾಗಿದೆ’ ಎಂದು ರಮೀಜ್ ಖಡಕ್ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: IND vs NZ ODI: ಟಿ20ಯಲ್ಲಿ ಸ್ಟಾರ್-ODIನಲ್ಲಿ ವಿಲನ್: ಈ ಆಟಗಾರನಿಂದ ಕೀವಿಸ್ ವಿರುದ್ಧ ಸೋಲುಂಡ ಭಾರತ!

ಇದೇ ವೇಳೆ ಬಿಸಿಸಿಐ ವಿರುದ್ಧ ಗುಡುಗಿರುವ ರಮೀಜ್ ರಾಜಾ, ‘ಭಾರತ ತಂಡವು ಪಾಕಿಸ್ತಾನಕ್ಕೆ ಬಂದರೆ ನಾವು ವಿಶ್ವಕಪ್‍ ಆಡಲು ಹೋಗುತ್ತೇವೆ. ಅವರು ಬರದಿದ್ದರೆ ನಾವು ಸಹ ಬರುವುದಿಲ್ಲ. ಅವರು ಪಾಕಿಸ್ತಾನವಿಲ್ಲದೆ ಆಡಲಿ, ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾಗವಹಿಸುವ ವಿಚಾರವಾಗಿ ನಾವು ದೃಢ ನಿಲುವು ತೆಗೆದುಕೊಂಡಿದ್ದೇವೆ. ಪಾಕಿಸ್ತಾನ ತಂಡವಿಲ್ಲದೆ ನೀವು ವಿಶ್ವಕಪ್ ಆಡುತ್ತೇವೆಂದರೆ ಆಡಿ, ಯಾರು ಬೇಡ ಅನ್ನಲ್ಲ. ಆದರೆ ಒಂದು ವಿಷಯ ತಿಳಿದುಕೊಳ್ಳಿ, ಪಾಕ್ ತಂಡವಿಲ್ಲದ ವಿಶ್ವಕಪ್ ಟೂರ್ನಿಯನ್ನು ಯಾರು ವೀಕ್ಷಿಸುತ್ತಾರೆ?’ ಅಂತಾ ಪ್ರಶ್ನಿಸಿದ್ದಾರೆ.

‘ನಾವು ಈಗಾಗಲೇ ದೃಢ ನಿರ್ಧಾರಕ್ಕೆ ಬಂದಾಗಿದೆ. ನಮ್ಮ ತಂಡವು ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ನಾವು ವಿಶ್ವದ ಅತಿದೊಡ್ಡ ವ್ಯವಹಾರ ಮಾಡುವ ಕ್ರಿಕೆಟ್ ತಂಡವನ್ನು ಸೋಲಿಸಿದ್ದೇವೆ, ನಾವು T20 ವಿಶ್ವಕಪ್‌ನ ಫೈನಲ್‌ನಲ್ಲಿ ಆಡಿದ್ದೇವೆ. ನಾವು ಪಾಕಿಸ್ತಾನ ಕ್ರಿಕೆಟ್‌ನ ಆರ್ಥಿಕತೆಯನ್ನು ಸುಧಾರಿಸಬೇಕಿದೆ. ನಮ್ಮ ತಂಡವು ಉತ್ತಮ ಪ್ರದರ್ಶನ ನೀಡಿದಾಗ ಮಾತ್ರ ಅದು ಸಾಧ್ಯವಾಗಲಿದೆ. ಟಿ-20 ವಿಶ್ವಕಪ್ ಮತ್ತು ಏಕಷ್ಯಾಪ್‍ನಲ್ಲಿ ಭಾರತ ತಂಡವನ್ನು ಸೋಲಿಸಿ ನಮ್ಮ ಸಾಮರ್ಥ್ಯವನ್ನು ನಾವು ಸಾಬೀತುಪಡಿಸಿದ್ದೇವೆ’ ಅಂತಾ ರಮೀಜ್ ರಾಜಾ ಹೇಳಿದ್ದಾರೆ.

ಟೀಂ ಇಂಡಿಯಾ ಕೊನೆಯದಾಗಿ 2008ರಲ್ಲಿ ಏಷ್ಯಾಕಪ್‌ ಟೂರ್ನಿಯಲ್ಲಿ ಆಡಲು ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಪಾಕ್ ಸಹ 2016ರಲ್ಲಿ ಐಸಿಸಿ ಟಿ-20 ವಿಶ್ವಕಪ್‌ ಟೂರ್ನಿ ಆಡಲು ಕೊನೆಯದಾಗಿ ಭಾರತ ಪ್ರವಾಸ ಕೈಗೊಂಡಿತ್ತು. ಏಷ್ಯಾಕಪ್ ಹೊರತಾಗಿ 2025ರ ಚಾಂಪಿಯನ್ಸ್ ಟ್ರೋಫಿಗೂ ಸಹ ಪಾಕಿಸ್ತಾನವೇ ಆತಿಥ್ಯ ವಹಿಸುತ್ತಿರುವುದು ಭಾರತಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ ಪಟ್ಟು ಹಿಡಿದು ನಿಂತಿರುವ ಪಿಸಿಬಿ ನಿಲುವಿಗೆ ಬಿಸಿಸಿಐ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ.    

ಇದನ್ನೂ ಓದಿ: IND vs NZ 2nd ODI: ಸರಣಿ ಕೈತಪ್ಪುವ ಭೀತಿಯಲ್ಲಿ ಟೀಂ ಇಂಡಿಯಾ: 2ನೇ ಪಂದ್ಯಕ್ಕೆ ಎದುರಾಯ್ತು ಈ ಸಮಸ್ಯೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News