ಚಾಮರಾಜನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಯಾತ್ರೆಗಳಿಗೂ ಗಡಿಜಿಲ್ಲೆಗೂ ವಿಶೇಷ ಬಾಂಧವ್ಯ ಇದ್ದು, ಅವರ ಪ್ರಮುಖ ಎರಡೂ ಯಾತ್ರೆಗಳು ಚಾಮರಾಜನಗರ ಜಿಲ್ಲೆಯಿಂದಲೇ ಆರಂಭಗೊಂಡಿವೆ.
ಹೌದು.... ಕಳೆದ 2008ರಲ್ಲಿ ‘ಡಿಸ್ಕವರಿ ಇಂಡಿಯಾ’ ಎಂಬ ಯಾತ್ರೆ ಚಾಮರಾಜನಗರದ ಬಿಳಿಗಿರಿ ಬೆಟ್ಟದಿಂದ ಆರಂಭಗೊಂಡಿದ್ದರೇ ‘ಭಾರತ್ ಜೋಡೋ’ ಎಂಬ ಯಾತ್ರೆಯು ಇಂದು ಗುಂಡ್ಲುಪೇಟೆ ಪಟ್ಟಣದ ಮೂಲಕ ರಾಜ್ಯಕ್ಕೆ ಎಂಟ್ರಿ ಕೊಡಲಿದೆ. ‘ರಾಗಾ’ ಅವರ ಪ್ರಮುಖ 2 ಯಾತ್ರೆಗಳು ಗಡಿಜಿಲ್ಲೆ ಚಾಮರಾಜನಗರದಿಂದಲೇ ಆರಂಭಗೊಳ್ಳುತ್ತಿವೆ.
ಇದನ್ನೂ ಓದಿ: "ಸಂವಿಧಾನಕ್ಕೆ ಗೌರವ ಕೊಡದ ಲೂಟಿ ರವಿಯಿಂದ ಕಾಂಗ್ರೆಸ್ ಕಲಿಯಬೇಕಿಲ್ಲ"
‘ಡಿಸ್ಕವರ್ ಇಂಡಿಯಾ’ ಯಾತ್ರೆಯನ್ನು ಬಿಳಿಗಿರಿರಂಗಬೆಟ್ಟದ ಮುತ್ತುಗದಗದ್ದೆ ಪೋಡಿನ ಜಡೇಗೌಡ ಅವರ ಮನೆಯಲ್ಲಿ ಗೆಣಸು, ರೊಟ್ಟಿ ತಿಂದು, ಜೇನು ಸವಿಯುವ ಮೂಲಕ 2008ರ ಮಾ.25ರಂದು ಆರಂಭಿಸಿದ್ದರು. ವಿವೇಕಾನಂದ ಗಿರಿಜನ ಕೇಂದ್ರದಲ್ಲಿ ಆದಿವಾಸಿಗಳ ಜೊತೆಗೆ ಸಂವಾದ ನಡೆಸಿದರು. ಆ ಸಂದರ್ಭದಲ್ಲಿ ಪ್ರಸ್ತಾಪವಾಗಿದ್ದ ಅರಣ್ಯ ಹಕ್ಕು ಕಾಯ್ದೆಯನ್ನು ಕೇಂದ್ರದಲ್ಲಿ ಯುಪಿಎ ಸರ್ಕಾರ ಜಾರಿಗೆ ಬಂದ ನಂತರ ಆದಿವಾಸಿಗಳಿಗೆ ಅನುಕೂಲವಾಗುವಂತೆ ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದ್ದರು.
ಜನತಾ ಪರಿವಾರದ ನೆಲೆಯಾಗಿದ್ದ ಈ ಜಿಲ್ಲೆಯಲ್ಲಿ ರಾಹುಲ್ ‘ಡಿಸ್ಕವರಿ ಇಂಡಿಯಾ’ದ ಪರಿಣಾಮ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8ಕ್ಕೆ 8 ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸುವುದರ ಜೊತೆಗೆ ಲೋಕಸಭಾ ಚುನಾವಣೆಯಲ್ಲೂ ‘ಕೈ’ಪಕ್ಷ ಹಲವು ದಶಕಗಳ ಬಳಿಕ ಖಾತೆ ತೆರೆದಿತ್ತು. ಆದರೆ ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯ ಕೆಲವು ಕ್ಷೇತ್ರದಲ್ಲಿ ‘ಕಮಲ ‘ಅರಳಿದೆ. ಮತ್ತೇ ಕಾಂಗ್ರೆಸ್ ಇಲ್ಲಿ ನೆಲೆ ಕಾಣಲು ಹಾತೊರೆಯುತ್ತಿದೆ. ಹೀಗಾಗಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ ಆರಂಭವಾಗಲಿರುವ ರಾಹುಲ್ ಗಾಂಧಿಯವರ ನೇತೃತ್ವದ ‘ಭಾರತ್ ಜೋಡೋ’ ಯಾತ್ರೆ ಎಷ್ಟರ ಮಟ್ಟಿಗೆ ಪಕ್ಷಕ್ಕೆ ಚೈತನ್ಯ ತುಂಬುತ್ತದೆ ಎಂಬ ಲೆಕ್ಕಚಾರ ಆರಂಭವಾಗಿದೆ.
ಇದನ್ನೂ ಓದಿ: ಧಾರಾಕಾರ ಮಳೆ, ಜಲ ದಿಗ್ಬಂಧನಗೊಂಡ ಯಲ್ಲಮ್ಮವಾಡಿ ಯಲ್ಲಮ್ಮ ದೇವಸ್ಥಾನ
ಇಂದು ಸೋಲಿಗರ ಜೊತೆ ಸಂವಾದ: ‘ಭಾರತ್ ಜೋಡೋ’ ಯಾತ್ರೆ ವೇಳೆಯೂ ಆದಿವಾಸಿಗಳ ಜೊತೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಗುಂಡ್ಲುಪೇಟೆ ಪಟ್ಟಣದ ಹೊರವಲಯದಲ್ಲಿ ಸೋಲಿಗರು ಹಾಗೂ ಆಮ್ಲಜನಕ ದುರಂತದ ಸಂತ್ರಸ್ಥರ ಜೊತೆ ರಾಹುಲ್ ಗಾಂಧಿ ಶುಕ್ರವಾರ ಸಂವಾದ ನಡೆಸಲಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.