ಭಾರೀ ಮಳೆಯಿಂದಾಗಿ ವಾಣಿಜ್ಯನಗರಿ ಮುಂಬೈ ತತ್ತರಿಸಿದೆ. ಮುಂಬೈನಲ್ಲಿ ನಿರಂತರವಾಗಿ ಭಾರಿ ಮಳೆಯಾಗುತ್ತಿದ್ದು ರಸ್ತೆಗಳು, ಶಾಲೆಗಳು ಮತ್ತು ರೈಲ್ವೆ ನಿಲ್ದಾಣಗಳು ಮುಳುಗಿಹೋಗಿವೆ.
ಮುಂಬೈನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಿಎಂಸಿಯ ಕೋರಿಕೆಯ ಮೇರೆಗೆ, ಭಾರತೀಯ ನೌಕಾಪಡೆ ತನ್ನ ಹಲವಾರು ತಂಡಗಳನ್ನು ಅನೇಕ ಪ್ರದೇಶಗಳಲ್ಲಿ ಪರಿಹಾರಕ್ಕಾಗಿ ನಿಯೋಜಿಸಿದೆ. ರಸ್ತೆಯಲ್ಲಿ ಹೊಳೆಯಂತೆ ನೀರು ಹರಿಯುತ್ತಿರುವುದರಿಂದ ಜನರು ಮನೆಗಳಿಂದ ಹೊರಬರಲು ಕಷ್ಟವಾಗುತ್ತಿದೆ. ಭಾರಿ ಮಳೆಯಿಂದಾಗಿ ಶಾಲೆ ಮತ್ತು ಕಾಲೇಜುಗಳನ್ನು ಮುಚ್ಚಲು ಸೂಚನೆ ನೀಡಲಾಗಿದೆ. ಸರ್ಕಾರಿ ಕಚೇರಿಗಳಿಗೆ ಮಾತ್ರವಲ್ಲದೇ ಖಾಸಗಿ ಕಚೇರಿಗಳಲ್ಲೂ ರಜೆ ಘೋಷಿಸಲಾಗಿದೆ.
ಮುಂಬೈನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜನಸಾಮಾನ್ಯರು ಮಾತ್ರವಲ್ಲ, ಪೊಲೀಸರು ಕೂಡ ಪರದಾಡುವಂತಾಗಿದೆ. ಮುಂಬೈನ ಸಾಂತಾ ಕ್ರೂಜ್ ಪ್ರದೇಶದಲ್ಲಿ ಇರುವ ವಕೋಲಾ ಪೊಲೀಸ್ ಠಾಣೆಯಲ್ಲಿ ನೀರು ತುಂಬಿದೆ.
ಪೊಲೀಸ್ ಠಾಣೆ ನೀರಿನಲ್ಲಿ ಮುಳುಗುತ್ತಿರುವ ಹಿನ್ನೆಲೆಯಲ್ಲಿ ಅನೇಕ ಕಡತ(ಫೈಲ್)ಗಳು ನಾಶವಾಗಿವೆ ಎಂದು ನಂಬಲಾಗಿದೆ. ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳು ನೀರಿನೊಂದಿಗೆ ಹೇಗೆ ಹೆಣಗಾಡುತ್ತಿದ್ದಾರೆ ಎಂಬುದನ್ನು ಚಿತ್ರಗಳಲ್ಲಿ ನೋಡಬಹುದು.
ಮುಂಬೈನ ಸಾಂತಾ ಕ್ರೂಜ್ ಪ್ರದೇಶದಲ್ಲಿ ನೆಲೆಗೊಂಡಿರುವ ವಕೋಲಾ ಪೊಲೀಸ್ ಠಾಣೆಯಲ್ಲಿ ನೀರು ತುಂಬಿದ್ದು, ಪೊಲೀಸರೇ ಪರದಾಡುವಂತಾಗಿದೆ. ನೀರು ತೆಗೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದು ಪೊಲೀಸ್ ಠಾಣೆಯ ಉಸ್ತುವಾರಿ ಹೇಳುತ್ತಾರೆ. ಪೊಲೀಸ್ ಠಾಣೆಯಲ್ಲಿ ನೀರಿನ ಒಳನುಸುಳುವಿಕೆಯಿಂದ ಅನೇಕ ಫೈಲ್ಗಳು ಹಾಳಾಗಿರಬಹುದು ಎಂದು ಅವರು ಹೇಳಿದ್ದಾರೆ.
ಮುಂಬೈನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಸ್ತೆ ತುಂಬಾ ನೀರು ತುಂಬಿದ್ದು, ಸಂಚಾರಕ್ಕೆ ತೊಂದರೆ ಉಂಟಾಗಿದೆ. ರೈಲ್ವೆ ಹಳಿಗಳಲ್ಲಿ ನೀರು ತುಂಬಿದ್ದು ಸೆಂಟ್ರಲ್ ಹಾರ್ವರ್ನ ಸ್ಥಳೀಯ ರೈಲು ಮತ್ತು ಪಶ್ಚಿಮ ಮುಂಬೈನ ಮೂರು ಮಾರ್ಗಗಳಲ್ಲಿ ರೈಲುಗಳು ನಿಗದಿತ ಸಮಯಕ್ಕಿಂತ ತಡವಾಗಿ ಚಲಿಸುತ್ತಿವೆ. ಇದಲ್ಲದೆ, ಗೋಚರತೆ ಕಡಿಮೆ ಇರುವುದರಿಂದ, ವಿಮಾನ ಹಾರಾಟದ ಮೇಲೂ ಪರಿಣಾಮ ಬೀರಿದೆ.
ಹವಾಮಾನ ಇಲಾಖೆಯ ಪ್ರಕಾರ ಮುಂಬೈನಲ್ಲಿ ಮುಂದಿನ 48 ಗಂಟೆಗಳ ವರೆಗೆ ಭಾರೀ ಮಳೆಯಾಗುವ ಸಂಭವವಿದೆ. ಈ ಸಂದರ್ಭದಲ್ಲಿ ಜನಸಾಮಾನ್ಯರು ಮನೆಯಿಂದ ಹೊರ ಬರದಂತೆ ಪೊಲೀಸ್ ಇಲಾಖೆ ವತಿಯಿಂದ ಮನವಿ ಮಾಡಲಾಗಿದೆ.