Neem water bath benefits : ಬೇವು ಆಂಟಿಆಕ್ಸಿಡೆಂಟ್ಗಳನ್ನು ಹೊಂದಿದ್ದು ಅದು ದೇಹಕ್ಕೆ ಹಾನಿ ಮಾಡುವ ರಾಡಿಕಲ್ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಬೇವು ಉತ್ತಮ ಆಂಟಿಬ್ಯಾಕ್ಟೀರಿಯಲ್ ಏಜೆಂಟ್ ರೀತಿಯೂ ಸಹ ಕಾರ್ಯನಿರ್ವಹಿಸುತ್ತದೆ. ಆದ್ದರಿಂದಲೇ ಬೇವಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮದ ಸೋಂಕು ಕಡಿಮೆಯಾಗುತ್ತದೆ. ನಿಮ್ಮ ದೇಹವನ್ನು ಆರೋಗ್ಯಕರವಾಗಿಡಲು ಇದು ಸಹಾಯ ಮಾಡುತ್ತದೆ..
ಬೇವಿನ ಮರವು ಹಲವಾರು ಔಷಧೀಯ ಗುಣಗಳಿಗೆ ಹೆಸರುವಾಸಿ. ಇದರ ಎಲೆ, ತೊಗಟೆ, ಹೂವು ಮತ್ತು ಹಣ್ಣು ಪ್ರತಿಯೊಂದೂ ಹಲವಾರು ಗುಣಗಳನ್ನು ಹೊಂದಿದೆ. ಈ ಮರದ ಉತ್ಪನ್ನಗಳನ್ನು ಔಷಧ ತಯಾರಿಕೆಯಲ್ಲಿಯೂ ಸಹ ಬಳಕೆ ಮಾಡಲಾಗುತ್ತದೆ. ಬನ್ನಿ ನಿಮ್ಮ ದೇಹವನ್ನು ಆರೋಗ್ಯಕರವಾಗಿಡಲು ಬೇವಿನ ಎಲೆಗಳನ್ನು ಹೇಗೆ ಬಳಸಬೇಕು ಎಂಬುದನ್ನು ಇಲ್ಲಿ ತಿಳಿಯಿರಿ.
ಬೇವಿನ ಎಲೆಯ ನೀರಿನಲ್ಲಿ ಸ್ನಾನ ಮಾಡುವುದರಿಂದ ಮೊಡವೆ ಸಮಸ್ಯೆಗಳು ನಿವಾರಣೆಯಾಗಿ ಮುಖ ಕಾಂತಿಯುತವಾಗುತ್ತದೆ. ಮೊಡವೆ ಕಲೆಗಳು ಮತ್ತು ಇತರೆ ಯಾವುದೇ ಕಠಿಣ ಕಲೆಗಳನ್ನು ತೊಡೆದುಹಾಕಲು ಇದು ಸಹಾಯ ಮಾಡುತ್ತದೆ. ಬೇವಿನ ಎಲೆಯ ನೀರಿನಿಂದ ನಿಮ್ಮ ಮುಖವನ್ನು ತೊಳೆಯುವುದರಿಂದ ನೈಸರ್ಗಿಕ ಹೊಳಪನ್ನು ನೀಡುತ್ತದೆ.
ಅಲ್ಲದೆ, ಬೇವಿನ ಎಲೆಗಳು ಮುಖದ ಮೇಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ತುಂಬಾ ಪರಿಣಾಮಕಾರಿ. ಈ ಎಲೆಗಳನ್ನು ಪೇಸ್ಟ್ ಮಾಡಿ, ಅದಕ್ಕೆ 2 ಚಮಚ ಮೊಸರನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಂಡರೆ ಕಪ್ಪು ಕಲೆಗಳು ಮಾಯವಾಗುತ್ತವೆ. ನಿಮ್ಮ ಮುಖದಲ್ಲಿರುವ ಕಪ್ಪು ಕಲೆಗಳನ್ನು ಹೋಗಲಾಡಿಸಲು ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ.
ಕಣ್ಣುಗಳಿಗೆ ಪ್ರಯೋಜನಗಳು: ಬೇವಿನ ಎಲೆಯ ನೀರು ಕಣ್ಣಿನಲ್ಲಿ ಯಾವುದೇ ಸೋಂಕು ಅಥವಾ ಉರಿ ಇದ್ದಲ್ಲಿ ಈ ಸಮಸ್ಯೆಗಳನ್ನು ನಿವಾರಿಸುತ್ತದೆ. ಈ ನೀರಿನಲ್ಲಿ ಸ್ನಾನ ಮಾಡಿ ಕಣ್ಣು ತೊಳೆದುಕೊಂಡರೆ ಸೋಂಕು, ಕಣ್ಣು ಕೆಂಪಾಗುವುದು, ಕಣ್ಣು ಊತ ಮುಂತಾದ ಸಮಸ್ಯೆಗಳು ಗುಣವಾಗುತ್ತವೆ.
ತಲೆಹೊಟ್ಟು ಮತ್ತು ಪರೋಪಜೀವಿಗಳ ಬಾಧೆ: ಡ್ಯಾಂಡ್ರಫ್ ಪೀಡಿತರಿಗೂ ಬೇವು ಉಪಯುಕ್ತ. ಬೇವಿನ ನೀರಿನಿಂದ ತಲೆ ಸ್ನಾನ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ವಾರಕ್ಕೊಮ್ಮೆ ಬೇವು ಅಥವಾ ಬೇವಿನ ಎಲೆಯ ನೀರಿನಿಂದ ತಲೆಗೆ ಸ್ನಾನ ಮಾಡುವುದರಿಂದ ಹೇನುಗಳು ನಾಶವಾಗುತ್ತವೆ. ಬೇವಿನ ಎಲೆಯ ನೀರನ್ನು ಬಳಸುವಾಗ ಶಾಂಪೂ ಬಳಸದಿರುವುದು ಉತ್ತಮ.
ಬೆವರು: ಬೇಸಿಗೆಯಲ್ಲಿ, ನೀವು ವಿಪರೀತವಾಗಿ ಬೆವರುತ್ತೀರಿ. ಇದರಿಂದ ದೇಹದಲ್ಲಿ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಬೇವಿನ ಸೊಪ್ಪಿನಿಂದ ಸ್ನಾನ ಮಾಡುವುದು ಒಳ್ಳೆಯದು. ಈ ರೀತಿ ಮಾಡುವುದರಿಂದ ಬೆವರಿನ ದುರ್ವಾಸನೆ ದೂರವಾಗಿ ತ್ವಚೆಯ ರಕ್ಷಣೆಯಾಗುತ್ತದೆ.
ಹುಣ್ಣುಗಳಿಗೆ ಚಿಕಿತ್ಸೆ ನೀಡುತ್ತದೆ: ಗುಳ್ಳೆಗಳು ಮತ್ತು ಹುಣ್ಣುಗಳಿಗೆ ಬೇವಿನ ಎಲೆಯ ನೀರಿನ ಸ್ನಾನ ರಾಮಬಾಣ. ಬೇವು ನೈಸರ್ಗಿಕ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಗಳನ್ನು ಹೊಂದಿದ್ದು, ಇದು ದೇಹದ ಮೇಲಿನ ಗುಳ್ಳೆಗಳು ಮತ್ತು ದದ್ದುಗಳ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ಬೇವಿನ ಎಲೆ ಸ್ನಾನದ ನೀರು ತಯಾರಿಸುವುದು ಹೇಗೆ..? : ಮೊದಲು ಹಸಿರು ಬೇವಿನ ಎಲೆಗಳನ್ನು ತೆಗೆದುಕೊಂಡು ಎಲೆಗಳ ಬಣ್ಣ ಹೋಗುವವರೆಗೂ, ನೀರು ಹಸಿರು ಬಣ್ಣಕ್ಕೆ ಬರುವವರೆಗೆ ಕುದಿಸಿ. ಅದರ ನಂತರ, ಅದನ್ನು ಹತ್ತಿ ಬಟ್ಟೆಯಿಂದ ಚೆನ್ನಾಗಿ ಶೋಧಿಸಿ. ಸ್ನಾನದ ನೀರಿನಲ್ಲಿ ಮಿಶ್ರಣ ಮಾಡಿ. ವಾರದಲ್ಲಿ ಕನಿಷ್ಠ ಎರಡು ಅಥವಾ ಮೂರು ಬಾರಿ ಈ ರೀತಿ ಸ್ನಾನ ಮಾಡಿದರೆ ಉತ್ತಮ.