ಬೆಂಗಳೂರು: ರಾಜ್ಯದ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅತಿಹೆಚ್ಚಿನ ಅನುದಾನ ಬಿಡುಗಡೆಗೊಳಿಸಿದೆ. ಇದಲ್ಲದೆ ಹೆಚ್ಚುವರಿ 142.59 ಕೋಟಿ ರೂ. ಅನುದಾನ ಒದಗಿಸಿ ಆದೇಶ ಹೊರಡಿಸಲಾಗಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು, ರಾಜ್ಯದಲ್ಲಿರುವ ವಿವಿಧ ಸಮುದಾಯಗಳ 178 ಮಠಗಳಿಗೆ 108.24 ಕೋಟಿ ರೂ., 59 ದೇವಸ್ಥಾನಗಳಿಗೆ 21.35 ಕೋಟಿ ರೂ. ಮತ್ತು 26 ವಿವಿಧ ಸಂಘ-ಸಂಸ್ಥೆಗಳು ಹಾಗೂ ಟ್ರಸ್ಟ್‌ಗಳಿಗೆ 13 ಕೋಟಿ ರೂ. ಹೀಗೆ ಒಟ್ಟು 142.59 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಾಕ್ಷ್ಯಾಧಾರ ಇದ್ದರೆ PFI, SDPI ಸಂಘಟನೆಗಳನ್ನು ನಿಷೇಧಿಸಲಿ: ಸಿದ್ದರಾಮಯ್ಯ
ನಮ್ಮ ಸರ್ಕಾರ ರಾಜ್ಯದಲ್ಲಿನ ವಿವಿಧ ದೇವಸ್ಥಾನಗಳು, ಮಠಗಳು ಹಾಗೂ ಹೊರ ರಾಜ್ಯಗಳಲ್ಲಿರುವ ಕರ್ನಾಟಕ ಛತ್ರಗಳ ಅಭಿವೃದ್ಧಿಗಾಗಿ ಕಳೆದ 10 ವರ್ಷಗಳಲ್ಲೇ ಅತಿಹೆಚ್ಚು ಅನುದಾನ ನೀಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಹೊರ ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳಗಳಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕರ್ನಾಟಕ ಛತ್ರಗಳ ನಿರ್ಮಾಣ ಹಾಗೂ ಅಭಿವೃದ್ಧಿಗೂ ವಿಶೇಷ ಆದ್ಯತೆ ನೀಡಲಾಗಿದೆ. 1 ವರ್ಷದ ಅವಧಿಯಲ್ಲಿ ರಾಜ್ಯವನ್ನು ದೇಶದಲ್ಲೇ ಪ್ರಮುಖ ಧಾರ್ಮಿಕ ಶ್ರದ್ಧಾಕೇಂದ್ರವನ್ನಾಗಿಸುವತ್ತ ಸ್ಪಷ್ಟವಾದ ಹೆಜ್ಜೆ ಇಡಲಾಗಿದೆ. ರಾಜ್ಯದ ಮುಜರಾಯಿ ಇಲಾಖೆಯ ಇತಿಹಾಸದಲ್ಲೇ ಬೃಹತ್ ಅಭಿವೃದ್ಧಿ ಪರ್ವದ ಮೈಲಿಗಲ್ಲನ್ನು ಸ್ಥಾಪಿಸಲಾಗಿದೆ. ಕಾಶಿ ಯಾತ್ರೆ, ತಸ್ತೀಕ್ ಹಣ ಹೆಚ್ಚಳ ಸೇರಿದಂತೆ ಎಲ್ಲಾ ರೀತಿಯ ನೂತನ ಯೋಜನೆಗಳಿಗೂ ಮುಖ್ಯಮಂತ್ರಿಗಳು ಉತ್ತಮ ಸಹಕಾರ ನೀಡಿದ್ದಾರೆ ಎಂದು ಹೇಳಿದ್ದಾರೆ.
ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಕಳೆದ ಹಲವಾರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಅತಿಹೆಚ್ಚು ಅನುದಾನ ನೀಡುವ ಮೂಲಕ ಎಲ್ಲ ಸಮುದಾಯದ ಧಾರ್ಮಿಕ ಭಾವನೆಗಳಿಗೂ ಆದ್ಯತೆ ನೀಡಿದ್ದಾರೆ. ರಾಜ್ಯದ ಮುಜರಾಯಿ ಇಲಾಖೆಗೆ ಹೆಚ್ಚಿನ ಮಹತ್ವ ನೀಡುವ ಮೂಲಕ ಉತ್ತಮ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಅತಿಹೆಚ್ಚು ಅನುದಾನ ನೀಡುವ ಮೂಲಕ ಇಲಾಖೆಯ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡುತ್ತಿರುವುದಕ್ಕೆ ನಾನು ಸಿಎಂಗೆ ಅಭಿನಂದನೆ ಸಲ್ಲಿಸಿದ್ದೇನೆಂದು ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಚಾಕು ಇರಿತ ಪ್ರಕರಣ: ದುಷ್ಟ ಶಕ್ತಿಗಳ ಮಟ್ಟ ಹಾಕಲಾಗಿದೆ ಎಂದ ಬಿಜೆಪಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.