ಪ್ರತಿಯೊಬ್ಬ ಮನುಷ್ಯನಿಗೂ ಸಂಗಾತಿ ಎಂಬುದು ಮುಖ್ಯ. ಹೆಣ್ಣಾಗಲಿ, ಗಂಡಾಗಲಿ ಬಾಳ ಸಂಗಾತಿ ಎಂದರೆ ಹೆಸರೇ ಸೂಚಿಸುವಂತೆ ಜೀವನಪರ್ಯಂತ ಅವರ ಜೊತೆ ಬಾಳುವುದಾಗಿದೆ. ನೋವಿನಲ್ಲಿ, ನಲಿವಿನಲ್ಲಿ ಜೊತೆಯಾಗಿ ಬಾಳುವುದು ಬಾಳ ಸಂಗಾತಿಯ ಪ್ರಮುಖ ಲಕ್ಷಣ. ಇನ್ನು ಒಬ್ಬರಿಗೊಬ್ಬರು ಪರಸ್ಪರ ಪ್ರೀತಿಸುತ್ತಾ, ನಂಬಿಕೆಯಿಂದ ಬಾಳುವುದು ಅಗತ್ಯ. ಕೆಲವೊಮ್ಮೆ ಎಷ್ಟೇ ನಂಬಿಕೆಗಳಿದ್ದರೂ, ಸಂಬಂಧಗಳು ಉಳಿಯುವುದಿಲ್ಲ. ಅದಕ್ಕೆ ಈ ವಿಚಾರಗಳೂ ಕಾರಣವಾಗಿರಬಹುದು.
ಆಟಿಟ್ಯೂಡ್ ಎಂಬುದು ಎಂತಹದ್ದೇ ಸಂಬಂಧವನ್ನಾದರೂ ಕೆಡವುತ್ತದೆ. ಮುಖ್ಯವಾಗಿ ಹುಡುಗರು ಆಟಿಟ್ಯೂಡ್ ತೋರಿಸುವ ಹುಡುಗಿಯರನ್ನು ಮೆಚ್ಚುವುದಿಲ್ಲ. ಒಳ್ಳೆಯ ಮನಸ್ಸುಳ್ಳ ಮತ್ತು ಎಲ್ಲರ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗುವ ಹೆಣ್ಣನ್ನು ಹುಡುಗರು ಮೆಚ್ಚುತ್ತಾರೆ. ನಿಮ್ಮ ಕೋಪ ಮತ್ತು ಕೆಟ್ಟ ನಡತೆ ಸಂಗಾತಿಗೆ ಮುಜುಗರವನ್ನುಂಟು ಮಾಡಬಹುದು.
ಹೆಚ್ಚು ಮೇಕಪ್ ಮಾಡಿಕೊಳ್ಳುವುದು ಸಹ ಹುಡುಗರಿಗೆ ಇಷ್ಟವಾಗೋದಿಲ್ಲ. ನಿಮ್ಮ ನೈಸರ್ಗಿಕ ಅಂದವನ್ನು ಹುಡುಗರು ಪ್ರೀತಿಸುತ್ತಾರೆ. ಕೆಲವು ಬಾರಿ ನೀವು ಹೆಚ್ಚಾಗಿ ಮೇಕಪ್ ಮಾಡಿಕೊಂಡು ಹೋದರೆ ನಿಮ್ಮ ಬಾಯ್ ಫ್ರೆಂಡ್ ನ ಸ್ನೇಹಿತರು ತಮಾಷೆ ಮಾಡಿ ನಿಮ್ಮ ಸಂಗಾತಿಯನ್ನು ಮುಜುಗರಕ್ಕೀಡು ಮಾಡುವ ಸಾಧ್ಯತೆ ಇರುತ್ತದೆ, ಇಂತಹ ಬೆಳವಣಿಗೆ ನಿಮ್ಮ ಮೇಲೆ ಪ್ರಿಯಕರನಿಗೆ ಕೋಪವನ್ನುಂಟು ಮಾಡಬಹುದು.
ಇನ್ನೊಂದು ಹೇಳುವುದಾದರೆ, ನಿಮಗೆ ಸೆಲ್ಫೀ ಹುಚ್ಚಿದ್ದರೆ ಅದನ್ನು ನಿಲ್ಲಿಸಿ, ಇದು ನಿಮ್ಮ ಬಾಳ ಸಂಗಾತಿಯ ತಾಳ್ಮೆಯನ್ನು ಒಡೆಯುವಂತೆ ಮಾಡಬಹುದು. ಸೆಲ್ಫಿ ತೆಗೆಯಿರಿ. ಆದರೆ ಅದಕ್ಕೆ ಮಿತಿಯಿರಲಿ.
ಹೆಣ್ಣಾಗಲಿ, ಗಂಡಾಗಲಿ ಪ್ರತಿಯೊಂದು ವಿಚಾರಕ್ಕೆ ಜಗಳ ಮಾಡಿದರೆ ಅಲ್ಲಿ ಯಾವ ಸಂಬಂಧವೂ ಪ್ರಾಮಾಣಿಕವಾಗಿ ಉಳಿಯುವುದಿಲ್ಲ. ನಿಮ್ಮ ಬಾಳ ಸಂಗಾತಿಗೆ ಸ್ವ ನಿರ್ಧಾರ ತೆಗೆದುಕೊಳ್ಳುವ ಅವಕಾಶ ನೀಡಿ, ಅವರನ್ನು ಸ್ವತಂತ್ರವಾಗಿ ಬಿಟ್ಟರೆ ನಿಮ್ಮನ್ನು ಅವರು ತುಂಬಾ ಪ್ರೀತಿ ಮಾಡುತ್ತಾರೆ.
ಪ್ರತಿಯೊಂದು ವಿಚಾರಕ್ಕೂ ಅಳುವುದು ಪ್ರಮುಖವಾಗಿ ಹುಡುಗರಿಗೆ ಇಷ್ಟವಾಗುವುದಿಲ್ಲ. ಒಂದೆರಡು ಬಾರಿ ಅತ್ತರೆ ಪರವಾಗಿಲ್ಲ, ಪ್ರತಿಯೊಂದು ವಿಚಾರಕ್ಕೂ ಅಳುವುದು ಅವರಿಗೆ ಹಿಂಸೆ ಎಂದು ಭಾಸವಾಗಬಹುದು. ಅಷ್ಟೇ ಅಲ್ಲದೆ, ಎಲ್ಲ ವಿಚಾರಕ್ಕೆ ನೀವು ಭಾವುಕರಾಗಿರುವುದು ಅವರಿಗೆ ಸಮಸ್ಯೆ ಎಂದು ಅನ್ನಿಸಬಹುದು.