ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರದಂದು ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಇಂದು ಮಧ್ಯಾಹ್ನ 2.30ಕ್ಕೆ ಬೆಳಗಾವಿ ಜಿಲ್ಲೆ ಸುತ್ತಮುತ್ತಲಿರುವ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೇಂದ್ರ ಗೃಹ ಸಚಿವರು ವೈಮಾನಿಕ ಸಮೀಕ್ಷೆ ಮೂಲಕ ಜಿಲ್ಲೆಯ ಪ್ರವಾಹ ಪರಿಸ್ಥಿತಿಯನ್ನು ಅವಲೋಕನ ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದುವರೆಗೆ ರಾಜ್ಯದ 17 ಜಿಲ್ಲೆಗಳಲ್ಲಿ 80 ತಾಲ್ಲೂಕುಗಳು ಪ್ರವಾಹ ಪೀಡಿತವಾಗಿದೆ ಎಂದು ಕರ್ನಾಟಕ ಸರ್ಕಾರ ಶನಿವಾರ ಘೋಷಿಸಿದೆ. ಸಾವಿನ ಸಂಖ್ಯೆ 26 ಕ್ಕೆ ಏರಿದೆ ಮತ್ತು ಸುಮಾರು ಎರಡು ಲಕ್ಷ ಜನರು ನಿರಾಶ್ರಿತರಾಗಿದ್ದಾರೆ ಎನ್ನಲಾಗಿದೆ.ಈಗ ಪ್ರವಾಹದಿಂದಾಗಿ ಉಂಟಾಗಿರುವ ಬೆಳೆ ಹಾನಿ, ಜೀವ ಹಾನಿ, ಜಾನುವಾರು ಮತ್ತು ಮೂಲಸೌಕರ್ಯಗಳ ಹಾನಿ ಲೆಕ್ಕಾಚಾರವನ್ನು ಗಣನೆಗೆ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ.
ಈಗ ರಾಜ್ಯದಲ್ಲಿ ಪ್ರವಾಹ ಪೀಡಿತಗೊಂಡಿರುವ ಜಿಲ್ಲೆಗಳೆಂದರೆ ಬೆಳಗಾವಿ,ಬಾಗಲಕೋಟೆ, ರಾಯಚೂರು, ಕಲಬುರಗಿ, ಯಾದಗಿರಿ, ವಿಜಯಪುರ, ಗದಗ, ಹಾವೇರಿ, ಧಾರವಾಡ, ಶಿವಮೊಗ್ಗ, ಚಿಕ್ಕಮಂಗಳೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಮೈಸೂರು. ಈ ಜಿಲ್ಲೆಗಳಲ್ಲಿ ಬೆಳಗಾವಿಗೆ ಪ್ರವಾಹದಿಂದ ಭಾರಿ ಹಾನಿ ಉಂಟಾಗಿದ್ದು, ನಗರದ ಶೇ 70 ರಷ್ಟು ಭಾಗವು ಈಗ ಜಲಾವೃತಗೊಂಡಿದೆ ಎನ್ನಲಾಗಿದೆ.