ಬೆಂಗಳೂರು: ಕನ್ನಡಿಗರ ಒತ್ತಡಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಈಗ ಏಷ್ಯಾದ ಅತಿ ದೊಡ್ಡ ವಿಮಾನ ಪ್ರದರ್ಶನವನ್ನು ಬೆಂಗಳೂರಿನಲ್ಲೇ ನಡೆಸಲು ತಿರ್ಮಾನಿಸಿದೆ.
ಈ ಕುರಿತಾಗಿ ಪ್ರಕಟನೆ ಹೊರಡಿಸಿರುವ ಸರ್ಕಾರ " ಸರ್ಕಾರ ಏರೋ ಇಂಡಿಯಾ 2019ರ ಕಾರ್ಯಕ್ರಮವನ್ನು ಫೆಬ್ರುವರಿ 20ರಿಂದ 24ರವರೆಗೆ ಬೆಂಗಳೂರಿನಲ್ಲೆ ನಡೆಸಲು ತಿರ್ಮಾನಿಸಿದೆ.ಈ ಐದು ದಿನಗಳ ಈ ಏರ್ ಷೋ ಕಾರ್ಯಕ್ರಮವು ರಕ್ಷಣೆ ಮತ್ತು ವಿಮಾನಕ್ಕೆ ಸಂಬಂಧಿಸಿದ ಪ್ರದರ್ಶನವನ್ನು ಒಳಗೊಂಡಿರುತ್ತದೆ" ಎಂದು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ತಿಂಗಳು ಉತ್ತರ ಪ್ರದೇಶದ ಲಕ್ನೋಗೆ ಈ ಏರ್ ಷೋ ಶಿಫ್ಟ್ ಆಗಲಿದೆ ಎನ್ನುವ ಊಹಾಪೋಹ ಹಬ್ಬಿಕೊಂಡಿತ್ತು .ಇದಕ್ಕೆ ಪೂರಕವೆನ್ನುವಂತೆ ಯೋಗಿ ಸರ್ಕಾರವು ಸಹಿತ ಯುಪಿಯಲ್ಲಿ ನಡೆಸಲು ರಕ್ಷಣಾ ಮಂತ್ರಿ ನಿರ್ಮಲಾ ಸಿತಾರಾಮನ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದರು.
ಆದರೆ ಪ್ರತಿ ವರ್ಷ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಈ ಏರ್ ಷೋವನ್ನು ಬೇರೆಡೆ ಸ್ಥಳಾಂತರಿಸುವುದಕ್ಕೆ ಕರ್ನಾಟಕದಿಂದ ಭಾರಿ ವಿರೋಧ ವ್ಯಕ್ತವಾಗಿತ್ತು.ಈ ಹಿನ್ನಲೆಯಲ್ಲಿ ಈಗ ಕನ್ನಡಿಗರ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಈಗ ಏರ್ ಷೋವನ್ನು ಬೆಂಗಳೂರಿನಲ್ಲೇ ನಡೆಸಲು ತಿರ್ಮಾನಿಸಿದೆ.