ಲಂಡನ್: ಇಂಗ್ಲೆಂಡ್ನ ಶ್ರೇಷ್ಠ ಬೌಲರ್ಗಳಲ್ಲಿ ಒಬ್ಬರಾದ ಬಾಬ್ ವಿಲ್ಲೀಸ್ (Bob Willis) ನಿಧನರಾಗಿದ್ದಾರೆ. 70 ವರ್ಷದ ವಿಲ್ಲೀಸ್ ಬುಧವಾರ ಕೊನೆಯುಸಿರೆಳೆದಿದ್ದಾರೆ. ಇಂಗ್ಲೆಂಡ್ ಪರ 90 ಟೆಸ್ಟ್ ಮತ್ತು 64 ಏಕದಿನ ಪಂದ್ಯಗಳನ್ನು ಆಡಿರುವ ವಿಲ್ಲೀಸ್ ಅವರನ್ನು 1981ರ ಆಶಸ್ ಸರಣಿಯ ನಾಯಕ ಎಂದು ಸ್ಮರಿಸಲಾಗುತ್ತದೆ. ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾದ ವೇಗದ ಬೌಲರ್ಗಳು ವಿಶ್ವದ ಮೇಲೆ ಪ್ರಾಬಲ್ಯ ಸಾಧಿಸಿದ ಸಂದರ್ಭದಲ್ಲಿ, ಈ ಆರು ಅಡಿ ಆರು ಇಂಚು ಎತ್ತರದ ಆಟಗಾರ ಕ್ರಿಕೆಟ್ನಲ್ಲಿ ಭೀತಿ ಮೂಡಿಸಿದ್ದರು. ಸಂದೀಪ್ ಪಾಟೀಲ್ ಅವರ ಜೊತೆ ವಿಲ್ಲಿಸ್ ಒಂದು ಕುತೂಹಲಕಾರಿ ಕಥೆ ಹೊಂದಿದ್ದರು.
ಬಾಬ್ ವಿಲ್ಲೀಸ್ 1971 ರಿಂದ 1984 ರವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 325 ಮತ್ತು ಏಕದಿನ 80 ವಿಕೆಟ್ಗಳನ್ನು ಅವರು ಪಡೆದಿದ್ದಾರೆ. 1984 ರಲ್ಲಿ ಬಾಬ್ ವಿಲ್ಲೀಸ್ ನಿವೃತ್ತರಾದಾಗ, ವಿಶ್ವ ಕ್ರಿಕೆಟ್ನಲ್ಲಿ ಈ ಇಂಗ್ಲಿಷ್ ಬೌಲರ್ಗಿಂತ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಏಕೈಕ ಆಟಗಾರ ಡೆನ್ನಿಸ್ ಲಿಲ್ಲಿ. 1975 ರಲ್ಲಿ ಬಾಬ್ ವಿಲ್ಲೀಸ್ ಅವರ ಎರಡೂ ಮೊಣಕಾಲುಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇದು ಅವರ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಿತು. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಬಾಬ್ 899 ವಿಕೆಟ್ ಪಡೆದಿದ್ದರು.
ಬಾಬ್ ವಿಲ್ಲೀಸ್ ಅವರ ಕುಟುಂಬ ಹೇಳಿಕೆಯೊಂದನ್ನು ಪ್ರಕಟಿಸಿ ಅವರ ಸಾವಿನ ಸುದ್ದಿಯನ್ನು ಖಚಿತಪಡಿಸಿದೆ. ಕುಟುಂಬ ನೀಡಿರುವ ಹೇಳಿಕೆ ಪ್ರಕಾರ "ಬಾಬ್ ನಿಧನದಿಂದ ನಾವು ಕುಸಿದು ಬಿದ್ದಿದ್ದೇವೆ. ಅವರು ಅಸಾಧಾರಣ ಪತಿ, ತಂದೆ, ಸಹೋದರ ಮತ್ತು ಅಜ್ಜ. ಅವರು ಕುಟುಂಬದ ಪ್ರತಿಯೊಬ್ಬ ಸದಸ್ಯರ ಮೇಲೆ ಆಳವಾದ ಪ್ರಭಾವ ಬೀರಿದ್ದರು. ಯಾರೂ ಅವರಿಗೆ ಸರಿದೂಗಿಸಲು ಸಾಧ್ಯವಿಲ್ಲ" ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಕೂಡ ಹೇಳಿಕೆ ಪ್ರಕಟಿಸಿದ್ದು, "ಬಾಬ್ ಸಾವಿನ ಸುದ್ದಿ ತುಂಬಾ ದುಃಖಕರವಾಗಿದೆ. ಅವರು ಇಂಗ್ಲಿಷ್ ಕ್ರಿಕೆಟ್ನ ದಂತಕಥೆಯಾಗಿದ್ದು ಇಂಗ್ಲಿಷ್ ಕ್ರಿಕೆಟ್ ತನ್ನ ಉತ್ತಮ ಸ್ನೇಹಿತನನ್ನು ಕಳೆದುಕೊಂಡಿದೆ" ಎಂದಿದೆ.
ಭಾರತೀಯ ಕ್ರಿಕೆಟ್ ಪ್ರೇಮಿ ಬಾಬ್ ವಿಲ್ಲೀಸ್ ಅವರನ್ನು ನೆನಪಿಸಿಕೊಂಡಾಗಲೆಲ್ಲಾ ಸಂದೀಪ್ ಪಾಟೀಲ್ ಬಗ್ಗೆಯೂ ಕೂಡ ಖಂಡಿತವಾಗಿ ಉಲ್ಲೇಖಿಸಲಾಗುತ್ತದೆ. 1982 ರಲ್ಲಿ ಇಂಗ್ಲೆಂಡ್ ವಿರುದ್ಧದ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಸಂದೀಪ್ ಪಾಟೀಲ್ 129 ರನ್ ಗಳಿಸಿದ್ದರು. ಈ ಅಜೇಯ ಇನ್ನಿಂಗ್ಸ್ ಸಮಯದಲ್ಲಿ, ಅವರು ಬಾಬ್ ವಿಲ್ಲೀಸ್ ಅವರ ಒಂದು ಓವರ್ ನಲ್ಲಿ ಆರು ಬೌಂಡರಿಗಳನ್ನು ಬಾರಿಸಿದ್ದರು. ಈ ಐತಿಹಾಸಿಕ ಓವರ್ನ ಮೂರನೇ ಎಸೆತ ನೋಬಾಲ್ ಆಗಿತ್ತು.