ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly)ಯವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಭಾರತೀಯ ಕ್ರಿಕೆಟ್ ನ ದಂತಕಥೆ ‘ದಾದಾ’ ಖ್ಯಾತಿಯ ಗಂಗೂಲಿ ಗುರುವಾರ 49ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಭಾರತೀಯ ಕ್ರಿಕೆಟ್ ಉತ್ತುಂಗಕ್ಕೇರಲು ಕಿಡಿ ಹೊತ್ತಿಸಿದ ಶ್ರೇಯ ಗಂಗೂಲಿ ಅವರಿಗೆ ಸಲ್ಲುತ್ತದೆ.
ಆಕ್ರಮಣಕಾರಿ ನಾಯಕ:
2000ರಲ್ಲಿ ನಡೆದಿದ್ದ ಮ್ಯಾಚ್ ಫಿಕ್ಸಿಂಗ್ ವಿವಾದದ ಬಳಿಕ ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಂಡ ಸೌರವ್ ಗಂಗೂಲಿ ಅನೇಕ ದಾಖಲೆಗಳನ್ನು ನಿರ್ಮಿಸಿ ಭಾರತೀಯ ಕ್ರಿಕೆಟ್ ನ ದಂತಕಥೆ ಎನಿಸಿಕೊಂಡಿದ್ದಾರೆ. ತಮ್ಮ ನಾಯಕತ್ವದ ಸಮಯದಲ್ಲಿ ಅನೇಕ ಯುವ ಕ್ರಿಕೆಟಿಗರ ಪ್ರತಿಭೆಗೆ ಸಾಣೆ ಹಿಡಿದು ಬೆಳೆಸಿದ್ದಾರೆ. ಪ್ರಮುಖವಾಗಿ ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ(Mahendra Singh Dhoni), ಜಹೀರ್ ಖಾನ್, ಹರ್ಭಜನ್ ಸಿಂಗ್, ವಿರೇಂದ್ರ ಸೆಹವಾಗ್, ಆಶಿಶ್ ನೆಹ್ರಾ, ಮೊಹಮ್ಮದ್ ಕೈಫ್ ಸೇರಿ ಇನ್ನು ಅನೇಕ ಆಟಗಾರರು ಗಂಗೂಲಿಯವರ ನಾಯಕತ್ವದ ಸಮಯದಲ್ಲಿಯೇ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿ ಯಶ ಸಾಧಿಸಿದ್ದಾರೆ.
ಇದನ್ನೂ ಓದಿ: 2021-22 ನೇ ಸಾಲಿನ ದೇಶೀಯ ಕ್ರಿಕೆಟ್ ವೇಳಾಪಟ್ಟಿಯನ್ನು ಪ್ರಕಟಿಸಿದ ಬಿಸಿಸಿಐ
ಟೆಸ್ಟ್ ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯುವಂತೆ ಗಂಗೂಲಿ ನೀಡಿದ್ದ ಸಲಹೆ ವಿರೇಂದ್ರ ಸೆಹವಾಗ್(Virender Sehwag) ಅವರ ಜೀವನವನ್ನೇ ಬದಲಿಸಿತು. ಅಲ್ಲದೆ ದೆಹಲಿಯ ಆಟಗಾರ ಟೆಸ್ಟ್ ಕ್ರಿಕೆಟ್ ನಲ್ಲಿ 2 ಬಾರಿ ತ್ರಿಶತಕ ಭಾರಿಸಲು ನೆರವಾಯಿತು. ತಮ್ಮ ನಾಯಕತ್ವದ ಸಮಯದಲ್ಲಿ ಗಂಗೂಲಿ ಅನೇಕ ಧೈರ್ಯಶಾಲಿ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸಮನ್ ಗಾಗಿ ಹುಡುಕಲು ಹೆಣಗಾಡುತ್ತಿದ್ದಾಗ ಗಂಗೂಲಿ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರಿಗೆ ಗ್ಲೋವ್ಸ್ ಧರಿಸುವಂತೆ ಹೇಳಿದ್ದರು. ಇದು ಟೀಂ ಇಂಡಿಯಾ ಅನೇಕ ಪಂದ್ಯಗಳನ್ನು ಗೆಲ್ಲಲು ನೆರವಾಯಿತು.
ಗಂಗೂಲಿ ನಾಯಕತ್ವದಲ್ಲಿ ಟೀಂ ಇಂಡಿಯಾ 2001ರ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು, 2002ರಲ್ಲಿ ಲಾರ್ಡ್ಸ್ ನಲ್ಲಿ ನಡೆದಿದ್ದ ನ್ಯಾಟ್ ವೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿತ್ತು. 2003ರಲ್ಲಿ ಭಾರತ ವಿಶ್ವಕಪ್ ಫೈನಲ್ ತಲುಪಿತ್ತು. 2004ರಲ್ಲಿ ಇಂಗ್ಲೆಂಡ್(England) ವಿರುದ್ಧ ನಡೆದಿದ್ದ ಟೆಸ್ಟ್ ಸರಣಿ ಮರೆಯಲಾಗದ ಅನುಭವ ನೀಡಿತ್ತು. ಇದಲ್ಲದೆ 2005ರಲ್ಲಿ ಪಾಕಿಸ್ತಾನ ವಿರುದ್ಧ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಜಯಭೇರಿ ಭಾರಿಸಿತ್ತು.
ನಿಕ್ ನೇಮ್ ಗಳ ರಾಜ
ರೋಷಾವೇಶ ಸ್ವಭಾವದ ಕ್ಯಾಪ್ಟನ್ ಆಗಿದ್ದ ಗಂಗೂಲಿ ಭಾರತೀಯ ಕ್ರಿಕೆಟ್ ಗೆ ಭದ್ರ ಅಡಿಪಾಯ ಹಾಕಿಕೊಟ್ಟಿದ್ದರು. ಆಕ್ರಮಣಕಾರಿ ಆಟದ ಶೈಲಿಯಿಂದ ಅವರು ನಿಕ್ ನೇಮ್ ಗಳ ರಾಜನಾಗಿ ರಾರಾಜಿಸಿದ್ದಾರೆ. ‘ದಾದಾ’, ಪ್ರಿನ್ಸ್ ಆಫ್ ಕೋಲ್ಕತ್ತಾ’, ‘ಗಾಡ್ ಆಫ್ ದಿ ಆಫ್ ಸೈಡ್’, ಕಿಂಗ್ ಆಫ್ ಕಮ್ ಬ್ಯಾಕ್’, ‘ಮಹಾರಾಜ’, ‘ರಾಯಲ್ ಬೆಂಗಾಲ್ ಟೈಗರ್’ ಹೀಗೆ ಅನೇಕ ನಿಕ್ ನೇಮ್ ಗಳನ್ನು ಅವರ ಅಸಖ್ಯಾಂತ ಅಭಿಮಾನಿಗಳು, ಕ್ರಿಕೆಟ್ ತಜ್ಞರು ಹಾಗೂ ಸಹ ಆಟಗಾರರಿಂದ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಖೇಲ್ ರತ್ನಾ ಪುರಸ್ಕಾರಕ್ಕೆ ಆರ್.ಅಶ್ವಿನ್, ಮಿಥಾಲಿ ರಾಜ್ ಹೆಸರು ಶಿಫಾರಸ್ಸು
ಕಿಂಗ್ ಆಫ್ ಲಾರ್ಡ್ಸ್
ಸೌರವ್ ಗಂಗೂಲಿ 1992 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯವನ್ನಾಡುವ ಮೂಲಕ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಆದರೆ ಬಳಿಕ ವರ್ತನೆ ಸಮಸ್ಯೆಯಿಂದಾಗಿ ಅವರನ್ನು ತಂಡದಿಂದ ಕೈಬಿಡಲಾಯಿತು. ನಂತರ ದೇಶೀಯ ಕ್ರಿಕೆಟ್ ನಲ್ಲಿ ಅಕ್ರಮಣಕಾರಿ ಆಟವಾಡುವ ಮೂಲಕ ಗಮನ ಸೆಳೆದರು. 1996ರಲ್ಲಿ ಮತ್ತೆ ಟೀಂ ಇಂಡಿಯಾ(Team India) ಗೆ ಕಮ್ ಬ್ಯಾಕ್ ಮಾಡಿದರು. ಲಾರ್ಡ್ಸ್ ಅಂಗಳದಲ್ಲಿ ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಪಂದ್ಯದಲ್ಲಿಯೇ ಭರ್ಜರಿ ಶತಕ ಭಾರಿಸಿ ತಮ್ಮ ಕನಸನ್ನು ನನಸಾಗಿಸಿಕೊಂಡರು. ನಂತರ ಅವರು ಹಿಂತಿರುಗಿ ನೋಡಲೇಯಿಲ್ಲ.
ಏಕದಿನ ಪಂದ್ಯದಲ್ಲಿ ಭಾರತದ ಪರ 2ನೇ ಅತಿಹೆಚ್ಚು ರನ್ ಗಳಿಸಿದ ದಾಖಲೆ ಇನ್ನೂ ಗಂಗೂಲಿ(Sourav Ganguly) ಅವರ ಹೆಸರಿನಲ್ಲೇ ಇದೆ. 311 ಏಕದಿನ ಪಂದ್ಯಗಳನ್ನಾಡಿರುವ ಗಂಗೂಲಿ 22 ಶತಕ ಮತ್ತು 72 ಅರ್ಧಶತಕ ಸೇರಿದಂತೆ ಒಟ್ಟು 11, 163 ರನ್ ಗಳಿಸಿದ್ದಾರೆ. 113 ಟೆಸ್ಟ್ ಪಂದ್ಯಗಳನ್ನಾಡಿರುವ ಅವರು 16 ಶತಕ, 35 ಅರ್ಧಶತಕ ಸೇರಿದಂತೆ 7212 ರನ್ ಗಳಿಸಿದ್ದಾರೆ. ಗಂಗೂಲಿ ಎಂದಿಗೂ ಟಿ.20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿಲ್ಲ. ಆದರೆ ಐಪಿಎಲ್ ಟೂರ್ನಿಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪುಣೆ ವಾರಿಯರ್ಸ್ ತಂಡವನ್ನು ಮುನ್ನೆಡೆಸಿದ್ದಾರೆ.
ಇದನ್ನೂ ಓದಿ: IPL 2021 ಹೊಸ ವೇಳಾಪಟ್ಟಿ: ಯುಎಇಯಲ್ಲಿ ಪೂರ್ಣಗೊಳ್ಳಲಿದೆ ಪಂದ್ಯಾವಳಿ
ಬಿಸಿಸಿಐ ಅಧ್ಯಕ್ಷರಾಗಿ ಗಂಗೂಲಿ
2008ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್ ಗೂ ಗಂಗೂಲಿ ನಿವೃತ್ತಿ ಘೋಷಿಸಿದರು. ಬಳಿಕ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 2019ರ ಅಕ್ಟೋಬರ್ 23ರಂದು ಗಂಗೂಲಿ ಅವರು ಬಿಸಿಸಿಐ(BCCI)ನ 39ನೇ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.